ನ್ಯೂಸ್

ಶಾಲೆಯ ಟಾಯ್ಲೆಟ್​ನಲ್ಲೇ ಪಾರ್ಟಿ ಆಯೋಜಿಸಿದ ಬಾಲಕ! ವಿಚಾರ ತಿಳಿದ ಅಮ್ಮ ನಕ್ಕಿದ್ದೇಕೆ?

ಲಂಡನ್​: ಶಾಲೆ ಎಂದರೆ ಪಾಠದ ಜತೆ ಆಟವೂ ಇದ್ದೇ ಇರುತ್ತದೆ. ಆದರೆ ಇಲ್ಲೊಬ್ಬ ಬಾಲಕಿನಿಗೆ ಮಾತ್ರ ಶಾಲೆಯಲ್ಲಿ ಆಟ ಪಾಠದ ಜತೆ ಪಾರ್ಟಿಯೂ ಬೇಕಾಗಿತ್ತಂತೆ. ಅದಕ್ಕೆಂದೇ ಶಾಲೆಯ ಟಾಯ್ಲೆಟ್​ನಲ್ಲಿ ಪಾರ್ಟಿ ಆಯೋಜಿಸಿದ್ದ ಬಾಲಕನ ಕಥೆ ಇದು.

ಇಂಗ್ಲೆಂಡ್​ನ ಕೇಲ್ ಬೆಲ್, ಸೇಂಟ್ ಆಂಟೋನಿ ಕ್ಯಾಥೊಲಿಕ್ ಶಾಲೆಯ ವಿದ್ಯಾರ್ಥಿ. ಈಗಿನ್ನೂ 12ನೇ ವಸಂತಕ್ಕೆ ಕಾಲಿಟ್ಟಿರುವ ಈ ಬಾಲಕನಿಗೆ ಡಿಜೆ ಆಗುವ ಕನಸಿದೆಯಂತೆ. ಅದಕ್ಕೆ ಮನೆಯಲ್ಲೂ ಬೆಂಬಲವಿರುವ ಕಾರಣ ಮನೆಯ ಪಾರ್ಟಿಗಳಲ್ಲಿ ಈತನೇ ಡಿಜೆ ಆಗಿ ಕೆಲಸ ಮಾಡುತ್ತಾನಂತೆ. ಈತನ ಡಿಜೆ ಹುಚ್ಚು ಎಷ್ಟರ ಮಟ್ಟಿಗಿದೆ ಎಂದರೆ, ಶಾಲೆಯಲ್ಲು ಪಾರ್ಟಿ ನಡೆಸುವ ಯೋಜನೆ ಹಾಕುವಷ್ಟರ ಮಟ್ಟಿಗೆ.

ತನ್ನ ಡಿಜೆ ಪ್ರತಿಭೆಯನ್ನು ಸಹಪಾಠಿಗಳಿಗೆ ತೋರಿಸಬೇಕೆಂಬ ಬಯಕೆಯಿಂದ ಕೇಲ್​ ಡಿಸೆಂಬರ್​ 11ರಂದು ಪಾರ್ಟಿ ಆಯೋಜಿಸಿದ್ದಾನೆ. ಶಾಲೆಯ ಟಾಯ್ಲೆಟ್​ನ್ನೇ ಪಾರ್ಟಿಯ ಸ್ಥಳವೆಂದು ತನ್ನೆಲ್ಲ ಸ್ನೇಹಿತರಿಗೆ ತಿಳಿಸಿದ್ದಾನೆ. ಸ್ನೇಹಿತರೊಂದಿಗೆ ಸೇರಿ ಪಾರ್ಟಿಯನ್ನೂ ಮಾಡಿದ್ದಾನೆ. ಆದರೆ ಈ ವಿಚಾರ ತಿಳಿಯುತ್ತಿದ್ದಂತೆ ವಿದ್ಯಾರ್ಥಿಗಳ ಟಾಯ್ಲೆಟ್​ಗೆ ನುಗ್ಗಿದ ಶಿಕ್ಷಕರು ಅಲ್ಲಿದ್ದ ಎಲ್ಲ ವಸ್ತುವನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಕೇಲ್​ನ ಈ ಸಾಹಸವನ್ನು, ಆತನ ತಾಯಿಗೆ ಕರೆ ಮಾಡಿ ತಿಳಿಸಿದ್ದಾರೆ.

ಮಗನ ಹುಚ್ಚಾಟವನ್ನು ಕೇಳಿದ ತಾಯಿ ಸಿಟ್ಟಾಗದೆ ನಕ್ಕಿದ್ದಾರೆ. ತಪ್ಪಿತಸ್ಥ ಭಾವದೊಂದಿಗೆ ಮನೆಗೆ ಬಂದ ಮಗನ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಮಗ ಮಾಡಿದ ತಪ್ಪಿನ ಬಗ್ಗೆ ಪೋಸ್ಟ್​ ಹಾಕಿಕೊಂಡಿದ್ದಾರೆ. ಅದರ ಜತೆ ಮಗನ ಡಿಜೆ ಪ್ರತಿಭೆ ತೋರಿಸಲು ಕೆಲ ವಿಡಿಯೋಗಳನ್ನೂ ಶೇರ್​ ಮಾಡಿದ್ದಾರೆ. (ಏಜೆನ್ಸೀಸ್​)