ತಿಪಟೂರು ಪಿಯು ಕಾಲೇಜು ಅವ್ಯವಹಾರದ ತನಿಖೆ ಆರಂಭ ; ಎಸಿಬಿ ಅಧಿಕಾರಿಗಳಿಂದ ದಾಖಲೆ ವಶ

TIPTUR_PUC
Published on

ತುಮಕೂರು : ತಿಪಟೂರು ಸರ್ಕಾರಿ ಪದವಿಪೂರ್ವ ಕಾಲೇಜು ಅಭಿವೃದ್ಧಿ ನಿಧಿಯಿಂದ ಲಕ್ಷಾಂತರ ರೂಪಾಯಿ ದುರುಪಯೋಗದ ದೂರು ಆಧರಿಸಿ ಬುಧವಾರ ಪ್ರಕರಣ ದಾಖಲಿಸಿರುವ ಎಸಿಬಿ ತನಿಖೆ ತೀವ್ರಗೊಳಿಸಿದೆ.

ಶುಕ್ರವಾರ ಬೆಳಗ್ಗೆ 11ರಿಂದ ಸಂಜೆ 6.30ರವರೆಗೆ ಕಾಲೇಜು ಹಾಗೂ ಮನೆಯಲ್ಲಿ ಪರಿಶೀಲನೆ ನಡೆಸಿದ ಪೊಲೀಸ್ ಇನ್‌ಸ್ಪೆಕ್ಟರ್ ವಿ.ಪ್ರವೀಣ್‌ಕುಮಾರ್ ನೇತೃತ್ವದ ತಂಡ ನಾಲ್ಕು ಬಿಲ್‌ಗಳ ಬಗ್ಗೆ ದಾಖಲೆ ಸಂಗ್ರಹಿಸಿದೆ. ಇನ್ನೂ ಸಾಕಷ್ಟು ಖಾತೆಗಳಿಗೆ ಹಣ ವರ್ಗಾವಣೆಯಾಗಿರುವ ಬಗ್ಗೆ ದಾಖಲೆಗಳನ್ನು ಪರಿಶೀಲಿಸಬೇಕಿದೆ. ಪ್ರಾಚಾರ್ಯ ಹಾಗೂ ಎ್ಡಿಎ ತಲೆಮರೆಸಿಕೊಂಡಿರುವುದು ವಿಚಾರಣೆಗೆ ಅಡ್ಡಿಯಾಗಿದೆ.

ಪ್ರಥಮ ದರ್ಜೆ ಸಹಾಯಕ ಸುನೀಲ್ ಕೂರ್ಗಿ ಕಾಲೇಜಿಗೆ ಅನಧಿಕೃತ ಗೈರಾಗಿದ್ದು, ಅವನ ಸಹೋದರನ ಕಡೆಯಿಂದ ಕೆಲವು ಕೀ ಹಾಗೂ ಪಾಸ್‌ಬುಕ್ ಕಳುಹಿಸಿಕೊಟ್ಟಿದ್ದ. ಪ್ರಾಚಾರ್ಯ ಅಲ್ಲಮಪ್ರಭು ಅವರ ಮನೆಯಿಂದಲೂ ಕೆಲವು ದಾಖಲೆಗಳನ್ನು ವಿಚಾರಣೆ ಸಂದರ್ಭದಲ್ಲಿ ಅಧಿಕಾರಿಗಳಿಗೆ ತಂದು ಕೊಡಲಾಗಿದೆ. ಆದರೆ, ಬಹುತೇಕ ದಾಖಲೆಗಳು ಆಯಾ ಕಾಲಕ್ಕೆ ನಿರ್ವಹಣೆ ಮಾಡಿರಲಿಲ್ಲ.

ಕಾಲೇಜಿನ ಸಿಬ್ಬಂದಿ ಹಾಗೂ ಉಪನ್ಯಾಸಕರಿಂದ ಮೌಖಿಕವಾಗಿ ಪ್ರಾಥಮಿಕ ಮಾಹಿತಿ ಪಡೆಯಲಾಗಿದೆ. ಕಾಲೇಜಿನಲ್ಲಿ ಇಬ್ಬರು ಹಿರಿಯ ಉಪನ್ಯಾಸಕರು ಚುನಾವಣಾ ಕರ್ತವ್ಯಕ್ಕೆ ತೆರಳಿರುವ ಹಿನ್ನೆಲೆಯಲ್ಲಿ ಸಂಸ್ಕೃತ ಉಪನ್ಯಾಸಕ ಆರ್.ಚಿಕ್ಕರಂಗಪ್ಪ ಅವರನ್ನು ಪ್ರಭಾರ ಪ್ರಾಚಾರ್ಯರನ್ನಾಗಿ ನೇಮಿಸಲಾಗಿದೆ. ಅವರು ಆಡಳಿತಾತ್ಮಕ ಅನುಭವದ ಕೊರತೆಯಿಂದ ಮಾಹಿತಿ ನೀಡುವಲ್ಲಿ ತಡಬಡಾಯಿಸುತ್ತಿರುವುದು ತನಿಖೆಗೆ ತುಸು ಹಿನ್ನಡೆ ತಂದಿದೆ. ಪ್ರಭಾರ ಪ್ರಾಚಾರ್ಯ ಆರ್.ಚಿಕ್ಕರಂಗಪ್ಪ, ದೂರುದಾರ ಜೆ.ಕೆ.ಸಮಿ, ಉಪನ್ಯಾಸಕರು, ಸಿಬ್ಬಂದಿ ಹಾಗೂ ಎಸಿಬಿ ಪೊಲೀಸ್ ಸಿಬ್ಬಂದಿ ಇದ್ದರು.

ಅಕ್ರಮ ಬಯಲಿಗೆಳೆದವರಿಗೆ ಬೆದರಿಕೆ : ಸರ್ಕಾರಿ ಪಿಯು ಕಾಲೇಜು ಅಕ್ರಮ ಬಯಲಿಗೆಳೆದ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಸಮಾಜ ಕಾರ್ಯಕರ್ತರಿಗೆ ಬೆದರಿಕೆ ಕರೆ ಬಂದಿರುವ ಬಗ್ಗೆಯೂ ವಿಚಾರಣೆ ಸಮಯದಲ್ಲಿ ಎಸಿಬಿ ಅಧಿಕಾರಿಗಳಿಗೆ ತಿಳಿಸಲಾಗಿದೆ. ಪ್ರಾಚಾರ್ಯರ ಸಂಬಂಧಿಯೊಬ್ಬರು ಕಾಲೇಜಿಗೆ ಭೇಟಿ ನೀಡಿ ಉಪನ್ಯಾಸಕರಿಗೆ ನೇರವಾಗಿ ಬೆದರಿಕೆ ಹಾಕಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

30ರವರೆಗೆ ಪ್ರಾಚಾರ್ಯ ರಜೆ : ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಪ್ರಾಚಾರ್ಯ ಅಲ್ಲಮಪ್ರಭು ಗುರುವಾರದಿಂದ ಡಿ.30ರವರೆಗೆ ರಜೆ ಮೇಲೆ ತೆರಳಿದ್ದು, ರಜೆಯ ಜತೆಜತೆಗೆ ಅವರ ಸೇವಾವಧಿಯೂ ಮುಗಿಯಲಿದೆ. 60 ವರ್ಷ ವಯಸ್ಸಿನ ಪ್ರಾಚಾರ್ಯರು ಡಿ.31ರಂದು ನಿವೃತ್ತರಾಗಲಿದ್ದು, ಪ್ರಕರಣದ ಹಿನ್ನೆಲೆಯಲ್ಲಿಯೇ ರಜೆಯ ಮೇಲೆ ತೆರಳಿದ್ದಾರೆ ಎನ್ನಲಾಗಿದೆ. ಪ್ರಕರಣದ ಮತ್ತೊಬ್ಬ ಆರೋಪಿ ಎಫ್‌ಡಿಎ ಸುನೀಲ್ ಕೂರ್ಗಿ ಕೂಡ ರಜೆ ಚೀಟಿ ಬರೆದಿಟ್ಟು ಅನಧಿಕೃತವಾಗಿ ಗೈರಾಗಿದ್ದಾನೆ ಎನ್ನಲಾಗಿದ್ದು, ವಿಚಾರಣೆಗೆ ಹಾಜರಾಗಲು ಎಸಿಬಿ ಪೊಲೀಸರು ಸೂಚಿಸಿದ್ದಾರೆ.

ಹಣ ದುರುಪಯೋಗದ ದೂರಿನ ಹಿನ್ನೆಲೆಯಲ್ಲಿ ಎಸಿಬಿ ತನಿಖೆಗೆ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅನುಮತಿ ನೀಡಿದ್ದು, ತನಿಖೆಗೆ ಅಗತ್ಯ ಸಹಕಾರ ನೀಡಲಾಗುವುದು. ಈ ಹಂತದಲ್ಲಿ ಪ್ರಾಚಾರ್ಯರ ವಿರುದ್ಧ ಕ್ರಮಕೈಗೊಳ್ಳಲು ನಮಗೆ ಅಧಿಕಾರವಿಲ್ಲ, ನಾವು ನಡೆಸಿರುವ ತನಿಖೆಯಲ್ಲಿ ಮೇಲ್ನೊಟಕ್ಕೆ ಹಣ ದುರುಪಯೋಗದ ಬಗ್ಗೆ ಮಾಹಿತಿ ಇಲ್ಲ. ನರಸಿಂಹಮೂರ್ತಿ ಡಿಡಿಪಿಯು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net