ನವದೆಹಲಿ: ಇಸ್ರೇಲ್ ಮೇಲೆ ನಡೆದ ಪ್ಯಾಲೇಸ್ಟಿನಿಯನ್ ರಾಕೆಟ್ ದಾಳಿ ವೇಳೆ ದುರಂತ ಸಾವಿಗೀಡಾದ ಕೇರಳ ಮೂಲದ ಮಹಿಳೆಯ ಮೃತದೇಹ ಶನಿವಾರ ಬೆಳಗ್ಗೆ ನವದೆಹಲಿ ತಲುಪಿದೆ.
ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ ವಿ. ಮುರಳೀಧರನ್ ಅವರು ಇಸ್ರೇಲ್ನ ಉಪ ರಾಯಭಾರಿ ರೊನಿ ಯೆಡಿಡಿಯಾ ಕ್ಲೈನ್ ಅವರೊಂದಿಗೆ ಸೇರಿ ಅಂತಿಮ ಗೌರವ ಸಲ್ಲಿಸಿದರು.
ಭಾರವಾದ ಹೃದಯದಿಂದ ಶ್ರೀಮತಿ ಸೌಮ್ಯ ಸಂತೋಷ್ ಅವರ ಪಾರ್ಥೀವ ಶರೀರವನ್ನು ಸ್ವೀಕರಿಸಿ, ದೆಹಲಿಯಲ್ಲಿ ಅಂತಿಮ ಗೌರ ಸಲ್ಲಿಸಿದೆವು. ಇಸ್ರೇಲ್ ರಾಯಭಾರಿ ರೋನಿ ಯಡಿಡಿಯಾ ಸಹ ಜತೆಯಲ್ಲಿದ್ದರು. ನೋವು ಮತ್ತು ದುಃಖಗಳನ್ನು ತಡೆದುಕೊಳ್ಳುವ ಶಕ್ತಿಯನ್ನು ಸೌಮ್ಯಾ ಅವರ ಕುಟುಂಬಕ್ಕೆ ದೇವರು ನೀಡಲಿ ಎಂದು ಮುರಳೀಧರನ್ ಟ್ವೀಟ್ ಮಾಡಿದ್ದಾರೆ.
ಕೇರಳದ ಇಡುಕ್ಕಿ ಮೂಲದ ಸೌಮ್ಯ (31) ಇಸ್ರೇಲ್ನ ಆ್ಯಶ್ಕೆಲೊನ್ ನಗರದಲ್ಲಿ ವಾಸವಿದ್ದರು. ಕಳೆದ ಮಂಗಳವಾರ ಸಂಜೆ ತನ್ನ ಪತಿ ಸಂತೋಷ್ರೊಂದಿಗೆ ವಿಡಿಯೋ ಕಾಲ್ ಮೂಲಕ ಮಾತನಾಡುವಾಗ ರಾಕೆಟ್ ನೇರವಾಗಿ ಸೌಮ್ಯ ಮನೆಯ ಮೇಲೇ ಬಿದ್ದಿತ್ತು.
ಈ ಬಗ್ಗೆ ಮಾತನಾಡಿದ್ದ ಸೌಮ್ಯ ಪತಿ ಸಂತೋಷ್ ಸಹೋದರ ಸಾಜಿ, ವಿಡಿಯೋ ಕಾಲ್ ವೇಳೆ ನನ್ನ ಸಹೋದರ ಭಾರಿ ಶಬ್ದವನ್ನು ಕೇಳಿದರು. ಇದ್ದಕ್ಕಿದ್ದಂತೆ ಫೋನ್ ಸಂಪರ್ಕ ಕಡಿತಗೊಂಡಿತು. ತಕ್ಷಣ ನಾವು ಅಲ್ಲಿಯೇ ಕೆಲಸದ ನಿಮಿತ್ತ ವಾಸವಿದ್ದ ಇತರೆ ಮಲಯಾಳಿಗಳನ್ನು ಸಂಪರ್ಕಿಸಿದೆವು. ಆ ಬಳಿಕ ಈ ದುರ್ಘಟನೆ ನಮಗೆ ತಿಳಿಯಿತು ಎಂದಿದ್ದರು.
ಸೌಮ್ಯ ಕೇರಳದ ಇಡುಕ್ಕಿ ಜಿಲ್ಲೆಯ ಕೀರಿಥೋಡು ಮೂಲದವರು. ಕಳೆದ 7 ವರ್ಷಗಳಿಂದ ಇಸ್ರೇಲ್ನಲ್ಲಿ ಮನೆ ಕೆಲಸ ಮಾಡುತ್ತಿದ್ದರು ಎಂದು ಅವಳ ಸಂಬಂಧಿಕರು ಹೇಳಿದ್ದಾರೆ.
ಕಳೆದ ಒಂದು ವಾರದಿಂದ ಇಸ್ರೇಲ್ ಹಾಗೂ ಪ್ಯಾಲೇಸ್ಟಿನಿಯನ್ ಬಂಡುಕೋರರ ನಡುವಿನ ಸಂಘರ್ಷ ತೀವ್ರವಾಗಿದ್ದು, ಗಾಜಾ ತತ್ತರಿಸಿ ಹೋಗಿದೆ. (ಏಜೆನ್ಸೀಸ್)