ನ್ಯೂಸ್

ಸರ್ಕಾರಕ್ಕೆ ಗುದ್ದು ನೀಡಲು ಸಜ್ಜು: ವಿಪಕ್ಷ ನಾಯಕನಿಲ್ಲದಿದ್ದರೂ ಮಂಕಾಗದಂತೆ ಬಿಜೆಪಿ ತಂತ್ರ

ಬೆಂಗಳೂರು: ಆಡಳಿತ ಪಕ್ಷವನ್ನು ಪರೀಕ್ಷೆಗೊಡ್ಡಬೇಕಿದ್ದ ಪ್ರತಿಪಕ್ಷ ಬಿಜೆಪಿ, ತನ್ನ ನಾಯಕ ಯಾರೆಂಬುದು ಗೊತ್ತಿಲ್ಲದೆ ಸ್ವತಃ ಪರೀಕ್ಷೆಗೆ ಒಳಗಾಗಿದ್ದರೂ ಬಜೆಟ್ ಅಧಿವೇಶನ ಎದುರಿಸಲು ಸಜ್ಜಾಗಿದೆ. ಜೈನಮುನಿ ಬರ್ಬರ ಹತ್ಯೆ ಪ್ರಕರಣವನ್ನು ಉಭಯ ಸದನಗಳಲ್ಲಿ ಬಿಜೆಪಿ ಸೋಮವಾರ ಪ್ರಸ್ತಾಪಿಸಲಿದೆ. ಆ ಮೂಲಕ ಕೊಲೆ ಪ್ರಕರಣದ ಉನ್ನತ ತನಿಖೆ, ಸಾಧು-ಸಂತರ ರಕ್ಷಣೆಗೆ ಸರ್ಕಾರದ ಮೇಲೆ ಒತ್ತಡ ಹೇರಲಿದೆ. ಕರಾವಳಿ ಭಾಗದಲ್ಲಿ ಮಳೆ ಅನಾಹುತ, ರಾಜ್ಯದ ಉಳಿದೆಡೆ ಮಳೆ ಕೊರತೆಯಿಂದ ಜನರು ಅನುಭವಿಸುತ್ತಿರುವ ಬವಣೆ, ಬಜೆಟ್ ಮೇಲೆ ಚರ್ಚೆ ಕೈಗೆತ್ತಿಕೊಂಡು ವಾಕ್ ಪ್ರಹಾರ ನಡೆಸಲು ಸಿದ್ಧತೆ ಮಾಡಿಕೊಂಡಿದೆ. ಸಂವಿಧಾನಿಕ ವೇದಿಕೆಯಲ್ಲಿ ಸರ್ಕಾರದ ಕಾರ್ಯವೈಖರಿ ವಿಮರ್ಶೆ, ವೈಫಲ್ಯಗಳನ್ನು ಎತ್ತಿಹಿಡಿದು ಜನರ ಗಟ್ಟಿ ಧ್ವನಿಯಾಗಿ ಕೆಲಸ ಮಾಡಲು ಸಮರ್ಥವೆಂಬ ಸಂದೇಶ ರವಾನಿಸಲು ಉತ್ಸುಕವಾಗಿದೆ.

ಕೆಂಡಾಮಂಡಲ: ಬಜೆಟ್ ಭಾಷಣದುದ್ದಕ್ಕೂ ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಕಟು ಟೀಕೆ, ಟಿಪ್ಪಣಿ ಮಾಡಿರುವುದು ಕಮಲಪಡೆಯನ್ನು ಕೆಂಡಾಮಂಡಲ ವಾಗಿಸಿದೆ. ಗ್ಯಾರಂಟಿ ಯೋಜನೆಗಳಿಗೆ ಬೇಕಾದ ಆರ್ಥಿಕ ಸಂಪನ್ಮೂಲ ಕ್ರೋಡೀಕರಣಕ್ಕೆ ಹೆಚ್ಚಿನ ಕಸರತ್ತು ನಡೆಸದೆ, ಸಾಲ ಮತ್ತು ಅನುದಾನ ಕಡಿತಕ್ಕೆ ಮೊರೆ ಹೋಗಿರುವುದಕ್ಕೆ ಬಿಜೆಪಿ ಆಕ್ಷೇಪವೆತ್ತಿದೆ.

ಕೃಷಿ, ಆರೋಗ್ಯ, ಶಿಕ್ಷಣ ಇಲಾಖೆಗಳಿಗೆ ಅನುದಾನ ಕಡಿತವಾಗಿದೆ. ನೀರಾವರಿ ಯೋಜನೆಗಳು ನಗಣ್ಯ, ಸರ್ಕಾರಿ ನೌಕರರ ಬೇಡಿಕೆಗಳ ಕಡೆಗಣನೆ ಅಸ್ತ್ರಗಳನ್ನು ಅಧಿವೇಶನದಲ್ಲಿ ಬಳಸಲಿದೆ. ಐದು ಗ್ಯಾರಂಟಿಗಳು, ಸಾಲ, ತೆರಿಗೆ ಹೊರೆ, ಕೇಂದ್ರ ಸರ್ಕಾರದ ಟೀಕೆ ಹಾಗೂ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಆರೋಪ ಬಿಟ್ಟರೆ ಬಜೆಟ್​ನಲ್ಲಿ ಬೇರೇನಿಲ್ಲ ಎಂದು ಬಿಂಬಿಸಲು ಮುಂದಾಗಿದೆ.

ಆಕ್ರಮಣಕಾರಿ ತಂತ್ರಗಾರಿಕೆ

ಉಭಯ ಸದನಗಳಲ್ಲಿ ಪ್ರತಿಪಕ್ಷ ಮಂಕಾಗಿದೆ ಎಂದು ಬಿಂಬಿಸುವ ಸಾಧ್ಯತೆಗಳಿವೆ. ಅದರಲ್ಲೂ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಸರ್ಕಾರದ ಮೇಲೆ ಮುಗಿಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ನಾಯಕನ ಆಯ್ಕೆಯಾಗಿಲ್ಲ ಎಂಬ ಕೊರಗು ಬದಿಗಿಟ್ಟು, ಆಕ್ರಮಣಕಾರಿ ತಂತ್ರಗಾರಿಕೆ ಅನುಸರಿಸಲು ಬಿಜೆಪಿ ಒತ್ತು ನೀಡಲಿದೆ. ವಿಧಾನಸಭೆಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ವಿಧಾನಪರಿಷತ್​ನಲ್ಲಿ ಕೋಟ ಶ್ರೀನಿವಾಸ ಪೂಜಾರಿ, ತೇಜಸ್ವಿನಿಗೌಡ ಮುಂದಾಳತ್ವದಲ್ಲಿ ವಿಷಯಗಳು ಪ್ರಸ್ತಾಪವಾಗಲಿವೆ. ಆಡಳಿತ ಪಕ್ಷದ ಟೀಕೆ-ಟಿಪ್ಪಣೆ, ಲೇವಡಿಗೆ ಎದೆಗುಂದದೆ ವಿಷಯಾಂತರವಾಗದಂತೆ ಎಚ್ಚರಿಕೆಯಿಂದ ಹೆಜ್ಜೆಯಿಡಲು ಶಾಸಕರಿಗೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪೆನ್​ಡ್ರೖೆವ್ ಬಾಂಬ್ ಬಿಡುಗಡೆ?

ಬೆಂಗಳೂರು: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮಾಧ್ಯಮಗಳ ಮುಂದೆ ಪ್ರದರ್ಶಿಸಿರುವ ಪೆನ್​ಡ್ರೖೆವ್ ಸತ್ಯಾಸತ್ಯತೆ ಏನೇ ಇರಲಿ, ರಾಜಕೀಯ ಸಂಚಲನ ಮೂಡಿಸಿರುವುದಂತೂ ಸುಳ್ಳಲ್ಲ. ಪೆನ್​ಡ್ರೖೆವ್ ಕಾಂಗ್ರೆಸ್​ನಲ್ಲಿ ತಳಮಳ ಉಂಟು ಮಾಡಿದರೆ, ಜೆಡಿಎಸ್​ಗೆ ಕಳವಳ ತಂದಿದೆ. ಪೆನ್​ಡ್ರೖೆವ್ ಬಹಿರಂಗ ಪಡಿಸುವಂತೆ ಕಾಂಗ್ರೆಸ್ ಸದನದಲ್ಲಿ ಸವಾಲು ಹಾಕಿದರೂ ಕುಮಾರಸ್ವಾಮಿ ಮೌನವಾಗಿರುವುದು ಮತ್ತು ಹಾರಿಕೆ ಉತ್ತರ ನೀಡುತ್ತಿರುವುದು ಜೆಡಿಎಸ್ ಶಾಸಕರನ್ನು ಸಂದಿಗ್ಧತೆಗೆ ಸಿಲುಕಿಸಿದೆ. ಹಾಗಾಗಿ ಪೆನ್​ಡ್ರೖೆವ್ ರಹಸ್ಯ ಬಿಡುಗಡೆ ಮಾಡಿ ಇಲ್ಲವೇ ಆ ವಿಷಯ ಅಲ್ಲಿಗೇ ಕೈಬಿಡಿ ಎಂದು ಜೆಡಿಎಸ್ ಶಾಸಕರು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಪೆನ್​ಡ್ರೖೆವ್ ರಹಸ್ಯದ ಬಗ್ಗೆ ಕಾಂಗ್ರೆಸ್ ಸಚಿವರು, ಶಾಸಕರು ಗೇಲಿ ಮಾಡಿದ್ದಾರೆ. ಬಟ್ಟೆ ಹಾವು ಎಂದು ಕುಮಾರಸ್ವಾಮಿ ವಿರುದ್ಧ ವ್ಯಂಗ್ಯವಾಡಿದ್ದಾರೆ. ಇನ್ನೊಂದೆಡೆ ಒಳಗೊಳಗೆ ಕಾಂಗ್ರೆಸ್​ನ ಕೆಲವು ಸಚಿವರಿಗೆ ತಮ್ಮಿಂದ ಇಲ್ಲವೇ ತಮ್ಮ ಆಪ್ತರು, ಬೆಂಬಲಿಗರಿಂದ ಎಲ್ಲಿ ಎಡವಟ್ಟಾಗಿದೆಯೋ ಎಂಬ ಎದೆ ನಡುಕ ಶುರುವಾಗಿರುವುದಂತೂ ಸುಳ್ಳಲ್ಲ.

ಸಡ್ಡು ಹೊಡೆದ ಸಚಿವರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಕೆ.ಜೆ. ಜಾರ್ಜ್, ಎನ್. ಚಲುವರಾಯಸ್ವಾಮಿ ಮೊದಲುಗೊಂಡು ಅನೇಕ ನಾಯಕರು ಭ್ರಷ್ಟಾಚಾರದ ದಾಖಲೆ ಬಿಡುಗಡೆ ಮಾಡುವಂತೆ ನೇರಾ ನೇರ ತೊಡೆ ತಟ್ಟಿದ್ದಾರೆ.

ಪೆನ್​ಡ್ರೖೆವ್ ಮೊದಲು ರಿಲೀಸ್ ಆಗಲಿ, ನಂತರ ಸೂಕ್ತ ಉತ್ತರ ಕೊಡುತ್ತೇವೆ.| ಎಂ.ಬಿ.ಪಾಟೀಲ್, ಸಚಿವ

ಎದೆ ಢವ ಢವ: ವರ್ಗಾವಣೆಗೆ ಸಂಬಂಧಿಸಿದಂತೆ 4 ಇಲಾಖೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ. ಇಂಧನ ಇಲಾಖೆಯಲ್ಲಿ 10 ಕೋಟಿ ರೂ.ಗೆ ಎರಡು ಹುದ್ದೆ ಬಿಕರಿಯಾಗಿವೆ ಎಂದು ಸದನದಲ್ಲೇ ಕುಮಾರಸ್ವಾಮಿ ಗುಡುಗಿದ್ದರು. ಇದಕ್ಕೆ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಸಚಿವ ಕೆ.ಜೆ.ಜಾರ್ಜ್, ತಾಕತ್ತಿದ್ದರೆ ದಾಖಲೆ ಬಿಡುಗಡೆ ಮಾಡಿ ಎಂದು ಕೆಣಕಿದ್ದರು. ಇದಕ್ಕೆ ಕಾಂಗ್ರೆಸ್​ನ ಅನೇಕ ಸದಸ್ಯರು ದನಿಗೂಡಿಸಿದ್ದರು. ಇನ್ನೂ ಒಂದು ಹಂತಕ್ಕೆ ಮುಂದೆ ಹೋಗಿ ಭ್ರಷ್ಟಾಚಾರ ಗೊತ್ತಿದ್ದೂ ಬಹಿರಂಪಡಿಸದೇ ಇರುವುದು ಕೂಡ ಕಾನೂನು ರೀತ್ಯ ತಪ್ಪು ಎಂದೂ ತಿವಿದಿದ್ದರು. ಸೋಮವಾರದಿಂದ ಮತ್ತೆ ಅಧಿವೇಶನ ಆರಂಭಗೊಳ್ಳಲಿದ್ದು, ಪೆನ್​ಡ್ರೖೆವ್ ಬಾಂಬ್ ಬ್ಲಾಸ್ಟ್ ಆಗುತ್ತೋ ಇಲ್ಲವೇ ಠುಸ್ ಪಟಾಕಿಯಾಗುತ್ತೋ ಎಂಬ ಕುತೂಹಲವೂ ಇದೆ.

ಬಿಜೆಪಿಯಲ್ಲೂ ಕಸಿವಿಸಿ: ಕುಮಾರಸ್ವಾಮಿ ಪೆನ್​ಡ್ರೖೆವ್ ಪ್ರದರ್ಶಿಸುತ್ತಲೇ ಇತ್ತ ಬಿಜೆಪಿಗೆ ಖುಷಿಯೋ ಖುಷಿ. ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಲವಾದ ಬ್ರಹ್ಮಾಸ್ತ್ರ ಸಿಕ್ಕಿತಲ್ಲ ಎಂಬ ಉಮೇದಿನಲ್ಲಿ ಒಳಗೊಳಗೆ ಸಂಭ್ರಮಿಸಿದ್ದರು. ಇದೇ ಹಿನ್ನೆಲೆಯಲ್ಲೇ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಕೂಡ ಕುಮಾರಸ್ವಾಮಿಗೆ ಶಹಬ್ಬಾಶ್​ಗಿರಿ ನೀಡಿದ್ದರು. ಆದರೆ ಕುಮಾರಸ್ವಾಮಿ ಪೆನ್​ಡ್ರೖೆವ್ ರಹಸ್ಯ ಬಯಲು ಮಾಡದೇ ಇರುವುದು ಬಿಜೆಪಿಯಲ್ಲೂ ಕಸಿವಿಸಿ ಉಂಟು ಮಾಡಿದೆ.