ನ್ಯೂಸ್

ಮದುವೆ ಮಂಟಪದಿಂದ ಎದ್ದು ಹೋದ ವಧು! ವಾಪಾಸು ಬರುವಷ್ಟರಲ್ಲಿ ಪೂರ್ತಿ ಕುಟುಂಬವೇ ಹೆಮ್ಮೆ ಪಡುತ್ತಿತ್ತು!

Mandara

ಲಖನೌ: ಮದುವೆ ಎನ್ನುವುದು ಒಂದು ಹಬ್ಬವಿದ್ದಂತೆ. ಅದಕ್ಕೆಂದು ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ಆ ದಿನಕ್ಕಾಗಿ ವಧು ವರರಿಬ್ಬರೂ ಕಾಯುತ್ತಿರುತ್ತಾರೆ. ಆದರೆ ಇಲ್ಲೊಬ್ಬ ವಧು ಮಾತ್ರ ಮದುವೆ ಮಂಟಪದಿಂದಲೇ ಎದ್ದು ಹೋಗಿದ್ದಾಳೆ. ಹಾಗೆ ಧಿಡೀರನೆ ಎದ್ದು ಹೋದ ವಧು ವಾಪಾಸು ಬರುವಷ್ಟರಲ್ಲಿ ಪತಿ ಸೇರಿ ಪೂರ್ತಿ ಕುಟುಂಬ ಆಕೆಯತ್ತ ಹೆಮ್ಮೆಯ ನೋಟ ಬೀರಿದೆ.

ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ಪ್ರಜ್ಞಾ ತಿವಾರಿಗೆ ಡಿಸೆಂಬರ್​ 2ರಂದು ಮದುವೆ ನಿಶ್ಚಯವಾಗಿತ್ತು. ಅದರಂತೆ ಮದುವೆಯೂ ಆಯಿತು. ಆದರೆ ಮದುವೆಯಾದ ಕೆಲವೇ ಗಂಟೆಯಲ್ಲಿ ವಧು ಮಂಟಪದಿಂದ ಕಾಣೆಯಾಗಿದ್ದಾಳೆ.

ಪ್ರಜ್ಞಾ ಶಿಕ್ಷಕಿಯಾಗುವ ಆಸೆ ಹೊತ್ತಿದ್ದು, ಅದಕ್ಕೆಂದು ಅರ್ಜಿ ಸಲ್ಲಿಸಿದ್ದಳು. ಆ ಕೆಲಸದ ಕೌನ್ಸೆಲಿಂಗ್​ನ್ನು ಆಕೆಯ ಮದುವೆಯ ದಿನದಂದೇ ಮಾಡಲಾಗಿತ್ತು. ಆ ಹಿನ್ನೆಲೆಯಲ್ಲಿ ಮಂಟಪದಿಂದ ಎದ್ದು ಹೋದ ಪ್ರಜ್ಞಾ ಕೌನ್ಸೆಲಿಂಗ್​ನಲ್ಲಿ ಹಾಜರಾಗಿದ್ದಾರೆ. ಶಿಕ್ಷಕಿಯಾಗುವ ಅವರ ಕನಸು ನೆರವೇರಿದ್ದು, ಹತ್ತಿರದ ಊರಿನಲ್ಲೇ ಪೋಸ್ಟಿಂಗ್​ ಮಾಡಿಕೊಡಲಾಗಿದೆ. ಕೆಲಸಕ್ಕಾಗಿ ಮದುವೆ ಮಂಟಪದಿಂದಲೇ ಎದ್ದು ಬಂದ ವಧುವಿಗೆ ಜಿಲ್ಲೆಯ ಶಿಕ್ಷಣಾಧಿಕಾರಿಗಳು ಅಭಿನಂದಿಸಿದ್ದಾರೆ. ಇದೀಗ ಪ್ರಜ್ಞಾಳ ಪೂರ್ತಿ ಕುಟುಂಬ ಪ್ರಜ್ಞಾ ಬಗ್ಗೆ ಹೆಮ್ಮೆ ಪಡುತ್ತಿದೆ. (ಏಜೆನ್ಸೀಸ್​)