ನ್ಯೂಸ್

ಸಾಮಾಜಿಕ ಜಾಲತಾಣದಲ್ಲಿ ಸಹೋದರಿ ಸದಾ ಬಿಜಿ: ಸಹೋದರನಿಂದ ಹರಿಯಿತು ನೆತ್ತರು

ಕೋತಗುಡೆಮ್​: ಯಾವಾಗಲೂ ಸಾಮಾಜಿಕ ಜಾಲತಾಣದಲ್ಲಿ ಬಿಜಿಯಾಗಿರುತ್ತಿದ್ದ ಸಹೋದರಿಯ ಮೇಲೆ ಅಸಮಾಧಾನ ಹೊಂದಿದ್ದ ಸಹೋದರ ಕೊನೆಗೂ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಆತಂಕಕಾರಿ ಘಟನೆ ತೆಲಂಗಾಣದ ಕೋತಗುಡೆಮ್​ನಲ್ಲಿ ಸೋಮವಾರ ನಡೆದಿದೆ.

ಅಜ್ಮೀರಾ ಸಿಂಧು (21) ಅಲಿಯಾಸ್​ ಸಾಂಘವಿ ಕೊಲೆಯಾದ ಸಹೋದರಿ. ಭದ್ರಾದ್ರಿ ಕೋತಗುಡೆಮ್​ ಜಿಲ್ಲೆಯ ಯೆಲ್ಲಂದು ಮಂಡಲದ ರಾಜೀವನಗರದಲ್ಲಿ ಘಟನೆ ನಡೆದಿದೆ.

ಪೊಲೀಸ್​ ಮೂಲಗಳ ಪ್ರಕಾರ ಕೊಲೆಯಾದ ಸಿಂಧು, ಮಹಾಬೂಬಬಾದ್​ನ ತೆಲಂಗಾಣ ಆರೋಗ್ಯ ಇಲಾಖೆಯಲ್ಲಿ ಸಹಾಯಕ ನರ್ಸ್​ ಕೆಲಸ ಮಾಡುತ್ತಿದ್ದಳು. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಬಿಜಿಯಾಗಿರುತ್ತಿದ್ದಳು. ಆಗಾಗ ಯೂಟ್ಯೂಬ್​ಗೆ ರೀಲ್ಸ್​ ಪೋಸ್ಟ್​ ಮಾಡುತ್ತಿದ್ದರು. ಆದರೆ, ಇದು ಆಕೆಯ ಸಹೋದರ ಹರಿಲಾಲ್​ಗೆ ಸ್ವಲ್ಪವೂ ಇಷ್ಟವಿರಲಿಲ್ಲ. ಇದೇ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಜಗಳವೂ ನಡೆಯುತ್ತಿತ್ತು.

ಪೊಲೀಸರ ಪ್ರಕಾರ ಸೋಮವಾರ ರಾತ್ರಿಯೂ ಇದೇ ವಿಚಾರಕ್ಕೆ ಸಿಂಧು ಮತ್ತು ಹರಿಲಾಲ್​ ನಡುವೆ ಜಗಳ ನಡೆದಿದೆ. ಇಬ್ಬರ ನಡುವಿನ ವಾಗ್ವಾದ ವಿಕೋಪಕ್ಕೆ ತಿರುಗಿದಾಗ ತಾಳ್ಮೆ ಕಳೆದುಕೊಂಡ ಹರಿಲಾಲ್​, ಬಲವಾದ ವಸ್ತುವಿನಿಂದ ಸಿಂಧು ತಲೆಗೆ ಹೊಡೆದಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡ ಸಿಂಧುಳನ್ನು ತಕ್ಷಣವೇ ಖಮ್ಮಮ್ ಆಸ್ಪತ್ರೆಗೆ ಕರೆದೊಯ್ದರು ಅಲ್ಲಿಂದ ವೈದ್ಯರು ಅವಳನ್ನು ವಾರಂಗಲ್‌ನ ಆಸ್ಪತ್ರೆಗೆ ಕಳುಹಿಸಿದರು. ಆದರೆ, ಸಿಂಧು ಮಾರ್ಗಮಧ್ಯೆಯೇ ಅಸುನೀಗಿದಳು.

ಸಾವಿನ ನಂತರವೂ ಸಿಂಧು ಅವರ ಕುಟುಂಬ ಸಾವನ್ನು ಮುಚ್ಚಿ ಹಾಕಲು ಪ್ರಯತ್ನಿಸಿದರು. ಮಂಗಳವಾರ ಬೆಳಗ್ಗೆ ಸಿಂಧು ಅವರದ್ದು ಸಹಜ ಸಾವು ಎಂದು ಬಿಂಬಿಸಿದ ಕುಟುಂಬಸ್ಥರು ತರಾತುರಿಯಲ್ಲಿ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡುತ್ತಿದ್ದಂತೆ ಅನುಮಾನಗೊಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ಪೊಲೀಸರು ನಡೆಸಿದ ತನಿಖೆಯಲ್ಲಿ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ.

ಕೊಲೆ ಮಾಡಿದ ಬಳಿಕ ಹರಿಲಾಲ್​ ಎಸ್ಕೇಪ್​ ಆಗಿದ್ದಾನೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ. (ಏಜೆನ್ಸೀಸ್​)