ನ್ಯೂಸ್

ಲಹರಿ ಮೂಡ್​ನಲ್ಲಿ ಬಿಎಸ್​ವೈ; ಲಕ್ಷ್ಮಣ್​ ಸವದಿಗೆ ಕಾದಿದೆಯಾ ಆಪತ್ತು?

ಬೆಂಗಳೂರು: ಕರೊನಾ ಬಂದ ನಂತರ ಸಾಕಷ್ಟು ಕಷ್ಟಗಳನ್ನು ಎದುರಿಸಿರುವ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರು ಶನಿವಾರದಂದು ಲಹರಿ ಮೂಡ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಜಿಲ್ಲಾ ಆಡಳಿತಗಳೊಂದಿಗೆ ವಿಡಿಯೋ ಸಂವಾದದ ಬಳಿಕ ಸುದ್ದಿಗಾರರ ಜತೆ ಮಾತನಾಡಿ ಹೊರಡುವಾಗ ಸಚಿವ ಆರ್ ಅಶೋಕ್ ಜತೆ ಮಾಡಿರುವ ಸಂಭಾಷಣೆ ಇದೀಗ ಚರ್ಚೆಯಾಗುತ್ತಿದೆ.

ಸಿಎಂ ಯಡಿಯೂರಪ್ಪ, ಲಕ್ಷ್ಮಣ್ ಸವದಿ, ಅಶೋಕ್ ಸೇರಿ ಅನೇಕರು ವಿಡಿಯೋ ಸಂವಾದದಲ್ಲಿ ಭಾಗವಹಿಸಿದ್ದರು. ಸಂವಾದ ಮುಗಿಸಿ ಅಶೋಕ್​ ಅವರು ಹೊರಟಾಗ ಅವರೊಂದಿಗೆ ಮಾತಿಗಿಳಿದ ಬಿಎಸ್​ವೈ, "ಅಶೋಕ್ ಎಲ್ಲಿ ಹೋಗ್ತಾ ಇದ್ದೀಯಾ" ಎಂದು ಕೇಳಿದ್ದಾರೆ. ಅದಕ್ಕೆ ಅಶೋಕ್ ಅವರು ಸರ್, ನಾನು ಲಾಯರ್​ನ ನೋಡಬೇಕು, ಮನೆಗೆ ಹೋಗ್ತೀನಿ ಅಂದಿದ್ದಾರೆ. ಅದಕ್ಕೆ ಸಿಎಂ ಅವರು, "ಏನು.. ನಿನ್‌ಮೇಲೆ ಕೇಸ್ ಹಾಕಿದ್ದಾರಾ..!?" ಎಂದು ನಗುತ್ತಾ ಪ್ರಶ್ನಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಅಶೋಕ್​ ಅವರು, "ಲಕ್ಷ್ಮಣ ಸವದಿ ಮೇಲೆ ಕೇಸ್ ಹಾಕಬೇಕು, ದಾರಿ ತಪ್ಪುತ್ತಿದ್ದಾರೆ" ಎಂದು ಪ್ರತಿಕ್ರಿಯಿಸಿದ್ದಾರೆ. ಆಗ ಯಡಿಯೂರಪ್ಪ ಅವರು "ನಿನ್ನ ಸ್ನೇಹಿತನ ರಕ್ಷಣೆ ಮಾಡೋದು ನಿನ್ನ ಕೆಲಸ ಅಲ್ವಾ..!? ಮಾಡು" ಎಂದು‌ ನಗೆ ಚಟಾಕಿ ಹಾರಿಸಿದ್ದಾರೆ.

ಈ ಸಮಯದಲ್ಲಿ ಯಡಿಯೂರಪ್ಪ, ಅಶೋಕ್​ ಹಾಗೂ ಲಕ್ಷ್ಮಣ್ ಸವದಿ ಮೂವರು ನಕ್ಕಿದ್ದಾರೆ. ಈ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ಆರಂಭವಾಗಿದೆ. ಸಿಎಂ ಬಿಎಸ್​ವೈ ನಗೆ ಚಟಾಕಿ ಹಾರಿಸುತ್ತಲೇ ಸವದಿ ಕಾಲೆಳೆದರೆ? ಎಂಬುದು ಚರ್ಚೆಗೆ ಗ್ರಾಸವಾಗಿದೆ.