ಮೈಸೂರು: ಜೀವನಪೂರ್ತಿ ಬಾಹ್ಯ ಪ್ರಪಂಚವನ್ನೇ ಕಾಣದ ಅಂಧರು ವಿಮಾನಯಾನದ ವಿಶಿಷ್ಟ ಅನುಭವವನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಂಧರ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಯುವಪಡೆಯೊಂದು, ಈ ಅನುಭವವನ್ನು ಅಂಧರಿಗೆ ಒದಗಿಸಿಕೊಟ್ಟಿದೆ. ಕಳೆದ ಶುಕ್ರವಾರ (ಅ.28) 32 ಜನ ಅಂಧ ವಿದ್ಯಾರ್ಥಿನಿಯರು ಮೈಸೂರಿನಿಂದ ಬೆಂಗಳೂರಿನವರೆಗೆ ವಿಮಾನದಲ್ಲಿ ಪ್ರಯಾಣಿಸಿ ಖುಷಿಪಟ್ಟಿದ್ದಾರೆ.
ಎರಡು ಸಾವಿರ ಸ್ವಯಂ ಸೇವಕರನ್ನೊಳಗೊಂಡ ‘ಸ್ವೀಟ್ ನೆಸ್ ಆಫ್ ಬ್ಲೈಂಡ್ ನೆಸ್’ ಗುಂಪು ಈ ಚಟುವಟಿಕೆಯನ್ನು ನಡೆಸಿದೆ. ಗುಂಪಿನ ಸದಸ್ಯರೆಲ್ಲ ಹಣ ಹೊಂದಿಸಿ ಅಂಧ ವಿದ್ಯಾರ್ಥಿನಿಯರಿಗೆ ವಿಮಾನಯಾನದ ಅವಕಾಶ ಮಾಡಿಕೊಟ್ಟಿದ್ದಾರೆ. ವಿಮಾನ ನಿಲ್ದಾಣದಲ್ಲಿ ಚೆಕ್ ಇನ್, ಬೋರ್ಡಿಂಗ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಅನುಭವ ಪಡೆದ ಮಕ್ಕಳನ್ನು ವಿಮಾನ ಸಂಸ್ಥೆ ಸಿಬ್ಬಂದಿ ಆತ್ಮೀಯವಾಗಿ ಬರಮಾಡಿಕೊಂಡರು. ವಿಮಾನದ ಕ್ಯಾಪ್ಟನ್ ಕೂಡ ಮಕ್ಕಳನ್ನುದ್ದೇಶಿಸಿ ಮಾತನಾಡಿ ಈ ವಿಶೇಷ ಅವಕಾಶದ ಬಗ್ಗೆ ಖುಷಿಪಟ್ಟರು.
ವಿಮಾನ ಏರಿದ ವೇಳೆ ಸ್ವೀಟ್ ನೆಸ್ ಆಫ್ ಬ್ಲೈಂಡ್ ನೆಸ್‌ನ ಸ್ವಯಂ ಸೇವಕರು ಮಾಹಿತಿ ನೀಡುತ್ತಿದ್ದಾಗ ಮಕ್ಕಳು ಪುಳಕಗೊಂಡರು, ಟೇಕಾಫ್ ಆಗುವಾಗ ಸಂಭ್ರಮದಿಂದ ಕೂಗಿದರು.
ಸಾಮಾಜಿಕ ಕಾರ್ಯಕರ್ತರ ಗುಂಪಿನ ನೇತೃತ್ವ ವಹಿಸಿದ್ದ ಸತೀಶ್ ತಮ್ಮ ಪ್ರಯತ್ನದ ಉದ್ದೇಶವನ್ನು ಹಂಚಿಕೊಂಡು, ಅಂಧರನ್ನು ರೈಲು, ಬಸ್ ಮೂಲಕ ಪ್ರವಾಸಕ್ಕೆ ಕರೆದುಕೊಂಡು ಹೋಗುವುದು ಸಾಮಾನ್ಯ. ಅವರಿಗೆ ವಿಮಾನದ ಅನುಭವ ಕೊಡಬೇಕು ಎಂಬ ಗುರಿ ಇತ್ತು. ಈಗ ಅದು ಈಡೇರಿದೆ ಎಂದು ಹೇಳಿದರು.
ವಿಮಾನ ನಿಲ್ದಾಣದಲ್ಲಿ ವೆಬ್ ಚೆಕ್ ಇನ್ ಬದಲು ವೈಯಕ್ತಿಕ ಚೆಕ್ ಇನ್ ಮೂಲಕ ಮಕ್ಕಳಿಗೆ ತಿಳಿವಳಿಕೆ ಮೂಡಿಸಲಾಯಿತು. ಭದ್ರತಾ ತಂಡಕ್ಕೆ ಸಹಕರಿಸುವುದು, ಬೋರ್ಡಿಂಗ್ ಸೇರಿ ಯಾವೆಲ್ಲ ಪ್ರಕ್ರಿಯೆಯಲ್ಲಿ ಯಾವ ರೀತಿ ತೊಡಗಬೇಕೆಂದು ತಿಳಿಸಿಕೊಡಲಾಯಿತು ಎನ್ನುತ್ತಾರೆ ತಂಡದ ಸದಸ್ಯೆ ಸಮ್ರಾಜ್ಞಿ ಆರ್.ಭಟ್.