ನ್ಯೂಸ್

ತಂಗಿ ಫೋನ್​ ಬಳಸ್ತಾಳೆ ಎನ್ನುವ ಕಾರಣಕ್ಕೆ ಕುಡಗೋಲಿನಿಂದ ಕೊಚ್ಚಿ ಕೊಂದ ಅಣ್ಣ!

Mandara

ಚೆನ್ನೈ: ಒಡಹುಟ್ಟಿದ ತಂಗಿ ಅತಿಯಾಗಿ ಫೋನ್ ಬಳಸುತ್ತಾಳೆ ಎನ್ನುವ ಒಂದೇ ಕಾರಣಕ್ಕೆ ಅಣ್ಣನೊಬ್ಬ ತಂಗಿಯನ್ನೇ ಕುಡಗೋಲಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ತಮಿಳುನಾಡಿನ ತೂತುಕುಡಿಯ ವಾಸವಪ್ಪುರಂ ಗ್ರಾಮದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಕವಿತಾ (17) ಮೃತ ದುರ್ದೈವಿ. ಆಕೆಯ ಅಣ್ಣ ಮಲೈರಾಜ(20) ಕೊಲೆ ಮಾಡಿದ್ದು ಇದೀಗ ಪೊಲೀಸರ ವಶದಲ್ಲಿದ್ದಾನೆ.

ಕವಿತಾ ಕಳೆದ ಕೆಲ ತಿಂಗಳುಗಳಿಂದ ಮಲೈರಾಜನ ಫೋನ್​ ಬಳಸುತ್ತಿದ್ದಳಂತೆ. ಫೇಸ್​ಬುಕ್, ವಾಟ್ಸ್ಆ್ಯಪ್, ಗೇಮ್ಸ್​ ಎಂದುಕೊಂಡು ಕಾಲ ಕಳೆಯುತ್ತಿದ್ದಳಂತೆ. ರಾತ್ರಿ ಹೊತ್ತೂ ಫೋನ್​ ಹಿಡಿದೇ ಇರುತ್ತಿದ್ದರಿಂದ ಸಿಟ್ಟಾಗುತ್ತಿದ್ದ ಮಲೈರಾಜ ಹಲವು ಬಾರಿ ಈ ವಿಚಾರದಲ್ಲಿ ಆಕೆಗೆ ಬೈದಿದ್ದನಂತೆ. ಆದರೆ ಅದಕ್ಕೆ ತಲೆ ಕೆಡಿಸಿಕೊಳ್ಳದ ಆಕೆ ಫೋನ್ ಬಳಕೆ ಮುಂದುವರಿಸಿದ್ದಳು. ನಿನ್ನೆ ಕೂಡ ಇದೇ ರೀತಿ ಆಕೆ ಫೋನ್​ ಹಿಡಿದು ಕುಳಿತಿದ್ದ ಕಾರಣಕ್ಕೆ ಅಣ್ಣ ತಂಗಿಯ ನಡುವೆ ಜಗಳವಾಗಿದೆ. ಸಿಟ್ಟಿಗೆದ್ದ ಅಣ್ಣ ಮನೆಯಲ್ಲಿದ್ದ ಕುಡಗೋಲಿನಿಂದ ತಂಗಿಗೆ ಹೊಡೆದಿದ್ದಾನೆ. ಅಧಿಕ ರಕ್ತಸ್ರಾವವಾದ ಹಿನ್ನೆಲೆಯಲ್ಲಿ ಆಕೆ ಸಾವನ್ನಪ್ಪಿದ್ದಾಳೆ.

ಈ ಸಂಬಂಧ ಮುರಪ್ಪನಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. (ಏಜೆನ್ಸೀಸ್)