| ರಾಘವ ಶರ್ಮ ನಿಡ್ಲೆ, ನವದೆಹಲಿ
ಬಜೆಟ್ ಅಧಿವೇಶನ ಮಾತ್ರವಲ್ಲದೆ, ಮುಂದಿನ ಲೋಕಸಭೆ ಚುನಾವಣೆ ಕಾರಣಕ್ಕೂ ಸಮರ್ಥ ನಾಯಕನಿಗಾಗಿ ಬಿಜೆಪಿ ವರಿಷ್ಠರು ತಲಾಷೆ ನಡೆಸಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲಿನ ಆಘಾತದಿಂದ ದೆಹಲಿ ನಾಯಕರು ಹೊರ ಬಂದಿದ್ದಾರೆ. ಕಾರ್ಯಕರ್ತರ ಅಪೇಕ್ಷೆಯಂತೆ ಸಶಕ್ತ, ದಿಟ್ಟ ನಾಯಕನ ಕೈಗೆ ಜವಾಬ್ದಾರಿ ಒಪ್ಪಿಸಲು ಗಂಭೀರ ಚಿಂತನೆ ನಡೆಸಿದ್ದಾರೆ. ರಾಜ್ಯ ಬಿಜೆಪಿ ಸಂಘಟನೆಗೆ ಶಕ್ತಿ ತುಂಬಬಲ್ಲ ಅಧ್ಯಕ್ಷರ ನೇಮಕಾತಿ ತುರ್ತಾಗಿ ಆಗಬೇಕಿದೆ ಎಂಬ ವಾಸ್ತವ ಬಿಜೆಪಿ ಹೈಕಮಾಂಡ್ಗೆ ಅರಿವಿದ್ದರೂ, ಯಾರನ್ನು ಆಯ್ಕೆ ಮಾಡಬೇಕೆಂಬ ಗೊಂದಲವೇ ವಿಳಂಬಕ್ಕೆ ಮೂಲ ಕಾರಣ.
ಬಿ.ಎಸ್. ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿದ ನಂತರ ಸಮರ್ಥ ನಾಯಕನನ್ನು ಕಂಡುಕೊಳ್ಳುವಲ್ಲಿ ವರಿಷ್ಠರು ಸೋತಿದ್ದಾರೆ. ಹಿಂದೆ ಬಿಜೆಪಿ ಜಾರಿ ಮಾಡಿದ್ದ ಹಲವು ಯೋಜನೆ, ಕಾನೂನುಗಳನ್ನು ರದ್ದುಗೊಳಿಸಿದ್ದರ ವಿರುದ್ಧ ಜನಾಂದೋಲನ ರೂಪಿಸಲೂ ಈಗಿರುವ ನಾಯಕರಿಗೆ ಸಾಧ್ಯವಾಗದಿರುವುದನ್ನು ಕಂಡು ಕಾರ್ಯಕರ್ತರ ಪಡೆ ಹತಾಶಗೊಂಡಿದೆ. ನಾಯಕನ ಆಯ್ಕೆಯಲ್ಲಿ ವರಿಷ್ಠರ ವಿಳಂಬ ಧೋರಣೆ ಗಾಯದ ಮೇಲೆ ಬರೆ ಎಳೆದಿದೆ. ಹಾಲಿ ರಾಜ್ಯಾಧ್ಯಕ್ಷರ ಬಗ್ಗೆ ಪಕ್ಷದ ಮುಖಂಡರು, ಕಾರ್ಯಕರ್ತ ವರ್ಗ ಭರವಸೆ ಕಳೆದುಕೊಂಡಿದೆ. ತಮಗೆ ಅಧ್ಯಕ್ಷ ಸ್ಥಾನ ಬೇಡ ಎಂದು ಚುನಾವಣೆ ಫಲಿತಾಂಶ ಹೊರಬಿದ್ದ ನಂತರ ಅವರು ಹುದ್ದೆಗೆ ರಾಜೀನಾಮೆ ನೀಡಿದ್ದರು. ಆದರೆ ಅವರ ನಾಯಕತ್ವವನ್ನು ಬಲವಾಗಿ ಬೆಂಬಲಿಸಿದ್ದ ಆರೆಸ್ಸೆಸ್ ಮುಖಂಡರು ಹಾಗೂ ಪಕ್ಷದ ಕೆಲ ಹಿರಿಯಾಳುಗಳು ರಾಜೀನಾಮೆಯನ್ನು ತಡೆಹಿಡಿದಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ಅವರೇ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿದಿದ್ದಾರೆ ಎಂದು ಹಿರಿಯ ನಾಯಕರೇ ಮಾತನಾಡಿಕೊಳ್ಳುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತ ವರ್ಗಕ್ಕೀಗ ನಾವಿಕನಿದ್ದರೂ, ನಾವಿಕನಿಲ್ಲದ ದೋಣಿಯಲ್ಲಿ ಕೂತಿರುವ ವೇದನೆ. ಹಾಗಾಗಿಯೇ ಹೊಸ ಅಧ್ಯಕ್ಷರನ್ನು ಎದುರು ನೋಡುತ್ತಿದ್ದಾರೆ.
ಶೋಭಾ ಕರಂದ್ಲಾಜೆ ಹೆಸರು ಮುನ್ನೆಲೆಗೆ: ಅಧ್ಯಕ್ಷ ಸ್ಥಾನದ ಮೇಲೆ ಹಲವರ ಕಣ್ಣಿದ್ದರೂ, ಅವರಲ್ಲಿ ಅನೇಕರ ಪಕ್ಷ ನಿಷ್ಠೆ ಹಾಗೂ ಬದ್ಧತೆಯೇ ಪ್ರಶ್ನಾರ್ಹ. ಈ ಕಾರಣಕ್ಕಾಗಿಯೇ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೆಸರು ಮುನ್ನೆಲೆಗೆ ಬಂದಿದೆ. ಶೋಭಾರನ್ನು ಆಯ್ಕೆ ಮಾಡಿದರೆ ಮಾಜಿ ಸಿಎಂ ಯಡಿಯೂರಪ್ಪ ಕೂಡ ವಿರೋಧಿಸಲಾರರು ಎಂಬುದೂ ಈ ವಾದಕ್ಕೆ ಇಂಬು ನೀಡಿದೆ. ಕೇಂದ್ರ ಸಚಿವರಾದ ಬಳಿಕ ಶೋಭಾಗೆ ದಿಲ್ಲಿ ವರಿಷ್ಠರು ಕೂಡ ಪಕ್ಷದಲ್ಲಿ ವಿವಿಧ ಜವಾಬ್ದಾರಿಗಳನ್ನು ನೀಡಿರುವುದು ಗಮನಾರ್ಹ. ಪ್ರಭಾವಿ ಒಕ್ಕಲಿಗ ಸಮುದಾಯದ ಶೋಭಾ, ಆಕ್ರಮಣಕಾರಿ ಧೋರಣೆ, ಅಡ್ಜಸ್ಟ್ಮೆಂಟ್ ರಾಜಕಾರಣದಿಂದ ದೂರವಿರುವುದು ಹಾಗೂ ಉತ್ಸಾಹ ತಗ್ಗಿರುವ ಕಾರ್ಯಕರ್ತ ವರ್ಗಕ್ಕೆ ಟಾನಿಕ್ ಅಗಬಲ್ಲರು ಎಂಬ ಅಭಿಪ್ರಾಯವಿದೆ. ಆದರೆ, ತಮಗೆ ಅಧಿಕಾರ ನೀಡಿದರೆ ಉಳಿದ ನಾಯಕರ ಸಹಕಾರ ಸಿಗುವುದೇ? ಕಾಲೆಳೆಯುವವರ ಮಧ್ಯೆ ಕೆಲಸ ಮಾಡುವುದು ಹೇಗೆ ಎಂಬ ಪ್ರಶ್ನೆ ಅವರನ್ನು ಕಾಡಿದೆ. ಸಂಘಟನೆ ವಿಷಯದಲ್ಲಿ ಫ್ರೀ ಹ್ಯಾಂಡ್ ನೀಡಿದರೆ ಅವರು ಖಂಡಿತ ಬದ್ಧತೆಯಿಂದ ಕೆಲಸ ಮಾಡುತ್ತಾರೆ ಎಂದು ಆಪ್ತರೊಬ್ಬರು ಹೇಳುತ್ತಾರೆ.
ಮುಂದುವರಿದರೆ ಮತ್ತಷ್ಟು ಸಮಸ್ಯೆ: ಮುಂದಿನ ಲೋಕಸಭೆ ಚುನಾವಣೆವರೆಗೆ ಹಾಲಿ ಅಧ್ಯಕ್ಷರನ್ನೇ ಮುಂದುವರಿಸಬಹುದು ಎಂದೂ ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ. ಒಂದು ವೇಳೆ ವರಿಷ್ಠರು ಅಂಥದ್ದೊಂದು ನಿರ್ಧಾರ ಕೈಗೊಂಡಲ್ಲಿ ಅದು ಪಕ್ಷಕ್ಕೆ ಮತ್ತಷ್ಟು ಹಾನಿ ಮಾಡುವುದು ನಿಶ್ಚಿತ. ಲೋಕಸಭೆ ಚುನಾವಣೆಯಲ್ಲಿ ಈ ಬಾರಿ 10 ಸೀಟು ಗೆಲ್ಲುವ ಲೆಕ್ಕಾಚಾರದಲ್ಲಿರುವ ಕಾಂಗ್ರೆಸ್ಗೆ ನಾವೇ ಅಸ್ತ್ರ ಕೊಟ್ಟಂತಾಗುತ್ತದೆ. ಅದನ್ನು ತಡೆಯಲು ಸಮರ್ಥ ನಾಯಕನ ತುರ್ತು ಆಯ್ಕೆ ಅನಿವಾರ್ಯ ಎಂದು ಪಕ್ಷದ ಪ್ರಮುಖ ಸಂಸದರೊಬ್ಬರು ವಿಜಯವಾಣಿ ಜತೆ ಅನಿಸಿಕೆ ಹಂಚಿಕೊಂಡಿದ್ದಾರೆ.
ಚುನಾವಣೆಯಲ್ಲಿ ಸೋತ ಕೆಲ ದಿನಗಳ ಬಳಿಕ ಶೋಭಾ ಕರಂದ್ಲಾಜೆ ದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ರಾಜ್ಯ ಬಿಜೆಪಿ ಹಾಲಿ ಸ್ಥಿತಿ-ಗತಿ ಹಾಗೂ ಚುನಾವಣೆಯಲ್ಲಿ ಪಕ್ಷ ಯಾವ್ಯಾವ ಕಾರಣಗಳಿಂದ ಹಿನ್ನಡೆ ಅನುಭವಿಸಿತು ಎಂಬ ಬಗ್ಗೆ ಬರೋಬ್ಬರಿ ಒಂದೂವರೆ ತಾಸು ಅನಿಸಿಕೆ ಹಂಚಿಕೊಂಡು ಬಂದಿದ್ದಾರೆ. ಶೋಭಾ ಜತೆ ಈ ಸುದೀರ್ಘ ಚರ್ಚೆ ಸಹಜವಾಗಿಯೇ ಬಿಜೆಪಿ ವಲಯದಲ್ಲಿ ಕುತೂಹಲ ಕೆರಳಿಸಿದೆ.
ಬೇರೆ ಯಾರಿದ್ದಾರೆ?: ವಿಧಾನಸಭೆ ಪ್ರತಿಪಕ್ಷ ಸ್ಥಾನಕ್ಕೆ ಲಿಂಗಾಯತ ಸಮುದಾಯದ ವ್ಯಕ್ತಿಯನ್ನು ಮಾಡಿದರೆ ಒಕ್ಕಲಿಗರಿಗೆ ಅಧ್ಯಕ್ಷ ಸ್ಥಾನ ನೀಡಬಹುದು. ಹೀಗಾಗಿ ಶೋಭಾ ಹೆಸರಿನ ಜತೆ ಸಿ.ಟಿ. ರವಿ, ಆರ್. ಅಶೋಕ್, ಅಶ್ವತ್ಥನಾರಾಯಣ ಹೆಸರೂ ಚಾಲ್ತಿಯಲ್ಲಿದೆ. ಒಂದು ವೇಳೆ ಪ್ರತಿಪಕ್ಷ ನಾಯಕನನ್ನಾಗಿ ಬೇರೆ ಸಮುದಾಯದ ವ್ಯಕ್ತಿ ಆಯ್ಕೆಯಾದರೆ ಆಗ ಲಿಂಗಾಯತ ಸಮುದಾಯಕ್ಕೆ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ಒಲಿದರೂ ಅಚ್ಚರಿ ಇಲ್ಲ. ಲಿಂಗಾಯತರಲ್ಲಿ ಸದ್ಯಕ್ಕೆ ಶಿಕಾರಿಪುರ ಶಾಸಕ, ಬಿಎಸ್ವೈ ಪುತ್ರ ಬಿ.ವೈ. ವಿಜಯೇಂದ್ರ ಹೆಸರುವಾಸಿಯಾಗಿದ್ದಾರೆ. ಅವರ ಸೋದರ, ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಕೇಂದ್ರದಲ್ಲಿ ಮಂತ್ರಿಯಾದರೆ ಆಗ ಲೆಕ್ಕಾಚಾರಗಳು ತಲೆಕೆಳಗಾಗಬಹುದು. ಹೊಸ ಪ್ರಯೋಗದ ನಿರೀಕ್ಷೆ ಉಲ್ಟಾ ಮಾಡುವ ತೀರ್ಮಾನ ಹೊರಬಿದ್ದರೂ ಅಚ್ಚರಿ ಇಲ್ಲ.