ನ್ಯೂಸ್

ಬಿಜೆಪಿ ಜನರ ಮೇಲೆ ಭಾಷಾ ತುರ್ತು ಪರಿಸ್ಥಿತಿಯನ್ನು ಹೇರುತ್ತಿದೆ; ಹಿಂದಿ ಹೇರಿಕೆಗೆ ಅವಕಾಶ ನೀಡುವುದಿಲ್ಲ; ಉದ್ಧವ್ ಠಾಕ್ರೆ| Uddhav Thackeray

ಮುಂಬೈ: ಸರ್ಕಾರಿ ಶಾಲೆಗಳಲ್ಲಿ ಹಿಂದಿಯನ್ನು ಮೂರನೇ ಭಾಷೆಯಾಗಿ ಪರಿಚಯಿಸುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರವನ್ನು ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ತೀವ್ರವಾಗಿ ವಿರೋಧಿಸಿದ್ದಾರೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಠಾಕ್ರೆ, ಜೂನ್ 29 (ಭಾನುವಾರ) ರಂದು ಸರ್ಕಾರಿ ನಿರ್ಣಯವನ್ನು ಸಾಂಕೇತಿಕವಾಗಿ ಸುಡುವುದು ಮತ್ತು ಜುಲೈ 7 ರಂದು ಸಾರ್ವಜನಿಕ ಪ್ರದರ್ಶನ ಸೇರಿದಂತೆ ಸರಣಿ ಪ್ರತಿಭಟನೆಗಳನ್ನು ಕೈಗೊಳ್ಳುವುದಾಗಿ ಘೋಷಣೆ ಹೊರಡಿಸಿದ್ದಾರೆ.‘

ಇಂದು ಮರಾಠಿಯನ್ನು ಪ್ರೀತಿಸುವವರು ಪ್ರತಿಭಟನೆಯಲ್ಲಿ ಒಗ್ಗೂಡಿದ್ದಾರೆ. ಬಿಜೆಪಿ ಮೂಲ ಶಿವಸೇನೆಯನ್ನು ನಾಶಮಾಡಲು ಏಕೆ ಬಯಸಿತು ಎಂಬುದು ಈಗ ಸ್ಪಷ್ಟವಾಗಿದೆ ಎಂದು ಠಾಕ್ರೆ ಹೇಳಿದ್ದಾರೆ. ತಾವು ಅಥವಾ ತಮ್ಮ ಪಕ್ಷ ಯಾವುದೇ ಭಾಷೆಯ ವಿರೋಧಿಯಲ್ಲ ಎಂದು ಅವರು ಒತ್ತಿ ಹೇಳಿದ್ದು, ನಾವು ಹಿಂದಿಯನ್ನು ವಿರೋಧಿಸುವುದಿಲ್ಲ, ಹಿಂದಿ ಚಲನಚಿತ್ರೋದ್ಯಮ ಹುಟ್ಟಿದ್ದು ಮಹಾರಾಷ್ಟ್ರದಲ್ಲಿ. ಆದರೆ ಭಾಷೆಯನ್ನು ಬಲವಂತವಾಗಿ ಹೇರುವುದು ಸ್ವೀಕಾರಾರ್ಹವಲ್ಲ ಎಂದಿದ್ದಾರೆ.

1 ರಿಂದ 5ನೇ ತರಗತಿಯವರೆಗಿನ ಮರಾಠಿ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಹಿಂದಿ ಕಲಿಸುವ ಬಗ್ಗೆ ವಿವಾದವಿರುವ ಸಮಯದಲ್ಲಿ ಉದ್ಧವ್ ಠಾಕ್ರೆ ಅವರ ಈ ಹೇಳಿಕೆ ಬಂದಿದೆ. ಹಿಂದಿ ಹೇರುವುದು ಬಿಜೆಪಿಯ ಗುಪ್ತ ಕಾರ್ಯಸೂಚಿ ಎಂದು ಆರೋಪಿಸಿದ ಅವರು, ಅಧಿಕಾರದಲ್ಲಿರುವ ಪಕ್ಷವು ಒಂದು ರೀತಿಯಲ್ಲಿ ಭಾಷೆಯ ಮೇಲೆ ತುರ್ತು ಪರಿಸ್ಥಿತಿಯನ್ನು ಹೇರುತ್ತಿದೆ ಎಂದು ಕಿಡಿ ಕಾರಿದ್ದಾರೆ.

ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಹಿಂದಿನ ಹೇಳಿಕೆಗಳನ್ನು ಉಲ್ಲೇಖಿಸಿ, "ಒಂದು ಭಾಷೆ, ಒಂದು ಪಕ್ಷ" ಸಿದ್ಧಾಂತವನ್ನು ಹೇರಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಠಾಕ್ರೆ ಆರೋಪಿಸಿದರು. ಇದು ಭಾಷಾ ತುರ್ತು ಪರಿಸ್ಥಿತಿ, ಒಂದು ಕಾಲದಲ್ಲಿ ತಮ್ಮನ್ನು ಶಿವಸೈನಿಕರು ಎಂದು ಕರೆದುಕೊಂಡಿದ್ದ ದೇಶದ್ರೋಹಿಗಳು ಈಗ ಈ ಸರ್ಕಾರದ ಭಾಗವಾಗಿದ್ದಾರೆ ಎಂದು ಆರೋಪಿಸಿದರು.

ಹಿಂದಿಯನ್ನು ಮೂರನೇ ಭಾಷೆಯನ್ನಾಗಿ ಮಾಡುವ ನಿರ್ಧಾರವನ್ನು ಮುಖ್ಯಮಂತ್ರಿ ಹಿಂತೆಗೆದುಕೊಂಡರೆ ಎರಡು ನಿಮಿಷಗಳಲ್ಲಿ ವಿವಾದ ಬಗೆಹರಿಯಬಹುದು ಎಂದು ಅವರು ಹೇಳಿದರು. ಈ ವಿಷಯವನ್ನು ಬೀದಿಗಿಳಿಸಲು ನಾವು ಯೋಜಿಸಿದ್ದೇವೆ. ಇದು ಮರಾಠಿ ಹೆಮ್ಮೆಗಾಗಿ ಪ್ರತಿಭಟನೆಯಾಗಿದೆ, ಬೇರೆ ಯಾವುದೇ ಭಾಷೆಯ ವಿರುದ್ಧವಲ್ಲ ಎಂದು ಠಾಕ್ರೆ ಹೇಳಿದ್ದಾರೆ.

(ಏಜೆನ್ಸೀಸ್)