ವಯನಾಡು: ಬಿಜೆಪಿ (BJP) ಮತ್ತು ಪ್ರಧಾನಿ ನರೇಂದ್ರ ಮೋದಿ ಸಾಂವಿಧಾನಿಕ ಮೌಲ್ಯಗಳಾದ ಸಮಾನತೆ, ನ್ಯಾಯ ಮತ್ತು ಜಾತ್ಯತೀತತೆಯನ್ನು ನಾಶ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ವಯನಾಡು ಲೋಕಸಭಾ ಉಪಚುನಾವಣೆಯ ಯುಡಿಎಫ್ ಅಭ್ಯರ್ಥಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ.
ಮಲಪ್ಪುರಂ ಜಿಲ್ಲೆಯ ವಂಡೂರು ವಿಧಾನಸಭಾ ಕ್ಷೇತ್ರದ ಚೆರುಕೋಡ್‌ನಲ್ಲಿ ನಡೆದ ಕಾರ್ನರ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಿಯಾಂಕಾ, ಕಮಲ ಪಡೆಯ ವಿರುದ್ಧ ತನ್ನ ಮಾತಿನ ದಾಳಿಯನ್ನು ಇಂದು ಸಹ ಮುಂದುವರೆಸಿದ್ದಾರೆ. "ಬಿಜೆಪಿ ಅವರು ದೇಶದಲ್ಲಿ ಇಂತಹ ರಾಜಕೀಯ ಶಕ್ತಿಯುತವಾದಾಗ, ಜನರು ತಮ್ಮ ದೈನಂದಿನ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಗಮನ ಹರಿಸುವುದಿಲ್ಲ. ಇವರ ಆಡಳಿತದಲ್ಲಿ ದೇಶದಲ್ಲಿ ರೈತರಿಗೆ ಅಥವಾ ಮಧ್ಯಮ ಮತ್ತು ಸಣ್ಣ ಉದ್ಯಮಗಳಿಗೆ ಯಾವುದೇ ಬೆಂಬಲ ವ್ಯವಸ್ಥೆ ಇರಲಿಲ್ಲ" ಎಂದು ಹೇಳಿದ್ದಾರೆ.
"ಸಣ್ಣ ಮತ್ತು ಮಧ್ಯಮ ಉದ್ಯಮಗಳು ದೇಶದ ಆರ್ಥಿಕತೆಯ ಬೆನ್ನೆಲುಬು. ಇದರಿಂದ ಸಾಕಷ್ಟು ಉದ್ಯೋಗಗಳು ಹೊರಹೊಮ್ಮುತ್ತವೆ. ವಯನಾಡಿನಲ್ಲಿ ಮಸಾಲೆಗಳು ಸೇರಿದಂತೆ ಉತ್ತಮ ಗುಣಮಟ್ಟದ ಕೃಷಿ ಉತ್ಪನ್ನಗಳನ್ನು ಉತ್ಪಾದಿಸುತ್ತಿದ್ದರೂ ಸಹ, ಅನೇಕ ರೈತರು ಕೃಷಿಯಲ್ಲಿ ಭವಿಷ್ಯವನ್ನು ಕಾಣುತ್ತಿಲ್ಲ. ವಿದ್ಯಾರ್ಥಿಗಳು ಸೇರಿದಂತೆ ನಿವಾಸಿಗಳು ಉತ್ತಮ ಉದ್ಯೋಗಾವಕಾಶಗಳು ಹಾಗೂ ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ವಲಸೆ ಹೋಗುತ್ತಿದ್ದಾರೆ" ಎಂದು ಒತ್ತಿ ಹೇಳಿದರು.
ಇದನ್ನೂ ಓದಿ: ಯಶ್ ಅಭಿನಯದ ‘ರಾಮಯಾಣ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ! ದೀಪಾವಳಿ ಹಬ್ಬಕ್ಕೆ Ramayana ಸಿನಿಮಾ ಧಮಾಕಾ
"ವಯನಾಡಿನಲ್ಲಿ ಮೂಲಭೂತ ಕುಡಿಯುವ ನೀರು, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳ ಕೊರತೆಯಂತಹ ಸಮಸ್ಯೆಗಳಿವೆ. ಅವಕಾಶ ಸಿಕ್ಕರೆ ಇಲ್ಲಿನ ಜನರಿಗಾಗಿ ಸಂಸತ್ತಿನಲ್ಲಿ ಮತ್ತು ಇತರ ಎಲ್ಲ ವೇದಿಕೆಗಳಲ್ಲಿ ನಿಮ್ಮ ಸಮಸ್ಯೆಗಳನ್ನು ಪರಿಹರಿಸುವುದನ್ನು ಖಚಿತಪಡಿಸಿಕೊಳ್ಳಲು ಹೋರಾಡುತ್ತೇನೆ. ಇಟ್ಟ ಹೆಜ್ಜೆಯಿಂದ ನಾನು ಹಿಂದೆ ಸರಿಯುವುದಿಲ್ಲ. ನಾನು ನಿಮಗಾಗಿ ಹೋರಾಡುತ್ತೇನೆ, ನಾನು ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ. ನಾವೆಲ್ಲರೂ ಒಂದು ಕುಟುಂಬ" ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ,(ಏಜೆನ್ಸೀಸ್).