| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ದಂಧೆಯ ಸ್ವರೂಪ ಪಡೆದು ಸರ್ಕಾರಕ್ಕೆ ಸಾರ್ವಜನಿಕವಾಗಿ ಕೆಟ್ಟ ಹೆಸರು ತರುತ್ತಿರುವ ಪೊಲೀಸರ ವರ್ಗಾವಣೆಗೆ ಪ್ರತ್ಯೇಕ ನೀತಿ ರೂಪಿಸಲು ಸರ್ಕಾರ ಮುಂದಾಗಿದೆ. ಈ ಸಂಬಂಧ ಮುಂದಿನ ಅಧಿವೇಶನದಲ್ಲಿ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತರಲು ಅಧ್ಯಯನ ನಡೆಸಲಿದೆ.
ಪೊಲೀಸ್ ಅಧಿಕಾರಿಗಳ ವರ್ಗಾವಣೆ ಅವಧಿ ಒಂದು ವರ್ಷ ಇರುವುದರಿಂದಲೇ ವರ್ಗಾವಣೆ ಎಂಬುದು ಮಿತಿ ಮೀರಿ ಹೋಗಿದೆ. ಅಧಿಕಾರಿಗಳು ಕೆಲಸ ಮಾಡುವುದಕ್ಕಿಂತ ಲಾಭದ ಕಡೆ ಗಮನ ಹರಿಸುತ್ತ, ಮುಂದಿನ ಠಾಣೆಯನ್ನು ಹುಡುಕುವುದರಲ್ಲಿ ಹಾಗೂ ಲಾಬಿ ಮಾಡುವುದರಲ್ಲಿ ಹೆಚ್ಚು ಮಗ್ನರಾಗುತ್ತಿರುವುದು ಸರ್ಕಾರಕ್ಕೆ ಮುಜುಗರ ತರಿಸುತ್ತಿದೆ. ಪೊಲೀಸರ ವರ್ಗಾವಣೆ ವಿಚಾರದಲ್ಲಿ ಸರ್ಕಾರದ ಮಟ್ಟದಲ್ಲೇ ತಿಕ್ಕಾಟಕ್ಕೂ ಕಾರಣವಾಗಿದೆ. ಕೆಲವು ಹುದ್ದೆಗಳಿಗೆ ಪ್ರಭಾವಿಗಳ ನಡುವೆ ಏರ್ಪಟ್ಟಿರುವ ಪೈಪೋಟಿಯಿಂದಾಗಿ ಉನ್ನತ ಹುದ್ದೆಯಲ್ಲಿರುವವರ ನಡುವೆ ಮುಸುಕಿನ ಗುದ್ದಾಟಕ್ಕೂ ಕಾರಣವಾಗಿದೆ. ಆದ್ದರಿಂದಲೇ ಇಂತಹ ಎಲ್ಲ ಸಮಸ್ಯೆಗಳಿಗೆ ಕಡಿವಾಣ ಹಾಕಲು ಸರ್ಕಾರದ ಹಂತದಲ್ಲಿ ಚರ್ಚೆ ನಡೆದಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಈ ವಿಚಾರದಲ್ಲಿ ಹೆಚ್ಚು ಗಂಭೀರವಾಗಿದ್ದಾರೆ.
ಲಾಬಿ ಮಾಡಲು ಶಕ್ತಿ ಇಲ್ಲದ ಸಿಬ್ಬಂದಿ ಮತ್ತು ಅಧಿಕಾರಿಗಳು ನಾನ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಹೋದರೆ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಬರಲು ಇನ್ನಿಲ್ಲದ ಪ್ರಯತ್ನ ಮಾಡಬೇಕಾಗಿದೆ. ಸಾಮರ್ಥ್ಯವಿದ್ದರೂ ಲಾಬಿ ಇಲ್ಲದೆ ಮೂಲೆಗೆ ಕುಳಿತ ಅನೇಕ ಅಧಿಕಾರಿಗಳಿದ್ದಾರೆ. ಅವರನ್ನೆಲ್ಲ ಸಮರ್ಥವಾಗಿ ಬಳಸಿಕೊಳ್ಳಲು ಸರ್ಕಾರ ಚಿಂತನೆ ನಡೆಸಿದೆ ಎಂದು ಮೂಲಗಳು ಹೇಳಿವೆ.
ಈ ಜಿಲ್ಲೆಗಳು ಅಲರ್ಜಿ: ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ಗಡಿ ಭಾಗದ ಠಾಣೆಗಳೆಂದರೆ ಅಲರ್ಜಿ. ಈ ಜಿಲ್ಲೆಗಳಿಗೆ ಹೋಗುವುದಕ್ಕೆ ಹಿಂದೇಟು ಹಾಕುವವರೇ ಹೆಚ್ಚು.
ಪೊಲೀಸ್ ವರ್ಗಾವಣೆ ಬಗ್ಗೆ ಆರೋಪಗಳಿದ್ದು, ಅವುಗಳಿಗೆ ಕಡಿವಾಣ ಹಾಕಲೇಬೇಕಾಗಿದೆ. ಇಲ್ಲದಿದ್ದಲ್ಲಿ ಸಾರ್ವಜನಿಕವಾಗಿ ಬಂದಿರುವ ಕೆಟ್ಟ ಹೆಸರು ಬದಲಾಯಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದಲೇ ವರ್ಗಾವಣೆಗೆ ಹೊಸ ನೀತಿ ತರಲು ಉದ್ದೇಶಿಸಿ ಅಧ್ಯಯನ ನಡೆಸಿದ್ದೇನೆ. ಹೊಸ ನೀತಿ ತರದೆ ವರ್ಗಾವಣೆಗೆ ಕಡಿವಾಣ ಹಾಕಲು ಸಾಧ್ಯವಾಗುವುದಿಲ್ಲ. | ಆರಗ ಜ್ಞಾನೇಂದ್ರ ಗೃಹ ಸಚಿವ
ಸುಪ್ರೀಂಕೋರ್ಟ್ ಸೂಚನೆಯಂತೆ ರಾಜ್ಯ ಸರ್ಕಾರ 2002ರಲ್ಲಿ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತಂದು ವರ್ಗಾವಣೆಗೆ ಎಸ್ಟಾಬ್ಲಿಷ್ವೆುಂಟ್ ಬೋರ್ಡ್ ರಚಿಸಿತು. ಆಗ ಪೊಲೀಸರ ವರ್ಗಾವಣೆ ಅವಧಿಯನ್ನು 2 ವರ್ಷಕ್ಕೆಂದು ನಿಗದಿ ಮಾಡಲಾಗಿತ್ತು. 2012ರಲ್ಲಿ ತಿದ್ದುಪಡಿ ತಂದು ಅವಧಿಯನ್ನು 1 ವರ್ಷಕ್ಕೆ ಇಳಿಸಲಾಯಿತು. ಎಸ್ಟಾಬ್ಲಿಷ್ವೆುಂಟ್ ಬೋರ್ಡ್ ಕೇವಲ ಹಲ್ಲುಕಿತ್ತ ಹಾವಿನಂತಾಯಿತು. ಸಿಎಂ ಕಚೇರಿ ಹಾಗೂ ಗೃಹ ಸೇರಿ ಇತರ ಸಚಿವರಿಂದ ಬರುವ ಶಿಫಾರಸುಗಳಿಗೆ ಅಧಿಕೃತ ಮುದ್ರೆ ಒತ್ತುವುದಷ್ಟೇ ಬೋರ್ಡ್ನ ಕೆಲಸವಾಗಿದೆ. ಆದ್ದರಿಂದಲೇ ಪೊಲೀಸರ ವರ್ಗಾವಣೆಯಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ರಾಜಕೀಯ ಹಸ್ತಕ್ಷೇಪ ಎಲ್ಲೆ ಮೀರಿದೆ. ಹೋಟೆಲ್ನ ತಿಂಡಿಯ ದರಗಳಂತೆ ವರ್ಗಾವಣೆ ದರ ನಿಗದಿಯಾಗಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ವರ್ಗಾವಣೆಯ ಅವಧಿಯನ್ನು 2002ರಲ್ಲಿ ಇದ್ದಂತೆ ಎರಡು ವರ್ಷಕ್ಕೆ ಏರಿಕೆ ಮಾಡಬೇಕೆಂದು ಮಾತುಗಳು 2012ರಿಂದ ಕೇಳಿ ಬರುತ್ತಿವೆ. ಅಲ್ಲಿಂದ ಎಲ್ಲ ಗೃಹ ಸಚಿವರು ಈ ಬಗ್ಗೆ ಮಾತನಾಡಿದ್ದಾರೆ. ಆದರೆ ಯಾರಿಂದಲೂ ಎರಡು ವರ್ಷಕ್ಕೆ ಏರಿಕೆ ಮಾಡಲು ಸಾಧ್ಯವಾಗಿಲ್ಲ. ಇದೀಗ ಆರಗ ಜ್ಞಾನೇಂದ್ರ ಅವರು ಆ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಆದ್ದರಿಂದಲೇ ಪ್ರತ್ಯೇಕವಾದ ನೀತಿಯನ್ನೇ ರೂಪಿಸಲು ಅವರು ಒಲವು ತೋರಿಸುತ್ತಿದ್ದಾರೆ.