ಹೈದರಾಬಾದ್: ಮಹಿಳಾ ಟೆಕ್ಕಿಯೊಬ್ಬರು ಕ್ರಿಮಿನಾಶಕ ಸೇವಿಸಿ ಸಾವಿಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಹೈದರಾಬಾದ್ನ ಜಗದ್ಗಿರಿಗುಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೌನಿಕಾ (23) ಮೃತ ದುರ್ದೈವಿ. ನೆಹರು ನಗರದಲ್ಲಿ ತನ್ನ ಸ್ನೇಹಿತೆ ಸೌಮ್ಯ ಜತೆಯಲ್ಲಿ ಮೌನಿಕಾ ವಾಸವಿದ್ದರು. ಮಾದಪುರದಲ್ಲಿರುವ ಸಾಫ್ಟ್ವೇರ್ ಕಂಪನಿಯಲ್ಲಿ ಮೌನಿಕಾ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ತವರಿಗೆ ಮರಳಿದ್ದ ಆಕೆ ತುಂಬಾ ಮೌನವಾಗಿದ್ದಳು.
ಸೋಮವಾರ ರಾತ್ರಿ ರೂಮಿಗೆ ತೆರಳಿದ ಮೌನಿಕಾ ಮಂಗಳವಾರ ಬೆಳಗ್ಗೆ ರೂಮ್ ಬಿಟ್ಟು ಬರಲೇ ಇಲ್ಲ. ಮನೆಯವರು ಎಷ್ಟೇ ಕೂಗಿದರೂ ಆಕೆಯಿಂದ ಯಾವುದೇ ಪ್ರತಿಕ್ರಿಯೆ ಬಾರಲಿಲ್ಲ. ಇದರಿಂದ ಗಾಬರಿಗೊಂಡ ಕುಟುಂಬ ನೆರೆ ಮನೆಯವರನ್ನು ಕರೆಸಿ, ಬಾಗಿಲು ಮುರಿದು ನೋಡಿದಾಗ ಆಕೆ ಪ್ರಜ್ಞೆಯಿಲ್ಲದೆ ಬಿದ್ದಿದ್ದಳು. ಆಕೆಯ ಪಕ್ಕದಲ್ಲೇ ಕೀಟನಾಶಕ ಬಾಟೆಲ್ ಸಹ ಪತ್ತೆಯಾಗಿತ್ತು. ಇದರಿಂದ ಮತ್ತಷ್ಟು ಆತಂಕಕ್ಕೆ ಒಳಗಾದ ಕುಟುಂಬ ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿತು.
ಆದರೆ, ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಯುವಕನೊಬ್ಬನನ್ನು ಪ್ರೀತಿ ಮಾಡುತ್ತಿದ್ದಾಗಿ 2 ತಿಂಗಳ ಹಿಂದೆ ಪಾಲಕರಿಗೆ ತಿಳಿಸಿದ್ದಳು. ಆದರೆ, ಪಾಲಕರು ಒಪ್ಪದಿದ್ದಕ್ಕೆ ಅವರೊಂದಿಗೆ ಮಾತು ಬಿಟ್ಟಿದ್ದಳು. ಇತ್ತೀಚೆಗೆ ಆ ಯುವಕ ಬೇರೆ ಯುವತಿಯೊಂದಿಗೆ ಮದುವೆ ಆಗಲು ತಯಾರಿ ಮಾಡಿಕೊಳ್ಳುತ್ತಿರುವುದನ್ನು ಪಾಲಕರಿಗೆ ಮೌನಿಕಾ ತಿಳಿಸಿದ್ದಳು. ಇದೇ ನೋವಿನಲ್ಲಿ ಆಕೆ ವಿಷ ಸೇವಿಸಿದ್ದಾಳೆ ಎಂದು ಪಾಲಕರು ತಿಳಿಸಿದ್ದಾರೆ.
ಈ ಘಟನೆ ಸಂಬಂಧ ಜಗದ್ಗಿರಿಗುಟ್ಟ ಪೊಲೀಸ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್)