ನ್ಯೂಸ್

'ಮೆದುಳು ತಿನ್ನುವ ಅಮೀಬಾ' ಹತ್ತನೇ ತರಗತಿ ವಿದ್ಯಾರ್ಥಿಯ ಜೀವ ತೆಗೆಯಿತು!

Webdesk - Ravikanth

ಕೇರಳ: ಹತ್ತನೇ ತರಗತಿ ವಿದ್ಯಾರ್ಥಿಯೊಬ್ಬ ಮೆದುಳು ತಿನ್ನುವ ಅಮೀಬಾಗೆ ಬಲಿಯಾಗಿದ್ದಾನೆ. ನೀರಿನ ಮೂಲಕ ದೇಹವನ್ನು ಪ್ರವೇಶ ಮಾಡಿದ್ದ ಈ ಅಮೀಬಾ ಕೊನೆಗೆ ಈತನ ಪ್ರಾಣವನ್ನೇ ತೆಗೆದಿದೆ. ಕೇರಳದಲ್ಲಿ ಇಂಥದ್ದೊಂದು ದುರಂತ ಸಂಭವಿಸಿದೆ.

ಕೇರಳದ ಅಲ್ಲಪ್ಪುಝಾದ ಪೂಚಕ್ಕಲ್ ಎಂಬಲ್ಲಿನ ಗುರುದತ್​ (15) ಸಾವಿಗೀಡಾದ ವಿದ್ಯಾರ್ಥಿ. ನೇಗ್ಲೆರಿಯಾ ಫೌಲೆರಿ (Naegleria fowleri) ಈ ಏಕಕೋಶ ಜೀವಿಯನ್ನು ಸಾಮಾನ್ಯವಾಗಿ 'ಮೆದುಳು ತಿನ್ನುವ ಅಮೀಬಾ' ಎಂದು ಕರೆಯಲಾಗುತ್ತದೆ. ಈ ಅಮೀಬಾದಿಂದಾಗಿ ಕಳೆದ ಭಾನುವಾರ ಅಸ್ವಸ್ಥಗೊಂಡಿದ್ದ ಈತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಂದು ಕೊನೆಯುಸಿರೆಳೆದಿದ್ದಾನೆ.

ಈತ ನದಿಯಲ್ಲಿ ಈಜಲು ಹೋಗಿದ್ದಾಗ ಈ ಅಮೀಬಾ ದೇಹಕ್ಕೆ ಪ್ರವೇಶ ಮಾಡಿತ್ತು ಎನ್ನಲಾಗಿದೆ. ಕೆರೆ, ನದಿ ಮುಂತಾದ ಸ್ಥಳದಲ್ಲಿ ಕಂಡು ಬರುವ ಈ ಏಕಕೋಶ ಜೀವಿ ಮನುಷ್ಯನ ದೇಹವನ್ನು ಪ್ರವೇಶಿಸಿದ ಬಳಿಕ ಪ್ರೈಮರಿ ಅಮೀಬಿಕ್​ ಮೆನಿಂಗೊಎನ್​ಸೆಫಾಲಿಟಿಸ್ (ಪಿಎಎಂ) ಉಂಟು ಮಾಡುವುದರಿಂದ ಸಾವಿಗೂ ಕಾರಣವಾಗುತ್ತದೆ. ಈ ಅಮೀಬಾ ಮೂಗಿನ ಮೂಲಕ ದೇಹಕ್ಕೆ ಪ್ರವೇಶ ಮಾಡಿದ ಬಳಿಕ ಮೆದುಳಿನ ಅಂಗಾಂಶಗಳಿಗೆ ಹಾನಿ ಮಾಡುವ ಮೂಲಕ ಅಸ್ವಸ್ಥಗೊಳಿಸುತ್ತದೆ. ಹೀಗಾದಾಗ ಸಾಮಾನ್ಯವಾಗಿ ಐದು ದಿನಗಳಲ್ಲಿ ಸಾಯುತ್ತಾರೆ. ಕೆಲವರು 18 ದಿನಗಳ ವರೆಗಷ್ಟೇ ಬದುಕಿರುತ್ತಾರೆ ಎನ್ನಲಾಗಿದೆ. -ಏಜೆನ್ಸೀಸ್