ನ್ಯೂಸ್

ಬಜೆಟ್ ಪರ್ವ ಎಂಟು ತಿಂಗಳೊಳಗೆ ಅನುಷ್ಠಾನ ಸವಾಲು: ಪ್ರಸ್ತಾಪಿತ ಯೋಜನೆಗಳನ್ನು ಸಾಧಿಸುವ ಗುರಿ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಪ್ರಸಕ್ತ ಆರ್ಥಿಕ ವರ್ಷದ ಪರಿಷ್ಕೃತ ಬಜೆಟ್ ಪರ್ವ ಮಂಗಳವಾರ ಶುರುವಾಗಿದೆ. ಮುಂದಿನ ಎಂಟು ತಿಂಗಳೊಳಗೆ ಬಜೆಟ್​ನಲ್ಲಿ ಪ್ರಸ್ತಾಪಿತ ಯೋಜನೆ, ಗುರಿಗಳನ್ನು ಸಾಧಿಸಬೇಕಾದ ಸವಾಲಿದೆ.

ಜನಸಾಮಾನ್ಯರಿಗೆ ಕನಿಷ್ಠ ಆದಾಯ ಪರಿಕಲ್ಪನೆಯ ಗ್ಯಾರಂಟಿಗಳು ಒಳಗೊಂಡ, ಜನರ ಕೈಗೆ ದುಡ್ಡು, ದುಡಿಮೆ, ಬಂಡವಾಳ ಆಕರ್ಷಣೆ, ಹಸಿವು ಮುಕ್ತ ರಾಜ್ಯದ ಸಂಕಲ್ಪವೇ ಸಿದ್ದರಾಮಯ್ಯ 14ನೇ ಆಯವ್ಯಯದ ತಿರುಳು.

ಬಿಜೆಪಿ ಸರ್ಕಾರದ ಕೊನೆಯ ಅವಧಿಯಲ್ಲಿ ಬಸವರಾಜ ಬೊಮ್ಮಾಯಿ ಬಜೆಟ್ ಮಂಡಿಸಿದ್ದರು. ನಂತರ ಚುನಾವಣೆ ಘೋಷಿಸಿದ್ದರಿಂದ ಧನವಿನಿಯೋಗ ಕಾಯ್ದೆಯನ್ವಯ ಲೇಖಾನುದಾನದಲ್ಲಿ ನಾಲ್ಕು ತಿಂಗಳ ಖರ್ಚು, ವೆಚ್ಚಗಳನ್ನು ನಿರ್ವಹಿಸಲಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಸಿದ್ದರಾಮಯ್ಯ ಜು.7ರಂದು 2023-24ನೇ ಸಾಲಿನ ಪರಿಷ್ಕೃತ 3.27 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ದಾರೆ. ಚುನಾವಣೆ ಪೂರ್ವದ ಬಜೆಟ್​ಗೆ ಹೋಲಿಸಿದರೆ ಮುಂಗಡಪತ್ರದ ಗಾತ್ರ 18 ಸಾವಿರ ಕೋಟಿ ರೂ.ಗಳಷ್ಟು ಹಿಗ್ಗಿದೆ.

ದುಬಾರಿ ದುನಿಯಾ: ಅಬಕಾರಿ 36 ಸಾವಿರ ಕೋಟಿ ರೂ., ನೋಂದಣಿ ಮತ್ತು ಮುದ್ರಾಂಕ 25 ಸಾವಿರ ಕೋಟಿ ರೂ., ಸಾರಿಗೆ 11 ಸಾವಿರ ಕೋಟಿ ರೂ., ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಒಂಬತ್ತು ಸಾವಿರ ಕೋಟಿ ರೂ. ಪರಿಷ್ಕೃತ ರಾಜಸ್ವ ಸಂಗ್ರಹ ಗುರಿ ನಿಗದಿಯಾಗಿದೆ. ಇದರಿಂದಾಗಿ ಜು.20ರಿಂದಲೇ ಮದ್ಯದ ದರ ಏರಿಕೆಯಾಗಿದೆ. ಶಾಲೆ-ಕಾಲೇಜು, ಸರಕು ಸಾಗಣೆ ವಾಹನಗಳ ರಸ್ತೆ ತೆರಿಗೆ ಏರಿಸಲಾಗಿದೆ. ಎತ್ತರ ಕಟ್ಟಡ ನಿರ್ವಣಕ್ಕೆ ಶುಲ್ಕ, ಜಲ್ಲಿಕಲ್ಲು ಮತ್ತು ಮರಳು ದರ ದುಬಾರಿಯಾಗಿದೆ. ವಾಸ್ತವಿಕ ಮಾರುಕಟ್ಟೆ ಮೌಲ್ಯ, ಮಾರ್ಗಸೂಚಿ ದರ ಆಧರಿಸಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಏರಿಕೆಯಾಗಲಿದೆ. ಬಜೆಟ್​ನಲ್ಲಿ ಘೋಷಿಸಿದ್ದರೂ ಸಂಬಂಧಿತ ಆದೇಶ ಇನ್ನಷ್ಟೇ ಹೊರ ಬೀಳಬೇಕಾಗಿದೆ.

ಅನುದಾನ ಕಡಿತ: ಕೃಷಿ, ಶಿಕ್ಷಣ, ಆರೋಗ್ಯ ಮತ್ತು ನೀರಾವರಿ ಯೋಜನೆಗಳಿಗೆ ಅನುದಾನ ಕಡಿತ ಮಾಡಲಾಗಿದೆ. ಸಿಎಂ ರೈತ ವಿದ್ಯಾನಿಧಿ, ಕಿಸಾನ್ ಸಮ್ಮಾನ್ ನಿಧಿಗೆ ರಾಜ್ಯದ ಪಾಲು, ರೈತಶಕ್ತಿ, ಯುವ ಸಂಘ-ಸಂಸ್ಥೆಗಳಿಗೆ ನೆರವಿನ ಪ್ರಸ್ತಾಪ ಕೈಬಿಡಲಾಗಿದೆ. ಕೇಂದ್ರ ಪುರಸ್ಕೃತ ಯೋಜನೆಗಳಡಿ ಲಭ್ಯ ಅನುದಾನದಲ್ಲಿ ಕಡಿತ ಸರಿದೂಗಿಸಲು ಸರ್ಕಾರ ಆಲೋಚಿಸಿದೆ. ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಉಪ ಯೋಜನೆಯಡಿ 34,294 ಕೋಟಿ ರೂ.ಒದಗಿಸಿದ್ದು, ಅಷ್ಟೇ ಮೊತ್ತದ ಕ್ರಿಯಾ ಯೋಜನೆಗೆ ಸಮ್ಮತಿಸಲಾಗಿದೆ. ಆದರೆ ನಿಗದಿತ ಮೊತ್ತದಲ್ಲಿ 11 ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿಗಳಿಗೆ ಹಂಚಿಕೆ ಮಾಡಿದ್ದು, ವಾಸ್ತವಿಕ ಮೊತ್ತ 23 ಸಾವಿರ ಕೋಟಿ ರೂ.ಗಳಿಗೆ ಇಳಿಯಲಿದೆ.

ಹೊಸ ಯೋಜನೆಗಳು

  • ಇಂದಿರಾ ಕ್ಯಾಂಟೀನ್ ಮರು ಆರಂಭ. ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲದ ಮೊತ್ತ ಐದು ಲಕ್ಷ ರೂ.ಗೆ ಏರಿಕೆ. ಎಸ್​ಸಿ, ಎಸ್​ಟಿ ಸಮುದಾಯದ ಗುತ್ತಿಗೆದಾರರಿಗೆ ಒಂದು ಕೋಟಿ ರೂ.ವರೆಗೆ ಕಾಮಗಾರಿ ಗುತ್ತಿಗೆ.
  • ಕೃಷಿ ಉದ್ಯಮಗಳಿಗೆ ನಾವೀನ್ಯತೆ ಪ್ರೋತ್ಸಾಹಿಸಲು ‘ನವೋದ್ಯಮ’, ಮಹಿಳಾ ಸಬಲೀಕರಣ ಮತ್ತು ಕ್ಷೇಮಾಭಿವೃದ್ಧಿ ಸಂಬಂಧಿತ ಯೋಜನೆಗಳಿಗೆ 72 ಸಾವಿರ ಕೋಟಿ ರೂ. ಮೀಸಲು.
  • ಬಜೆಟ್​ನಲ್ಲಿ ಘೋಷಿಸಿದ ಹಾಗೆ ಪಠ್ಯಪುಸ್ತಕಗಳನ್ನು ಪರಿಷ್ಕರಿಸಲಾಗಿದೆ. ಆಯ್ದ ಪಠ್ಯಗಳನ್ನು ಕೈಬಿಟ್ಟು, ಹೊಸಪಠ್ಯಗಳನ್ನು ಸೇರಿಸಿ ಎಲ್ಲ ಶಾಲೆಗಳಿಗೆ ತಲುಪಿಸುವ ವ್ಯವಸ್ಥೆಯಾಗಿದೆ.
  • ಒಂದೂವರೆ ಲಕ್ಷ ವಿದ್ಯಾರ್ಥಿಗಳನ್ನು ಪ್ರೌಢ ಹಂತದ ಶಿಕ್ಷಣಕ್ಕೆ ಸಜ್ಜುಗೊಳಿಸಲು ‘ಮರು ಸಿಂಚನ’ ತರಬೇತಿ.
  • ಶೋಷಿತ ಸಮುದಾಯಗಳಿಗೆ ಮೀಸಲಿಟ್ಟ ಅವರ ಏಳಿಗೆಗೆ ಬಳಸಲೆಂದು ಎಸ್​ಸಿಪಿ, ಟಿಎಸ್​ಪಿ ಕಾಯ್ದೆ 7ಡಿ ಸೆಕ್ಷನ್ ರದ್ದು, ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ತಂದು ದಲಿತರ ಭೂಮಿ ದಲಿತರ ಬಳಿಯೇ ಉಳಿಸಲು ಕ್ರಮ.
  • ಇ-ಕಾಮರ್ಸ್ ಸಂಸ್ಥೆಗಳ ಪೂರ್ಣ, ಅರೆಕಾಲಿಕ ಉದ್ಯೋಗಿ ಗಳಿಗೆ ನಾಲ್ಕು ಲಕ್ಷ ರೂ.ಗಳ ಜೀವವಿಮೆ ಹಾಗೂ ಅಪಘಾತ ವಿಮಾ ಸೌಲಭ್ಯ.
  • ನಾಲ್ಕು ಸಾವಿರ ಗ್ರಾ.ಪಂ.ಗಳಲ್ಲಿ ‘ಕೂಸಿನ ಮನೆ’ ಹೆಸರಿನಲ್ಲಿ ಶಿಶುಪಾಲನಾ ಕೇಂದ್ರ ಪ್ರಾರಂಭ. ನಗರ ಪ್ರದೇಶದ ಮೂಲ ಸೌಲಭ್ಯಗಳ ಅಭಿವೃದ್ಧಿಗೆ ಗ್ರೀನ್ ಬಾಂಡ್​ಗಳ ಮೂಲಕ ಒಂದು ಸಾವಿರ ಕೋಟಿ ರೂ. ಸಂಗ್ರಹ
  • ನವೋದ್ಯಮಕ್ಕೆ ಉತ್ತೇಜಿಸಲು ವಿಶ್ವದರ್ಜೆಯ ಪರಿಪೋಷಣ ಕೇಂದ್ರ ‘ಇನ್ನೋವರ್ಸ್’ ಸ್ಥಾಪನೆಗೆ 10 ಕೋಟಿ ರೂ. ಅನುದಾನ.
  • ಹೊಸದಾಗಿ ಆರು ಸಂಚಾರಿ, ಐದು ಮಹಿಳಾ ಪೊಲೀಸ್ ಠಾಣೆಗಳ ಆರಂಭ. ಎರಡು ಹಂತದಲ್ಲಿ 2,454 ಹುದ್ದೆಗಳ ಸೃಜನೆ. ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಖಾಲಿಯಿರುವ 1.50 ಲಕ್ಷ ಹುದ್ದೆಗಳು ಹಂತ ಹಂತವಾಗಿ ಭರ್ತಿ.

ಐದು ಗ್ಯಾರಂಟಿ ಲೆಕ್ಕಾಚಾರ

ಐದು ಗ್ಯಾರಂಟಿಗಳ ಪೈಕಿ ನಾಲ್ಕು ಅನುಷ್ಠಾನಕ್ಕೆ ಬಂದಿವೆ. ಐದು ಯೋಜನೆಗಳ ವೆಚ್ಚದ ಗಾತ್ರ 52 ಸಾವಿರ ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ. ಆದರೆ ಪ್ರಸಕ್ತ ಆರ್ಥಿಕ ವರ್ಷದ ಮೂರು ತಿಂಗಳು ಕಳೆದುಹೋಗಿವೆ. ಐದು ಗ್ಯಾರಂಟಿಗಳಿಗೆ ಪ್ರಸ್ತುತ ವರ್ಷಕ್ಕೆ 35,410 ಕೋಟಿ ರೂ. ವೆಚ್ಚದ ಅಂದಾಜಿದೆ. ವಿವಿಧ ಇಲಾಖೆಗಳ ತೆರಿಗೆ ಸಂಪನ್ಮೂಲ ಕ್ರೋಡೀಕರಣ ಗುರಿ ಹೆಚ್ಚಳ, ಕೆಲವೊಂದು ತೆರಿಗೆ ಏರಿಕೆ ಜತೆಗೆ ಸಾಲ ರೂಪದಲ್ಲಿ ಈ ವೆಚ್ಚ ಭರಿಸುವ ಲೆಕ್ಕಾಚಾರವನ್ನು ಸಿದ್ದರಾಮಯ್ಯ ರಾಜ್ಯದ ಜನರ ಮುಂದಿಟ್ಟಿದ್ದಾರೆ.