ನ್ಯೂಸ್

ರಾಜ್ಯ ಸರ್ಕಾರದ ಹನಿಮೂನ್‌ ಪಿರೇಡ್​ ಮುಗಿದಿದೆ; ಆದರೆ ಅಭಿವೃದ್ಧಿ ಕೆಲಸ ಮಾತ್ರ ಶೂನ್ಯ: ಬಿ.ವೈ. ವಿಜಯೇಂದ್ರ

ಮೋಹನ್​ ಶೆಟ್ಟಿ

ಕಲಬುರ್ಗಿ: ರಾಜ್ಯದಲ್ಲಿ‌ ಕಾಂಗ್ರೆಸ್​ ಸರ್ಕಾರ ಬಂದು‌ ಇಂದಿಗೆ ಒಂದು ವರ್ಷ ಕಳೆದಿದೆ. ಒಂದು ಅರ್ಥದಲ್ಲಿ ಹೇಳುವುದಾದರೆ, ರಾಜ್ಯ ಸರ್ಕಾರದ ಹನಿಮೂನ್‌ ಪೆರೆಡ್ ಅಂತ್ಯಗೊಂಡಿದೆ. ಆದರೆ, ಅಭಿವೃದ್ಧಿ ಕೆಲಸ ಮಾತ್ರ ಶೂನ್ಯ ಎಂದು ಕಲಬುರ್ಗಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿಕೆ ನೀಡಿದ್ದಾರೆ.

"ಯಾವ ಸಚಿವ ಶಾಸಕರು ಸಹ ಗುದ್ದಲಿ ಪೂಜೆ ಮಾಡಲಿಲ್ಲ, ಹೊಸ ಅಭಿವೃದ್ಧಿ ಕೆಲಸ‌ವೂ ಮಾಡಲಿಲ್ಲ. ಕೇಂದ್ರ ಸರ್ಕಾರದಿಂದ ಬರ ಪರಿಹಾರ ಬಂದ್ರು ರೈತರಿಗೆ ಹಣ ನೀಡುತ್ತಿಲ್ಲ. ಟೆಕ್ನಿಕಲ್ ಕಾರಣ ಹೇಳಿ ಎಲ್ಲಾ ರೈತರಿಗೆ ಪರಿಹಾರ ನೀಡಿಲ್ಲ. ರೈತರಿಗೆ ಈ ಸರ್ಕಾರ ಪರಿಹಾರ ಹಾಗು ಬೆಳೆ ವಿಮೆ ಹಣ ಸಹ ಕೊಡುತ್ತಿಲ್ಲ. ರಾಜ್ಯದಲ್ಲಿ ನಾಲ್ಕು ದಿನಗಳಿಂದ ವಿಧಾನ ಪರಿಷತ್ ಚುನಾವಣೆ ಸಂಬಂಧದಲ್ಲಿ ಪ್ರಚಾರ ಮಾಡಿದ್ದೇನೆ. ಈಶಾನ್ಯ ಪದವೀಧರರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅಮರನಾಥ್ ಪಾಟೀಲ್ ಈ ಹಿಂದೆ ಎಂಎಲ್​ಸಿ ಆಗಿ ಉತ್ತಮ ಕೆಲಸ ಮಾಡಿದ್ದಾರೆ" ಎಂದರು.

"ನಮ್ಮ ಅಭ್ಯರ್ಥಿ ಗೆಲ್ಲುವ ವಾತಾವರಣ ಪೂರಕವಾಗಿದೆ. ಕಾನೂನು ಸುವ್ಯವಸ್ಥೆ ಬಗ್ಗೆ ಇಡೀ ದೇಶದಲ್ಲಿ ಚರ್ಚೆಯಾಗುತ್ತಿದೆ. ಚನ್ನಗಿರಿಯಲ್ಲಿ ನಡೆದ ಘಟನೆ ಪೊಲೀಸರಿಗೆ ಪೊಲೀಸರೇ ರಕ್ಷಣೆ ಕೊಡೋ ಪರಿಸ್ಥಿತಿ ಬಂದಿದೆ. ಚನ್ನಗಿರಿಯಲ್ಲಿ ನಡೆದ ಘಟನೆ ಮಟ್ಕಾಗೆ ಸಂಬಂಧಪಟ್ಟಿದ್ದು, ಅರೆಸ್ಟ್ ಆದ ವ್ಯಕ್ತಿ ಮೃತನಾಗಿದ್ದಾನೆ. ಸಾವಿರಾರು ಜನ ಠಾಣೆಗೆ ನುಗ್ಗಿ ಪೊಲೀಸರ ಮೇಲೆ ಹಲ್ಲೆ ಮಾಡಲಾಗಿದೆ. ಇದೆಲ್ಲ ನೋಡಿದ್ರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಲ್ಲಿಗೆ ಬಂದು ತಲುಪಿದೆ ಎಂಬುದನ್ನು ಒಮ್ಮೆ ನೋಡಿ. ಈ ರಾಜ್ಯದಲ್ಲಿ ಗೃಹ ಸಚಿವರು ಇದ್ದಾರೆ ಅನ್ನೋದೇ ಅನುಮಾನ" ಎಂದು ಹೇಳಿದ್ದಾರೆ.