ನವದೆಹಲಿ : ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯ ನಾಯಕಿ ಹಾಗೂ ಸಿಎಂ ಮಮತಾ ಬ್ಯಾನರ್ಜಿ ಅವರು ನಂದೀಗ್ರಾಮದಲ್ಲಿ ಗೆದ್ದಿದ್ದು, ಅವರ ಪಕ್ಷ ರಾಜ್ಯದ 200 ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದೆ. ಈ ಸಮಯದಲ್ಲಿ ಪ್ರಮುಖ ಪ್ರತಿಸ್ಪರ್ಧಿಯಾದ ಬಿಜೆಪಿಯ ಹಿರಿಯ ನಾಯಕರಾದ ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ದೀದಿಗೆ ಗೆಲುವಿನ ಶುಭಾಶಯ ಕೋರಿದ್ದಾರೆ.
ಬ್ಯಾನರ್ಜಿ ಅವರಿಗೆ ಟ್ವಿಟರ್ ಮೂಲಕ ಶುಭಾಶಯ ಕೋರಿದ ಮೊದಲ ಬಿಜೆಪಿ ನಾಯಕರಾದ ರಾಜ್ನಾಥ್ ಸಿಂಗ್, 'ಬಂಗಾಳದ ಸಿಎಂ ದೀದಿಗೆ ಅವರ ಪಕ್ಷದ ಗೆಲುವಿನ ಶುಭಾಶಯಗಳು. ಅವರ ಮುಂದಿನ ಅಧಿಕಾರಾವಧಿಗೆ ನನ್ನ ಹಾರೈಕೆಗಳು' ಎಂದು ಬರೆದಿದ್ದಾರೆ. ಮತ್ತೊಂದು ಟ್ವೀಟ್ನಲ್ಲಿ ಸಿಂಗ್ ಅವರು ಕೇರಳದಲ್ಲಿ ಎಲ್ಡಿಎಫ್ ಪುನಃ ಗೆಲುವು ಸಾಧಿಸಿದ್ದಕ್ಕೆ ಸಿಎಂ ಪಿಣರಾಯಿ ವಿಜಯನ್ ಅವರಿಗೂ ಶುಭಾಶಯ ಕೋರಿದ್ದಾರೆ.
ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಮಮತಾ ಬ್ಯಾನರ್ಜಿ, ತಮಿಳುನಾಡಿನಲ್ಲಿ ಗೆಲುವು ಪಡೆದ ಡಿಎಂಕೆಯ ಎಂ.ಕೆ.ಸ್ಟಾಲಿನ್ ಮತ್ತು ಕೇರಳದ ವಿಜಯನ್ ಅವರಿಗೆ ಶುಭಾಶಯ ಕೋರಿ ಟ್ವೀಟ್ ಮಾಡಿದ್ದಾರೆ. (ಏಜೆನ್ಸಿಸ್)