ನವದೆಹಲಿ: ಲಾಕ್ಡೌನ್ ನಿರ್ಬಂಧಗಳು ಹಂತಹಂತವಾಗಿ ಸಡಿಲವಾಗಿ ಜನ ಜೀವನ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಮದ್ಯ ಮಾರಾಟಕ್ಕೆ ಅನುಮತಿ ನೀಡಿದಾಗ ಮುಗಿಬಿದ್ದವರು ಈಗ ದೂರವೇ ಉಳಿದಿದ್ದಾರೆ. ಆರಂಭದಲ್ಲಿ ದಿನಕ್ಕೇ ನೂರಾರು ಕೋಟಿ ರೂ. ವಹಿವಾಟು ನಡೆಯುತ್ತಿತ್ತು. ಅದೀಗ ಗಣನೀಯವಾಗಿ ಕಡಿಮೆಯಾಗಿದೆ.
ಭಾರತದಲ್ಲಷ್ಟೇ ಅಲ್ಲ, ಜಗತ್ತಿನೆಲ್ಲೆಡೆಯೂ ಇದೇ ಸ್ಥಿತಿ. ಹೀಗಾಗಿ ಮದ್ಯಪ್ರಿಯರನ್ನು ಸೆಳೆಯಲು ಕಂಪನಿಗಳು, ಅಂಗಡಿಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಜತೆಗೆ, ಹೊಟೇಲ್, ಬಾರ್ ಆ್ಯಂಡ್ ರೆಸ್ಟೋರಂಟ್ಗಳ ಆರಂಭಕ್ಕೂ ಅನುಮತಿ ನೀಡಬೇಕೆಂಬ ಒತ್ತಾಯ ಕೇಳಿ ಬಂದಿದೆ.
ಆಸ್ಟ್ರೇಲಿಯಾದ ಜೇಮ್ಸ್ ಸ್ಕೀರ್ ಕಂಪನಿ ಜಿಂಜರ್ ಬಿಯರ್ ಮಾರಾಟಕ್ಕೆ ವಿಶೇಷ ಸ್ಪರ್ಧೆಯೊಂದನ್ನು ಏರ್ಪಡಿಸಿದೆ. ವಿಜೇತರಿಗೆ ಒಂದು ವರ್ಷ ಉಚಿತವಾಗಿ ಬಿಯರ್ ಪೂರೈಕೆ ಮಾಡುವುದಾಗಿ ಹೇಳಿದೆ.
ಅಷ್ಟಕ್ಕೂ ಏನದು ಸ್ಪರ್ಧೆ ಅಂತೀರಾ? ಕಂಪನಿಯು ತನ್ನ ಬಿಯರ್ ಬ್ರಾಂಡ್ನ ಪಕ್ಕಾ ಅಭಿಮಾನಿಯ ಹುಡುಕಾಟದಲ್ಲಿದೆ. ತನ್ನ ಕೂದಲನ್ನು ಜಿಂಜರ್ ಬಣ್ಣಕ್ಕೆ (ಕಡುಗಂದು ಬಣ್ಣದ ಡೈ) ಬದಲಾಯಿಸಿಕೊಳ್ಳುವ, ಸಾಮಾಜಿಕ ಜಾಲತಾಣದಲ್ಲಿ ತಮ್ಮ ಖಾತೆಗಳ ಹೆಸರನ್ನು ಬಿಯರ್ ಹೆಸರಿಗೆ ಬದಲಾಯಿಸಿಕೊಳ್ಳುವ, ಮನೆಗೂ ಜಿಂಜರ್ ಬಣ್ಣವನ್ನೇ ಪೇಂಟ್ ಮಾಡಿಸುವ ಹೀಗೆ ಜಿಂಜರ್ಅನ್ನು ಹೆಚ್ಚು ಇಷ್ಟಪಡುವ ವ್ಯಕ್ತಿಗಾಗಿ ಶೋಧ ನಡೆಸಿದೆ.
ಆರಂಭದಲ್ಲಿ ಕೂದಲಿಗೆ ಜಿಂಜರ್ ಕಲರ್ ಮಾಡಿಕೊಂಡು ಫೋಟೋವೊಂದನ್ನು ಕಳುಹಿಸುವ ಎಲ್ಲರಿಗೂ ಒಂದು ಕೇಸ್ ಬಿಯರ್ ಕಳುಹಿಸಿಕೊಡಲಾಗುವುದು ಎಂದು ಕಂಪನಿ ತಿಳಿಸಿದೆ. ಬೆಸ್ಟ್ ಹೇರ್ ಡೈ ಮಾಡಿಕೊಂಡ ವ್ಯಕ್ತಿಗೆ ವರ್ಷವಿಡೀ ಉಚಿತವಾಗಿ ಬಿಯರ್ ಪೂರೈಸಲಿದೆ.
ಅಂದಹಾಗೆ ಈ ಸ್ಪರ್ಧೆಗೆ ನೀವು ಸಿದ್ಧರಾಗಿದ್ದರೆ... ಕೊನೆಯಲ್ಲಿ ಒಂದು ಮಾತು, ನೀವು ಆಸ್ಟ್ರೇಲಿಯನ್ರಾಗಿದ್ದರಷ್ಟೇ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಆದ್ದರಿಂದ, ಭಾರತದಲ್ಲಿ ಯಾವುದಾದರೂ ಕಂಪನಿ ಈ ಸ್ಪರ್ಧೆ ಆರಂಭಿಸಲಿ ಎಂದು ಕಾಯಬೇಕಷ್ಟೇ.