ಗುರುರಾಜ್ ಬಿ.ಎಸ್. ಬೆಂಗಳೂರು
ಮೊದಲ ದಿನ ಸುರಿದ ಮಳೆಯ ಬಳಿಕ ಪಿಚ್‌ನ ಪರಿಸ್ಥಿತಿ ಅರಿಯುವಲ್ಲಿ ಎಸಗಿದ ಬಹುದೊಡ್ಡ ಪ್ರಮಾದದಿಂದಾಗಿ ಭಾರತ ತಂಡ, ಪ್ರವಾಸಿ ನ್ಯೂಜಿಲೆಂಡ್ ಎದುರು ಮೊದಲ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಪರಾಭವಗೊಂಡಿದೆ. ಇದರೊಂದಿಗೆ 36 ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ಎದುರು ತವರಿನಲ್ಲಿ ಸೋಲಿನ ಕಹಿ ಅನುಭವಿಸಿದೆ. ಉದ್ಯಾನನಗರಿಯಲ್ಲಿ ಟೀಮ್ ಇಂಡಿಯಾ 19 ವರ್ಷಗಳ ಬಳಿಕ ಟೆಸ್ಟ್ ಸೋಲು ಕಂಡಿತು. ಐದನೇ ಹಾಗೂ ಅಂತಿಮ ದಿನವೂ ಮೇಲುಗೈ ಸಾಧಿಸಿದ ನ್ಯೂಜಿಲೆಂಡ್ ಸ್ಮರಣೀಯ ಗೆಲುವು ತನ್ನದಾಗಿಸಿಕೊಂಡು, ಮೂರು ಪಂದ್ಯಗಳ ಸರಣಿಯಲ್ಲಿ 0-1ರಿಂದ ಮುನ್ನಡೆ ಸಾಧಿಸಿದೆ.
ಚಿನ್ನಸ್ವಾಮಿ ಕ್ರೀಡಾಂಗಣದ ಆತಿಥ್ಯದಲ್ಲಿ ಭಾನುವಾರ ಮುಕ್ತಾಯಗೊಂಡ ಪಂದ್ಯದಲ್ಲಿ ರೋಹಿತ್ ಶರ್ಮ ಪಡೆ ನೀಡಿದ 107 ರನ್‌ಗಳ ಅಲ್ಪ ಗುರಿಯನ್ನು ಅಂತಿಮ ದಿನ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ, ಮಳೆ ಅಡಚಣೆಯ ನಡುವೆಯೂ ವಿಲ್ ಯಂಗ್ (48* ರನ್, 76 ಎಸೆತ, 7 ಬೌಂಡರಿ, 1 ಸಿಕ್ಸರ್) ಹಾಗೂ ಬೆಂಗಳೂರು ಮೂಲದ ಆಲ್ರೌಂಡರ್ ರಚಿನ್ ರವೀಂದ್ರ (39* ರನ್, 46 ಎಸೆತ, 6 ಬೌಂಡರಿ) ಅಜೇಯ ಜತೆಯಾಟದ ಬಲದಿಂದ ಭೋಜನ ವಿರಾಮಕ್ಕೂ ಮುನ್ನವೇ 27.4 ಓವರ್‌ಗಳಲ್ಲಿ 2 ವಿಕೆಟ್‌ಗೆ 110 ರನ್‌ಗಳಿಸಿ ಗೆಲುವಿನ ಸಂಭ್ರಮ ಕಂಡಿತು. ಮೊದಲ ಇನಿಂಗ್ಸ್‌ನಲ್ಲಿ ಶತಕ ಹಾಗೂ ಎರಡನೇ ಇನಿಂಗ್ಸ್‌ನಲ್ಲಿ ಸಮಯೋಚಿತ ಆಟವಾಡಿದ 24 ವರ್ಷದ ರಚಿನ್ ರವೀಂದ್ರ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಇದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 25ನೇ ಟೆಸ್ಟ್ ಪಂದ್ಯವಾಗಿತ್ತು.
ಮತ್ತೆ ಕಾಡಿದ ರಚಿನ್: ಶನಿವಾರ ರಾತ್ರಿ ಹಾಗೂ ಭಾನುವಾರ ಬೆಳಗ್ಗೆ ಸುರಿದ ಭಾರಿ ಮಳೆಯಿಂದಾಗಿ ದಿನದಾಟ ತಡವಾಗಿ ಆರಂಭಗೊಂಡಿತು. 10.15ಕ್ಕೆ ಆಟ ಆರಂಭಗೊಂಡಾಗ ವೇಗಿ ಜಸ್‌ಪ್ರೀತ್ ಬುಮ್ರಾ ಭಾರತಕ್ಕೆ ಕನಸಿನ ಆರಂಭವನ್ನೇ ಒದಗಿಸಿದರು. 4 ಎಸೆತ ಎದುರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ನಾಯಕ ಟಾಮ್ ಲಾಥಮ್ (0) ಅವರನ್ನು ದಿನದ 2ನೇ ಎಸೆತದಲ್ಲಿ ಎಲ್‌ಬಿ ಬಲೆಗೆ ಬೀಳಿಸಿದರು. ಡಿಆರ್‌ಎಸ್ ಮೊರೆ ಹೋದರೂ ಬಚಾವಾಗಲಿಲ್ಲ. ಹೊಸ ಚೆಂಡಿನಲ್ಲಿ ಮೊನಚಿನ ದಾಳಿ ನಡೆಸಿದ ಬುಮ್ರಾ ಹಾಗೂ ಸಿರಾಜ್ ಸುಲಭವಾಗಿ ರನ್ ಬಿಟ್ಟುಕೊಡಲಿಲ್ಲ.
ಅನೀರಿಕ್ಷಿತ ಬೌನ್ಸ್ ಜತೆಗೆ ಲೋ ಬೌನ್ಸ್‌ನಿಂದ ಪುಟಿಯುತ್ತಿದ್ದ ಎಸೆತಗಳನ್ನು ಎದುರಿಸಲು ಡೆವೋನ್ ಕಾನ್‌ವೇ (17) ಮತ್ತು ವಿಲ್ ಯಂಗ್ ಪರದಾಡಿದರು. ಇದರಿಂದ ರೋಹಿತ್ ಪಡೆಯಲ್ಲಿ ನಿರೀಕ್ಷೆ ಗರಿಗೆದರಿದತು. ಆದರೆ ಎರಡನೇ ವಿಕೆಟ್‌ಗೆ ಇವರಿಬ್ಬರು 69 ಎಸೆತಗಳಲ್ಲಿ 35 ರನ್ ಕಸಿದು ವೇಗಿಗಳನ್ನು ಕಾಡಿದರು. ಚೆಂಡು ಹಳೆತದಾಗುತ್ತಿದ್ದಂತೆ ವೇಗಿಗಳು ಮೊನಚು ಕಳೆದುಕೊಂಡರು. 13ನೇ ಓವರ್‌ನಲ್ಲಿ ಕಾನ್‌ವೇ ಆಟಕ್ಕೆ ತೆರೆ ಎಳೆದ ಬುಮ್ರಾ, ಡಿಆರ್‌ಎಸ್‌ನಲ್ಲಿ ವಿಕೆಟ್ ಪಡೆದುಕೊಂಡರು. ಆಗ ವಿಲ್ ಯಂಗ್ ಜತೆಯಾದ ರಚಿನ್ ರವೀಂದ್ರ ಸ್ಪಿನ್ನರ್‌ಗಳ ಆಕ್ರಮಣಕಾರಿ ಆಟವಾಡಿ ಭಾರತದ ಹೋರಾಟವನ್ನು ಹಿಮ್ಮೆಟ್ಟಿಸಿದರು. ಇವರಿಬ್ಬರು ಮುರಿಯದ ಮೂರನೇ ವಿಕೆಟ್‌ಗೆ 92 ಎಸೆತಗಳಲ್ಲಿ 75 ರನ್ ಬಾರಿಸಿ ದಡ ಸೇರಿಸಿದರು.
ಎರಡನೇ ಟೆಸ್ಟ್
ಯಾವಾಗ: ಅ.24-28
ಎಲ್ಲಿ: ಪುಣೆ