ಬೆಳಗಾವಿಯಲ್ಲಿ ಜಯಭೇರಿ ಬಾರಿಸಿದ ಮಂಗಲಾ ಅಂಗಡಿ, ಕಡಿಮೆ ಅಂತರದಲ್ಲಿ ಸೋಲುಂಡ ಸತೀಶ್​ ಜಾರಕಿಹೊಳಿ

mangala suresh
Published on

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕೇಂದ್ರದ ಮಾಜಿ ಸಚಿವ ದಿ. ಸುರೇಶ್​ ಅಂಗಡಿ ಪತ್ನಿ ಮಂಗಲಾ ಅಂಗಡಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್​ ಅಭ್ಯರ್ಥಿ ಸತೀಶ್​ ಜಾರಕಿಹೊಳಿ ಸೋಲುಂಡಿದ್ದಾರೆ. ಆರಂಭದಿಂದಲೂ ಕ್ಲೈಮಾಕ್ಸ್​ ಹಂತದವರೆಗೂ ಹಾವು ಏಣಿಯಂತಿದ್ದ ಮತ ಗಳಿಕೆ, ಕ್ಷಣಕ್ಷಣಕ್ಕೂ ರೋಚಕ ತಿರುವು ಪಡೆಯುತ್ತಲೇ ಇತ್ತು. ಅಂತಿಮವಾಗಿ ಮಂಗಲಾ 2912 ಮತಗಳ ಅಂತರದಲ್ಲಿ ಗೆದ್ದು ಬೀಗಿದ್ದಾರೆ.

ಏ.17ರಂದು ನಡೆದಿದ್ದ ಚುನಾವಣೆಯಲ್ಲಿ ಶೇ.56.02 ಮತದಾನವಾಗಿತ್ತು. ಮತ ಎಣಿಕೆಯ ಆರಂಭದಲ್ಲಿ ಸತೀಶ್​ ಜಾರಕಿಹೊಳಿ ಆರಂಭಿಕ ಮುನ್ನಡೆ ಸಾಧಿಸಿದ್ದರಾದರೂ ತದನಂತರ ಈ ಮಂಗಲಾಗೆ ಮುನ್ನಡೆ ಸಿಕ್ಕಿತು. 35ನೇ ಸುತ್ತಿನಿಂದ ಮತ್ತೆ ಹಾವುಏಣಿ ಆಟ ಶುರುವಾಯಿತು. ಅಲ್ಲಿಂದ ಸತೀಶ್​ ಮುನ್ನಡೆ ಕಾಯ್ದುಕೊಂಡು ಬಂದರು. ಇಬ್ಬರು ಪಡೆದ ಮತಗಳ ನಡುವಿನ ಅಂತರ ಕಡಿಮೆ ಇದ್ದಿದ್ದರಿಂದ ಕೊನೇ ಸುತ್ತಿನ ಮತ ಎಣಿಕೆವರೆಗೂ ಭಾರಿ ಕುತೂಹಲ ಮೂಡಿಸಿತ್ತು. 10 ಸಾವಿರ ಮತಗಳ ಲೀಡ್​ನಲ್ಲಿದ್ದ ಸತೀಶ್​, 76ನೇ ಸುತ್ತಿನಲ್ಲಿ 1628 ಮತಗಳ ಅಂತರಕ್ಕೆ ಇಳಿದದ್ದು, ಕಾಂಗ್ರೆಸ್​ನಲ್ಲಿ ಎದೆಬಡಿತ ಹೆಚ್ಚಿಸಿತ್ತು. ಹೀಗೆ ಮುಂದುವರಿದ ರೋಚಕ ಕ್ಲೈಮಾಕ್ಸ್​ನಲ್ಲಿ ತೀವ್ರ ಪೈಪೋಟಿ ಕೊಟ್ಟ ಮಂಗಲಾ ಅಂಗಡಿ, 80ನೇ 3101 ಮತಗಳ ಮುನ್ನಡೆ ಪಡೆಯುವ ಮೂಲಕ ಸತೀಶ್​ರನ್ನ ಹಿಂದಿಕ್ಕಿದರು. ಇಬ್ಬರೂ ಪಡೆದ ಮತಗಳ ನಡುವಿನ ಅಂತರ ಕಡಿಮೆ ಇದ್ದಿದ್ದರಿಂದ ಕೊನೇ ಸುತ್ತಿನ ಮತ ಎಣಿಕೆ ವರೆಗೂ ಭಾರಿ ಕುತೂಹಲ ಮೂಡಿಸಿತ್ತು. ಅಂತಿಮವಾಗಿ ಮಂಗಲಾ 4,35,202 ಮತಗಳನ್ನು ಪಡೆದು ಜಯಭೇರಿ ಭಾರಿಸಿದರು. ಸತೀಶ್​ ಜಾರಕಿಹೊಳಿ 4,32,299 ಮತಗಳನ್ನು ಪಡೆಯುವ ಮೂಲಕ ಪರಾಭವಗೊಂಡರು.

ಪ್ರತಿಷ್ಠಿತ ಅಖಾಡವಾಗಿದ್ದ ಬೆಳಗಾವಿಯಲ್ಲಿ ಕಾಂಗ್ರೆಸ್​ ಮತ್ತು ಬಿಜೆಪಿ ನಡುವೆ ಗೆಲುವಿಗಾಗಿ ತೀವ್ರ ಜಿದ್ದಾಜಿದ್ದಿ ನಡೆದಿತ್ತು. ಮಂಗಲಾ ಅಂಗಡಿ ಅವರನ್ನು ಕಣಕ್ಕಿಳಿಸಿದ ಬಿಜೆಪಿ, ಅನುಕಂಪದ ಮತಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್​ ಎರಡೂ ಪಕ್ಷಗಳು ಪ್ರತಿಷ್ಠೆಯನ್ನ ಪಣಕ್ಕಿಟ್ಟು ಹೋರಾಟ ನಡೆಸಿದ್ದರ ಪರಿಣಾಮ ಗೆಲುವಿನ ಅಂತರ ಹೆಚ್ಚೇನೂ ಇಲ್ಲ. ಮರಾಠ ಸಮುದಾಯದ ಮತಗಳನ್ನು ಪಡೆಯುವಲ್ಲಿ ಎಂಇಎಸ್​ ಅಭ್ಯರ್ಥಿ ಯಶಸ್ವಿಯಾದರಾದರೂ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ.

.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net