ನ್ಯೂಸ್

ಮೈಸೂರು ದಸರಾ ಅಂದರೆ ಕಾಂಗ್ರೆಸ್​ ಸರ್ಕಾರ ಮೂಗು ಮುರಿಯುವುದೇಕೆ: ಬಿಜೆಪಿ

Webdesk - Manjunatha B

ಬೆಂಗಳೂರು: ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವುದರಿಂದ ಈ ಬಾರಿಯ ನಾಡ ಹಬ್ಬ ದಸರಾವನ್ನು ಸರಳವಾಗಿ ಆಚರಿಸಲಾಗುವುದೆಂಬ ಸಚಿವ ಎಚ್.ಸಿ. ಮಹದೇವಪ್ಪ ಹೇಳಿಕೆಗೆ ರಾಜ್ಯ ಬಿಜೆಪಿ ತಿರುಗೇಟು ನೀಡಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ಬಿಜೆಪಿ ಮೈಸೂರು ದಸರಾ ಅಂದರೆ ಈ ಸರ್ಕಾರ ಮೂಗು ಮುರಿಯುವುದೇಕೆ ಎಂದು ಕಾಂಗ್ರೆಸ್​ಅನ್ನು ಪ್ರಶ್ನಿಸಿದೆ. ಬಿಟ್ಟಿ ಶೋಕಿಗಳಿಗೆ ಕೋಟಿ ಕೋಟಿ ಖರ್ಚು ಮಾಡುವ ಸಿದ್ದರಾಮಯ್ಯನವರು ಸರ್ಕಾರ ದೀಗ ಮೈಸೂರು ದಸರಾ ಆಚರಣೆಯನ್ನು ಮಾತ್ರ ಸರಳವಾಗಿ ಆಚರಣೆ ಮಾಡಲು‌ ಮುಂದಾಗಿದೆ ಎಂದು ಕಿಡಿಕಾರಿದೆ.

ರಾಜೀವ್ ಗಾಂಧಿ ಪ್ರತಿಮೆ ಮಾಡುವುದಕ್ಕೆ, I.N.D.I.A ಮೈತ್ರಿಕೂಟದ ಸಭೆ ಮಾಡುವುದಕ್ಕೆ, ಅಲ್ಪಸಂಖ್ಯಾತರು, ಮಿಷನರಿಗಳ ಉದ್ಧಾರಕ್ಕಾಗಿ ಕಾಂಗ್ರೆಸ್​ ಸರ್ಕಾರದ ಬಳಿ ಕೋಟಿ ಕೋಟಿ ಹಣವಿದೆ. ಆದರೆ ನಾಡ ಹಬ್ಬ ದಸರಾ ಆಚರಿಸಲು, ಕನ್ನಡ ವಿವಿಗಳಿಗೆ ಅನುದಾನ ಕೊಡಲು, ಹಂಪಿ ಉತ್ಸವ ಆಚರಿಸಲು ಮಾತ್ರ ಸರ್ಕಾರಕ್ಕೆ ಬರ, ಅನುದಾನದ ಕೊರತೆ ಅಡ್ಡ ಬರುತ್ತದೆ.

ಈ ಹಿಂದೆಯೂ ಸಿದ್ದರಾಮಯ್ಯ ಅವರು ದಸರಾ ಆಚರಣೆಗೆ ಹಣವಿಲ್ಲವೆಂದು ಹೇಳಿ, ಅದ್ಧೂರಿಯಾಗಿ ರಾಜ್ಯದ ತುಂಬಾ ಟಿಪ್ಪು ಜಯಂತಿಯನ್ನು ಆಚರಿಸಿದ್ದರು. ಮೈಸೂರು ದಸರಾ ಅಂದರೆ ಈ ಸರ್ಕಾರ ಮೂಗು ಮುರಿಯುವುದೇಕೆ ಎಂದು ರಾಜ್ಯ ಬಿಜೆಪಿ ಕಾಂಗ್ರೆಸ್​ ವಿರುದ್ಧ ಹರಿಹಾಯ್ದಿದೆ.