| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ರಾಜ್ಯದಲ್ಲಿ ಹೆಣ್ಣು ಮಕ್ಕಳಷ್ಟೇ ಅಲ್ಲ, ಅಪ್ರಾಪ್ತ ಗಂಡು ಮಕ್ಕಳೂ ಸುರಕ್ಷಿತವಲ್ಲ. ವರ್ಷದಿಂದ ವರ್ಷಕ್ಕೆ ಗಂಡು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ಆತಂಕಕಾರಿ ಸಂಗತಿ ಬಯಲಾಗಿದೆ. 2023ರಲ್ಲಿ ರಾಜ್ಯಾದ್ಯಂತ ಇಂತಹ 144 ಪ್ರಕರಣಗಳು ವರದಿಯಾಗಿರುವುದು ಪರಿಸ್ಥಿತಿಯ ಗಂಭೀರತೆ ಸಾರಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗಂಡು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ. ಈ ಪೈಕಿ ಬೆಂಗಳೂರು ನಗರ, ಉಡುಪಿ, ಹಾಸನ ಜಿಲ್ಲೆಗಳಲ್ಲಿ ಪ್ರಕರಣಗಳು ಹೆಚ್ಚಾಗಿವೆ. ಮೈಸೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿಯೂ ಇದೇ ಪರಿಸ್ಥಿತಿ ಇರುವುದು ಸರ್ಕಾರದ ಅಂಕಿಅಂಶಗಳಿಂದ ಬೆಳಕಿಗೆ ಬಂದಿದೆ.
ಶಿಕ್ಷೆ ಪ್ರಮಾಣ ಕಡಿಮೆ: ಗಂಡು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳೂ ಸಹ ಪೋಕ್ಸೋ ಕಾನೂನಿನ ವ್ಯಾಪ್ತಿಯಲ್ಲೇ ಬರುತ್ತವೆ. ಆದರೆ ಸಾಕ್ಷ್ಯಗಳು ಸರಿಯಾಗಿ ಸಿಗುತ್ತಿಲ್ಲ ಹಾಗೂ ಪ್ರಕರಣಗಳು ಪೂರ್ಣ ಪ್ರಮಾಣದಲ್ಲಿ ದಾಖಲಾಗುತ್ತಿಲ್ಲ. ಹೀಗಾಗಿ ಶಿಕ್ಷೆಯಾಗಿರುವ ಪ್ರಕರಣಗಳ ಸಂಖ್ಯೆಯೇ ಶೂನ್ಯವಿದೆ. ಹೆಣ್ಣು ಮಕ್ಕಳ ಮೇಲಾಗುವಷ್ಟೇ ದೌರ್ಜನ್ಯ ಗಂಡು ಮಕ್ಕಳ ಮೇಲೂ ಆಗುತ್ತಿವೆ. ಆದರೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಇಂತಹ ಮಕ್ಕಳಲ್ಲಿ ವಿಶ್ವಾಸ ತುಂಬುವ ಕುರಿತು ತರಬೇತಿ ನೀಡುತ್ತಿಲ್ಲ. 2023ರಲ್ಲಿ ಹೆಣ್ಣು ಮಕ್ಕಳ ಮೇಲೆ 178 ಪ್ರಕರಣ ವರದಿಯಾಗಿದ್ದರೆ, ಗಂಡುಮಕ್ಕಳ ಮೇಲೆ 144 ಪ್ರಕರಣಗಳು ವರದಿಯಾಗಿದೆ. ಮೈಸೂರಿನ ಒಡನಾಡಿ ಸಂಸ್ಥೆ ಮಾಹಿತಿ ಹಕ್ಕಿನಡಿ ರಾಜ್ಯ ಅಪರಾಧ ದಾಖಲಾತಿ ವಿಭಾಗದಿಂದ ಪಡೆದ ಅಂಕಿಅಂಶಗಳಿಂದ ಈ ವಿಚಾರ ಬೆಳಕಿಗೆ ಬಂದಿದೆ.
ಇಲಾಖೆಗಳ ಸಮನ್ವಯ ಅಗತ್ಯ: ಗಂಡು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ ನಿಯಂತ್ರಿಸುವ ವಿಚಾರದಲ್ಲಿ ಕೇವಲ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾತ್ರವಲ್ಲ, ವಿವಿಧ ಇಲಾಖೆಗಳ ನಡುವೆ ಸಮನ್ವಯ ಬೇಕಾಗಿದೆ. ಕಾರ್ವಿುಕ, ಶಿಕ್ಷಣ, ಪೊಲೀಸ್, ಆರೋಗ್ಯ, ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ, ಗ್ರಾಮೀಣ ಹಾಗೂ ನಗರಾಭಿವೃದ್ಧಿ ಹೀಗೆ ವಿವಿಧ ಇಲಾಖೆಗಳ ನಡುವೆ ಸಮನ್ವಯ ರೂಪಿಸುವ ಕೆಲಸವನ್ನು ಸರ್ಕಾರ ಮಾಡಬೇಕಾಗಿದೆ.
ಹೆಣ್ಣು ಮಕ್ಕಳ ಪ್ರಕರಣ: 2021ರಲ್ಲಿ ರಾಜ್ಯದ ವಿವಿಧೆಡೆ ಹೆಣ್ಣು ಮಕ್ಕಳ ಮೇಲೆ 219 ಲೈಂಗಿಕ ದೌರ್ಜನ್ಯ ಪ್ರಕರಣ ನಡೆದಿದ್ದು, 5.84 ಕೋಟಿ ರೂ.ಗಳ ಪರಿಹಾರ ನೀಡಲಾಗಿದೆ. 2022 ರಲ್ಲಿ ಬೆಳಕಿಗೆ ಬಂದ 187 ಪ್ರಕರಣಗಳಲ್ಲಿ 5.29 ಕೋಟಿ ರೂ., 2023 ರಲ್ಲಿ 178 ಪ್ರಕರಣ ನಡೆದು 6.68 ಕೋಟಿ ರೂ.ಗಳ ಪರಿಹಾರ ನೀಡಿರುವ ಮಾಹಿತಿ ಕಾನೂನು ಸೇವಾ ಪ್ರಾಧಿಕಾರದಿಂದ ಸಿಕ್ಕಿದೆ.
ವಿದೇಶಗಳಲ್ಲಿ ಪ್ರಬಲ ಕಾನೂನು
ಗಂಡು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಸಂಬಂಧ ಕೆಲವು ದೇಶಗಳಲ್ಲಿ ಬಲವಾದ ಕಾನೂನಿದೆ ಪರಿಹಾರದ ಜತೆಗೆ ಪ್ರತ್ಯೇಕ ಕ್ರೖೆಮ್ ಬ್ಯೂರೋ ತೆರೆಯಲಾಗಿದೆ. ಅಮೆರಿಕ, ನೆದರ್ಲ್ಯಾಂಡ್, ಫ್ರಾನ್ಸ್, ಇಂಗ್ಲೆಂಡ್ಗಳು ಬಲಯುತವಾದ, ಅಪರಾಧಿಗಳಿಗೆ ಹೆಚ್ಚಿನ ಶಿಕ್ಷೆ ನೀಡುವ ಕಾನೂನು ರೂಪಿಸುವಲ್ಲಿ ಮುಂದಿವೆ.
ಹೆಣ್ಣು ಮಕ್ಕಳ ಮೇಲೆ ನಡೆಯುವಷ್ಟೇ ಲೈಂಗಿಕ ದೌರ್ಜನ್ಯ ಗಂಡು ಮಕ್ಕಳ ಮೇಲೂ ನಡೆಯುತ್ತಿವೆ. ಇವು ಸಹ ಪೋಕ್ಸೋ ಅಡಿ ಬಂದರೂ ಕಾನೂನು ಕ್ರಮ, ಪರಿಹಾರ ಸಿಗುತ್ತಿಲ್ಲ, ಪುನರ್ವಸತಿ ಇಲ್ಲ. ದೌರ್ಜನ್ಯಕ್ಕೆ ಒಳಗಾದ ಮಕ್ಕಳಲ್ಲಿ ನೈತಿಕ ಸ್ಥೈರ್ಯ ತುಂಬುವ ಕೆಲಸ ಆಗುತ್ತಿಲ್ಲ. ಸರ್ಕಾರ ಕೂಡಲೇ ದೌರ್ಜನ್ಯಕ್ಕೆ ಒಳಗಾಗುವ ಗಂಡು ಮಕ್ಕಳ ಪುನರ್ವಸತಿ ಹಾಗೂ ಪರಿಹಾರಕ್ಕೆ ಸ್ಪಷ್ಟ ನೀತಿ ತರಬೇಕು.
| ಎಂ.ಎಲ್. ಪರಶುರಾಮ್ ಒಡನಾಡಿ ಸೇವಾ ಸಂಸ್ಥೆ, ಮೈಸೂರು
ತಜ್ಞರ ಸಲಹೆಗಳೇನು?
* ರಕ್ಷಣೆ ವಿಚಾರ ಗಂಭೀರವಾಗಿ ತೆಗೆದುಕೊಳ್ಳಬೇಕು
* ಹೆಣ್ಣುಮಕ್ಕಳ ಕೇಸ್ನಂತೆಯೇ ಪರಿಗಣಿಸಬೇಕು
* ಪರಿಹಾರ, ಪುನರ್ವಸತಿ, ತರಬೇತಿ ಅತ್ಯಗತ್ಯ
* ಇದಕ್ಕಾಗಿ ಪ್ರತ್ಯೇಕ ನೀತಿ ಜಾರಿಯಾಗಬೇಕು
* ಈ ವಿಚಾರದಲ್ಲಿ ಸರ್ಕಾರ ಎಚ್ಚೆತ್ತುಕೊಳ್ಳಬೇಕು
ಇದು ಗಂಭೀರ ವಿಷಯ. ಯಾರ ಮೇಲೆ ದೌರ್ಜನ್ಯ ನಡೆದರೂ ತಡೆಗಟ್ಟಬೇಕು. ಪೊಲೀಸ್ ಇಲಾಖೆಯಿಂದ ಮಾಹಿತಿ ಪಡೆಯಲಾಗುವುದು. ಸಂತ್ರಸ್ತ ಮಕ್ಕಳ ಮೇಲೆ ಕಾಳಜಿ ತೆಗೆದುಕೊಳ್ಳುವ, ಸ್ಪಷ್ಟ ನೀತಿ ರೂಪಿಸುವ ಬಗ್ಗೆ ಅಧಿಕಾರಿಗಳ ಜತೆಗೆ ತಕ್ಷಣ ರ್ಚಚಿಸಲಾಗುವುದು.
| ಲಕ್ಷ್ಮಿ ಹೆಬ್ಬಾಳ್ಕರ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ
ಅಪಾಯಗಳು
* ದೌರ್ಜನ್ಯದಿಂದ ಆತ್ಮಹತ್ಯೆಗೆ ಯತ್ನ
* ಅಪರಾಧಿಗಳಾಗಿ ಬದಲಾಗಬಹುದು
* ಅತ್ಯಾಚಾರಿಗಳಾಗಿ ಕಾಡಬಹುದು
* ಶಿಕ್ಷಣ ಮೊಟಕು, ಆರೋಗ್ಯದ ಸಮಸ್ಯೆ ಕಾಡಬಹುದು
ಯಾರಿಂದ ದೌರ್ಜನ್ಯ?
ಶಾಲಾ ಶಿಕ್ಷಕರು, ರಾಜಕಾರಣಿಗಳು, ವಿಐಪಿಗಳು, ಕೆಲಸ ಮಾಡುವ ಸ್ಥಳಗಳ ಮುಖ್ಯಸ್ಥರು, ಸಂಬಂಧಿಕರು, ಕೆಲವು ಪ್ರಕರಣದಲ್ಲಿ ಮಹಿಳೆಯರು ಹಾಗೂ ಧಾರ್ವಿುಕ ಮುಖಂಡರು
ಎಲ್ಲೆಲ್ಲಿ ಪ್ರಕರಣ ಹೆಚ್ಚು?
ಬೆಂಗಳೂರು ನಗರ, ಉಡುಪಿ, ಹಾಸನ ಜಿಲ್ಲೆಗಳಲ್ಲಿ ಗಂಡು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಹೆಚ್ಚಾಗಿವೆ. 2023ರಲ್ಲಿ ಬೆಂಗಳೂರಲ್ಲಿ 15, ಹಾಸನ 11, ಉಡುಪಿಯಲ್ಲಿ 10 ಪ್ರಕರಣ ವರದಿಯಾಗಿವೆ. ಮೈಸೂರು ನಗರ, ಮೈಸೂರು ಜಿಲ್ಲೆಯಲ್ಲಿ ತಲಾ 5 ಸೇರಿ 10 ಪ್ರಕರಣ ಬೆಳಕಿಗೆ ಬಂದಿದೆ. ಮಂಗಳೂರು ನಗರದಲ್ಲಿ 5, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 7 ಪ್ರಕರಣ ದಾಖಲಾಗಿವೆ. ಬಾಗಲಕೋಟೆ 3, ಬೆಳಗಾವಿ 6, ಬೆಂಗಳೂರು ನಗರ ಜಿಲ್ಲೆ 2, ಬೀದರ್ 4, ಚಾಮರಾಜನಗರ 2, ಚಿಕ್ಕಬಳ್ಳಾಪುರ 5, ಚಿಕ್ಕಮಗಳೂರು 3, ಚಿತ್ರದುರ್ಗ 1, ದಾವಣಗೆರೆ 3, ಧಾರವಾಡ 3, ಹಾವೇರಿ 1, ಕೋಲಾರ 5, ಮಂಡ್ಯ 3, ರಾಯಚೂರು 1, ರಾಮನಗರ 5, ಶಿವಮೊಗ್ಗ 8, ತುಮಕೂರು 6, ಉತ್ತರ ಕನ್ನಡ 4, ವಿಜಯನಗರ 5, ವಿಜಯಪುರದಲ್ಲಿ 5 ಪ್ರಕರಣಗಳು ದಾಖಲಾಗಿವೆ. ದಾಖಲಾಗದೆ ಮುಚ್ಚಿ ಹೋಗಿರುವ ಪ್ರಕರಣ ಲೆಕ್ಕಕ್ಕಿಲ್ಲ.