ನ್ಯೂಸ್

ನಾಲ್ವರನ್ನು ಪರಿಷತ್​ ಅಖಾಡಕ್ಕಿಳಿಸಿದ ಬಿಜೆಪಿ, ಕಟೀಲ್​ರಿಂದ ಗುರುವಿನ ಗುಣಗಾನ

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಒಬ್ಬ ಪಕ್ಷೇತರ ಅಭ್ಯರ್ಥಿ ಸೇರಿ ಎಂಟು ಮಂದಿ ಸ್ಪರ್ಧಿಸಿದ್ದಾರೆ. ಈ ಪೈಕಿ ಬಿಜೆಪಿ ಅಭ್ಯರ್ಥಿಗಳಾಗಿ ನಾಲ್ವರು ಇಂದು(ಗುರುವಾರ) ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ತನ್ನ ಗುರು ಪ್ರತಾಪ್ ಸಿಂಹ ನಾಯಕ್ ಅವರನ್ನು ಗುಣಗಾನ ಮಾಡಿದರು. ಇನ್ನು ಎಂಟಿಬಿ ನಾಗರಾಜು, ನನ್ನ ಸೋಲಿಗೆ ತ್ರಿಮೂರ್ತಿಗಳೇ ಕಾರಣ ಎಂದು ಮತ್ತೊಮ್ಮೆ ಗುಡುಗಿದರು. ಟಿಕೆಟ್​ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡಿರುವ ಮಾಜಿ ಸಚಿವ ಎಚ್​. ವಿಶ್ವನಾಥ್​ ಜತೆ ನಾವಿದ್ದೇವೆ. ಮುಂದೆ ಅವರಿಗೂ ಅವಕಾಶ ಸಿಗಲಿದೆ ಎಂಬ ಒಗ್ಗಟ್ಟಿನ ಮಾತು ಕೇಳಿಬಂತು. ಇದೆಲ್ಲದರ ಡೀಟೇಲ್ಸ್ ಇಲ್ಲಿದೆ.

ಬಿಜೆಪಿ ಅಭ್ಯರ್ಥಿಗಳಾದ ಎಂಟಿಬಿ ನಾಗರಾಜ್, ಆರ್. ಶಂಕರ್, ಸುನೀಲ್ ವಲ್ಯಾಪುರೆ ಹಾಗೂ ಪ್ರತಾಪ್ ಸಿಂಹ ನಾಯಕ ಅವರು ಬೆಳಗ್ಗೆ ಬಿಜೆಪಿ ಕಚೇರಿಗೆ ಆಗಮಿಸಿ ಬಿ ಫಾರಂ ಪಡೆದರು.

ಇದಕ್ಕೂ ಮುನ್ನ ಪಕ್ಷದ ಕಚೇರಿಯಲ್ಲಿ ಭಾರತಮಾತೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಬಳಿಕ ಪಕ್ಷದ ಸಂಸ್ಥಾಪಕ ಜಗನ್ನಾಥರಾವ್ ಜೋಷಿ ಪುತ್ಥಳಿಗೆ ಮಾಲಾರ್ಪಣೆ ಸಲ್ಲಿಸಿದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಅಭ್ಯರ್ಥಿಗಳಿಗೆ ಸಿಹಿ ತಿನ್ನಿಸಿ ಬಿ ಫಾರಂ ವಿತರಣೆ ಮಾಡಿದರು.

ಈ ವೇಳೆ ಪ್ರತಾಪ್ ಸಿಂಹ ನಾಯಕ್ ಅವರನ್ನು ಗುಣಗಾನ ಮಾಡಿದ ಕಟೀಲ್, ನಮ್ಮ ಗುರುಗಳು ನಮ್ಮನ್ನೆಲ್ಲ ಬೆಳೆಸಿದ್ದಾರೆ. ನಮಗೆ ಅವರು ಟಿಕೆಟ್ ಕೊಡಬೇಕಾಗಿತ್ತು.

ಆದರೆ, ಬದಲಾದ ಸನ್ನಿವೇಶದಲ್ಲಿ ನಾನು ಅವರಿಗೆ ಟಿಕೆಟ್ ಕೊಡುವಂತಾಗಿದೆ ಎನ್ನುತ್ತಾ ಬಿ ಫಾರಂ ವಿತರಿಸಿದರು.

ನನ್ನ ಸೋಲಿಗೆ ತ್ರಿಮೂರ್ತಿಗಳೇ ಕಾರಣ: ವಿಧಾನಸಭೆ ಉಪ ಚುನಾವಣೆಯಲ್ಲಿ ನನ್ನ ಸೋಲಿಗೆ ತ್ರಿಮೂರ್ತಿಗಳೇ ಕಾರಣ ಎಂದು ಎಂಟಿಬಿ ನಾಗರಾಜ್ ಕಿಡಿಕಾರಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್​.ಡಿ. ಕುಮಾರಸ್ವಾಮಿ ಮತ್ತು ಕಾಂಗ್ರೆಸ್​ನ ಹಿರಿಯ ನಾಯಕ ಡಿ.ಕೆ.ಶಿವಕುಮಾರ್​ ಅವರುಗಳು ಒಟ್ಟಾಗಿ ನನ್ನನ್ನು ಸೋಲಿಸಿದ್ದರು. ಎಚ್​. ವಿಶ್ವನಾಥ್ ಸೋಲಿಗೂ ಈ ಮೂವರೇ ಕಾರಣ ಎಂದು ಅಸಮಾಧಾನ ಹೊರಹಾಕಿದರು.

ಬಿಜೆಪಿ ವರಿಷ್ಠರು ಮತ್ತು ರಾಜ್ಯ ನಾಯಕರು ನನಗೆ ಭರವಸೆ ಕೊಟ್ಟಿದ್ರು. ವಿಧಾನ ಪರಿಷತ್​ಗೆ ಅವಕಾಶ ಕೊಟ್ಟಿದ್ದಾರೆ. ವಿಶ್ವನಾಥ್ ಹಾಗೂ ನಾವು ಒಟ್ಟಾಗಿದ್ದೇವೆ. ಕೋರ್ ಕಮಿಟಿಯಲ್ಲಿ ಮೂವರು ಹೆಸರನ್ನ ಸೂಚಿಸಲಾಗಿತ್ತು. ಆದರೆ, ಕೇಂದ್ರ ಚುನಾವಣಾ ಸಮತಿ ವಿಶ್ವನಾಥ್ ಹೆಸರು ಬಿಟ್ಟಿದೆ. ಸಿಎಂ ಯಡಿಯೂರಪ್ಪ ಅವರು ಮುಂದೆ ಎಲ್ಲ ಸರಿಪಡಿಸೋಣ ಎಂದು ಭರವಸೆ ನೀಡಿದ್ದಾರೆ ಎಂದು ಎಂಟಿಬಿ ನಾಗರಾಜ್​ ಹೇಳಿದರು.

ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ವೇಳೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಭೈರತಿ ಬಸವರಾಜು ಮತ್ತು ಎಸ್.ಟಿ. ಸೋಮಶೇಖರ್ ಉಪಸ್ಥಿತರಿದ್ದರು.