ನ್ಯೂಸ್

ಲವ್​ ಬ್ರೇಕಪ್​​ನಿಂದ ಇಷ್ಟೆಲ್ಲ ಪ್ರಯೋಜನಗಳಿವೆಯಾ? ಇಲ್ಲಿದೆ ನೋಡಿ ನೀವು ಅಚ್ಚರಿಪಡುವ ಸಂಗತಿ! Breakup

Breakup : ಪ್ರೀತಿಯಲ್ಲಿ ಬೀಳುವುದು ಒಂದು ರೀತಿಯ ಸಂತೋಷ. ಚಾಟ್ ಮಾಡುವುದು, ಡೇಟಿಂಗ್ ಮಾಡುವುದು, ಚುಂಬಿಸುವುದು, ಮುದ್ದಾಡುವುದು, ಚಲನಚಿತ್ರಗಳನ್ನು ಒಟ್ಟಿಗೆ ವೀಕ್ಷಿಸುವುದು, ಭೇಟಿಯಾಗುವುದು ಇದೆಲ್ಲ ಪ್ರೇಮಿಗಳಿಗೆ ಒಂದು ರೀತಿಯ ರೋಮಾಂಚನ. ಪ್ರೀತಿಯಲ್ಲಿ ಬಿದ್ದವರಿಗೆ ಜಗತ್ತು ಕಾಮನಬಿಲ್ಲಿನಂತೆ ಸುಂದರವಾಗಿ ಕಾಣುತ್ತದೆ.

ಆದರೆ, ಅದೇ ಪ್ರೀತಿ ಮುರಿದು ಬಿದ್ದಾಗ ಮನಸ್ಸುಗಳು ಛಿದ್ರವಾಗುತ್ತವೆ. ಅದಕ್ಕಿಂತ ನರಕ ಇನ್ನೊಂದಿಲ್ಲ ಎಂದು ಹೇಳಬಹುದು. ಪ್ರತಿದಿನವೂ ನೋವಿನಿಂದ ದಿನ ದೂಡುವಂತಾಗುತ್ತದೆ. ಅಲ್ಲದೆ, ಮನೆಯಿಂದ ಹೊರಬರದೆ ತಮ್ಮ ಜೀವನವನ್ನು ಕಳೆದುಕೊಂಡಂತೆ ಭಾವಿಸುತ್ತಾರೆ ಮತ್ತು ಖಿನ್ನತೆಗೆ ಒಳಗಾಗುತ್ತಾರೆ. ಕೆಲವರೂ ಪ್ರಾಣವನ್ನೂ ಕಳೆದುಕೊಳ್ಳುವುದುಂಟು.

ಅಂದಹಾಗೆ, ಪ್ರೀತಿ ಜೀವನದ ಒಂದು ಭಾಗ ಮಾತ್ರವಲ್ಲ, ಪ್ರೀತಿಯೇ ಜೀವನ. ಹಾಗಂತ ಪ್ರೇಮಿಗಳು ಬೇರ್ಪಟ್ಟರೆ, ಇನ್ನು ಮುಂದೆ ಜೀವನವೇ ಇಲ್ಲ ಅಂತ ಭಾವಿಸಬಾರದು. ಲವ್​ ಬ್ರೇಕಪ್​ನಿಂದಲೂ ಹಲವು ಪ್ರಮುಖ ಪ್ರಯೋಜನಗಳಿವೆ ಎಂಬುದು ನಿಮಗೆ ಗೊತ್ತಾ? ಆ ಅನುಕೂಲಗಳೇನು ಅನ್ನೋದನ್ನು ನಾವೀಗ ತಿಳಿದುಕೊಳ್ಳೋಣ.

ನೀವು ಪ್ರೀತಿಸಿದವರಿಂದ ಬೇರೆಯಾದಾಗ ನೋವುಂಟಾಗುವುದು ಸಹಜ. ಆದರೆ, ಕೆಲವು ದಿನಗಳ ನಂತರ ಆ ನೋವು ಮಾಯವಾಗಿ, ಮಾನಸಿಕವಾಗಿ ತುಂಬಾ ಬಲಶಾಲಿಯಾಗುತ್ತೀರಿ. ಅತ್ತ ನಂತರ ನಮ್ಮ ಮನಸ್ಸು ಹಗುರವಾಗುತ್ತದೆಯಲ್ವಾ? ಅದೇ ರೀತಿ ಸಾಕಷ್ಟು ನೋವಿನ ಬಳಿಕ ಸಂತೋಷವೂ ನಿಮ್ಮನ್ನು ಅರಸಿ ಬರುತ್ತದೆ. ಒಮ್ಮೆ ಮೋಸ ಹೋದ ಬಳಿಕ ನೀವು ಯಾರನ್ನೂ ಅಷ್ಟು ಸುಲಭವಾಗಿ ನಂಬುವುದಿಲ್ಲ. ಇನ್ನೊಬ್ಬ ಸಂಗಾತಿಯನ್ನು ಆಯ್ಕೆ ಮಾಡುವ ಮೊದಲು ನೀವು ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತೀರಿ.

ನೀವು ಏನು ಬೇಕಾದರೂ ಸಾಧಿಸಬಹುದು

ಬ್ರೇಕಪ್​ ನಂತರ, ಅನೇಕ ಜನರಿಗೆ ಸ್ವ-ಪ್ರೀತಿಯ ಬಗ್ಗೆ ಆಸಕ್ತಿ ಹೆಚ್ಚಾಗುತ್ತದೆ. ಅಂದರೆ, ತಮ್ಮನ್ನು ತಾವು ಇಷ್ಟಪಡುತ್ತಾರೆ. ಇದು ನಂಬಲು ವಿಚಿತ್ರ ಎನಿಸಿದರೂ ಇದೇ ಸತ್ಯ. ಒಂದು ರೀತಿಯಲ್ಲಿ, ಆ ಸಮಯದಲ್ಲಿ ಯಾರೊಂದಿಗೂ ಮಾತನಾಡಲು ಇಷ್ಟವಿರುವುದಿಲ್ಲ. ಅಂತಹ ಸಮಯದಲ್ಲಿ, ಅವರ ಬಗ್ಗೆ ಆಸಕ್ತಿ ಹೆಚ್ಚಾಗುತ್ತದೆ. ಅವರು ಸುಂದರವಾಗಿರಲು ಬಯಸುತ್ತಾರೆ. ಅಲ್ಲದೆ, ಎಲ್ಲದರಲ್ಲೂ ಗಮನಹರಿಸುತ್ತಾರೆ. ಈ ಸಮಯದಲ್ಲಿ ನೀವು ಯಾವುದೇ ಗುರಿಯನ್ನು ಆರಿಸಿಕೊಂಡು ಪ್ರಯತ್ನಿಸಿದರೆ, ನೀವು ಖಂಡಿತವಾಗಿಯೂ ಯಶಸ್ವಿಯಾಗುತ್ತೀರಿ. ಇಂದಿಗೂ ಸಹ, ಸಮಾಜದಲ್ಲಿ ತಮ್ಮ ಅಪೇಕ್ಷಿತ ಕ್ಷೇತ್ರದಲ್ಲಿ ಒಳ್ಳೆಯ ಹೆಸರು, ಖ್ಯಾತಿ ಮತ್ತು ಯಶಸ್ಸನ್ನು ಹೊಂದಿರುವ ಜನರು ಒಂದು ಕಾಲದಲ್ಲಿ ಬ್ರೇಕಪ್​ಗೆ ಒಳಗಾದವರೇ!

ನೀವು ಮುಕ್ತ ಜೀವನ ನಡೆಸುತ್ತೀರಿ

ಬ್ರೇಕಪ್ ಆದ ನಂತರ, ನಿಮಗೆ ಯಾರ ಅನುಮತಿಯೂ ಬೇಕಾಗಿಲ್ಲ. ಏನನ್ನಾದರೂ ಧರಿಸಲು ಅಥವಾ ಎಲ್ಲಿಗೆ ಹೋಗಲು ನಿಮಗೆ ಯಾರ ಅನುಮತಿಯೂ ಬೇಕಾಗಿಲ್ಲ. ನೀವು ಏನು ಬೇಕಾದರೂ ಮಾಡಬಹುದು. ಒಂದು ರೀತಿಯಲ್ಲಿ ನಿಮಗೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಂತೆ. ನೀವು ಯಾವುದೇ ವಿಷಯದ ಬಗ್ಗೆ ನಿಮ್ಮ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ಇದು ನಿಮಗೆ ತೃಪ್ತಿಯನ್ನು ನೀಡುತ್ತದೆ. ನಿಮ್ಮನ್ನು ನಿಯಂತ್ರಿಸಲು ಯಾರೂ ಇಲ್ಲದ ಕಾರಣ ನೀವು ಮುಕ್ತ ಜೀವನವನ್ನು ನಡೆಸುತ್ತೀರಿ.

ಕುಟುಂಬ ಮತ್ತು ಸ್ನೇಹಿತರಿಗೆ ಸಮಯ ನೀಡುವುದು

ನೀವು ಸಂಬಂಧದಲ್ಲಿರುವಾಗ, ನೀವು ಅವರೊಂದಿಗೆ ಸಾಕಷ್ಟು ಸಮಯ ಕಳೆಯುತ್ತೀರಿ. ನೀವು ಅವರೊಂದಿಗೆ ಗಂಟೆಗಟ್ಟಲೆ ಮುದ್ದಾಡುತ್ತೀರಿ. ನೀವು ಬೇರೆಯವರ ಬಗ್ಗೆ ಯೋಚಿಸುವುದಿಲ್ಲ. ಆದರೆ, ಸಂಬಂಧ ಮುರಿದುಬಿದ್ದಾಗ, ನಿಮಗೆ ಸಾಕಷ್ಟು ಸಮಯ ಸಿಗುತ್ತದೆ. ಇದರೊಂದಿಗೆ, ನೀವು ನಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಾಕಷ್ಟು ಸಮಯವನ್ನು ಕಳೆಯುತ್ತೀರಿ. ನೀವು ಗುಣಮಟ್ಟದ ಸಮಯವನ್ನು ಕಳೆಯುತ್ತೀರಿ. ಅಲ್ಲದೆ, ಹೆಚ್ಚಿನ ಸಮಯ ಇರುವುದರಿಂದ, ನೀವು ಹೊಸ ವಿಷಯಗಳನ್ನು ಕಲಿಯಲು ಪ್ರಯತ್ನಿಸುತ್ತೀರಿ. ಆದ್ದರಿಂದ, ಬ್ರೇಕಪ್​ ನೋವಿನಲ್ಲಿ ಮುಳುಗುವ ಬದಲು, ಈ ಪ್ರಯೋಜನಗಳನ್ನು ಸಂತೋಷದಿಂದ ಆನಂದಿಸಿ.