ನ್ಯೂಸ್

ಪ್ರಭಾವಿಗಳಿಗೆ ಮತ್ತೆ ಶುರುವಾಯ್ತು ಬಿಟ್ ಕಾಯಿನ್ ಭೀತಿ!; ಹ್ಯಾಕರ್ ಶ್ರೀಕಿ ಕೇಸಿನ ಮರುತನಿಖೆಗೆ ಸರ್ಕಾರ ಸಿದ್ಧತೆ

| ಕೀರ್ತಿನಾರಾಯಣ ಸಿ. ಬೆಂಗಳೂರು

ರಾಷ್ಟ್ರಮಟ್ಟದಲ್ಲಿ 2021 ಹಾಗೂ 2022ರಲ್ಲಿ ರಾಜಕೀಯ ಕೋಲಾಹಲ ಸೃಷ್ಟಿಸಿ ತಣ್ಣಗಾಗಿದ್ದ ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಬಿಟ್ ಕಾಯಿನ್ ಹಗರಣದ ಮರು ತನಿಖೆಗೆ ರಾಜ್ಯ ಸರ್ಕಾರ ಸಿದ್ಧತೆ ನಡೆಸಿರುವ ಬೆನ್ನಲ್ಲೇ ಪ್ರಕರಣದಲ್ಲಿ ಭಾಗಿಯಾದ ಆರೋಪ ಹೊತ್ತು ನಿಶ್ಚಿಯಂತೆಯಾಗಿದ್ದ ಹಲವು ಅಧಿಕಾರಿಗಳು, ರಾಜಕಾರಣಿಗಳು ಹಾಗೂ ಪ್ರಭಾವಿ ವ್ಯಕ್ತಿಗಳಿಗೆ ಮತ್ತೆ ಬಿಟ್ ಕಾಯಿನ್ ಭೀತಿ ಶುರುವಾಗಿದೆ. ಏತನ್ಮಧ್ಯೆ ಸದ್ಯ ಶ್ರೀಕಿ ಎಲ್ಲಿದ್ದಾನೆ? ಏನು ಮಾಡುತ್ತಿದ್ದಾನೆ? ಎಂಬ ಮಾಹಿತಿ ಪೊಲೀಸರಿಗೂ ಗೊತ್ತಿಲ್ಲ.

ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದ ಶ್ರೀಕಿ ವಿರುದ್ಧ ಕೋರ್ಟ್ ಚಾರ್ಜ್​ಶೀಟ್ ಸಲ್ಲಿಕೆಯಾಗಿದ್ದು ಬಿಟ್ಟರೆ ಬಿಟ್ ಕಾಯಿನ್ ವಹಿವಾಟಿಗೆ ಸಂಬಂಧಪಟ್ಟಂತೆ ಯಾವುದೇ ಸಾಕ್ಷ್ಯಾಧಾರ ಸಿಕ್ಕಿಲ್ಲ ಎಂದು ಹೇಳಲಾಗಿತ್ತು. ಅಧಿಕಾರಿಗಳು ಹಾಗೂ ರಾಜಕಾರಣಿಗಳ ಒತ್ತಡದಿಂದ ಪಾರದರ್ಶಕ ತನಿಖೆಯಾಗಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಈಗ ಕಾಂಗ್ರೆಸ್ ಸರ್ಕಾರ ಮರು ತನಿಖೆಗೆ ವಹಿಸುತ್ತಿದ್ದು, ಪುನಃ ಮೊದಲಿನಿಂದ ಹಗರಣದ ತನಿಖೆ ಆರಂಭವಾಗಲಿದೆ.

2021ರ ಜನವರಿಯಲ್ಲಿ 9 ಕೋಟಿ ರೂ. ಮೌಲ್ಯದ 31 ಬಿಟ್ ಕಾಯಿನ್​ಗಳನ್ನು ಶ್ರೀಕಿ ಖಾತೆಯಿಂದ ಜಪ್ತಿ ಮಾಡಿರುವುದಾಗಿ ಬೆಂಗಳೂರು ಪೊಲೀಸರು ಘೋಷಿಸಿದ್ದರು. ಆದರೆ, ನಂತರ ಶ್ರೀಕಿಯಿಂದ ಯಾವುದೇ ಬಿಟ್ ಕಾಯಿನ್​ಗಳನ್ನು ಜಪ್ತಿ ಮಾಡಿಲ್ಲ ಎಂದು ಆಗ ನಗರ ಪೊಲೀಸ್ ಆಯುಕ್ತರಾಗಿದ್ದ ಕಮಲ್ ಪಂತ್ ಸ್ಪಷ್ಟನೆ ಕೊಟ್ಟಿದ್ದರು. ಆದರೆ, 2019ರಲ್ಲಿ ರಾಜ್ಯ ಸರ್ಕಾರದ ಇ-ಪ್ರಕ್ಯೂರ್​ವೆುಂಟ್ ವೆಬ್​ಸೈಟ್ ಹ್ಯಾಕ್ ಮಾಡಿದ್ದ ಶ್ರೀಕಿ, 11.55 ಕೋಟಿ ರೂ. ಅನ್ನು ಇತರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದ. ಈ ಬಗ್ಗೆ ತನಿಖೆ ಕೈಗೊಂಡ ಸಿಐಡಿ ಅಧಿಕಾರಿಗಳು, ಅಕ್ರಮದಲ್ಲಿ ಭಾಗಿಯಾಗಿದ್ದ ಶ್ರೀಕಿ ಮತ್ತು ಇತರ ಸ್ವಯಂ ಸೇವಾ ಸಂಸ್ಥೆಗಳ 14 ಬ್ಯಾಂಕ್ ಖಾತೆಗಳನ್ನು ಬ್ಲಾ್ಯಕ್ ಮಾಡಿ 1.44 ಕೋಟಿ ರೂ. ಜಪ್ತಿ ಮಾಡಿದ್ದರು.

ಸರ್ಕಾರದ ಪೋರ್ಟಲ್​ಗಳನ್ನು ಹ್ಯಾಕ್ ಮಾಡಿ ಅದರಲ್ಲಿನ ಹಣವನ್ನು ಸ್ವಯಂ ಸೇವಾ ಸಂಸ್ಥೆಗಳಾದ ನಾಗ್​ಪುರದ ಉದಯ್ ಗ್ರಾಮ ವಿಕಾಶ್ ಸಂಸ್ಥೆ, ಉತ್ತರ ಪ್ರದೇಶದ ನಿಮ್ಮಿ ಎಂಟರ್​ಪ್ರೖೆಸಸ್ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದ. ಆನಂತರ ಎನ್​ಜಿಒ ಕಡೆಯಿಂದ ಮಾರಾಟಗಾರ, ಖರೀದಿದಾರ ನೆಪದಲ್ಲಿ ಹಣವನ್ನು ಶ್ರೀಕಿ ಸ್ವೀಕರಿಸಿರುವುದು ಸಿಐಡಿ ಅಧಿಕಾರಿಗಳ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಜತೆಗೆ ಬಿಟ್ ಕಾಯಿನ್ ವರ್ಗಾವಣೆಗೆ ಸಂಬಂಧಿಸಿದಂತೆ ಎವಿಡೆನ್ಸ್ ನಾಶಪಡಿಸಿರುವುದು ಗೊತ್ತಾಗಿತ್ತು. ಇದರ ಪತ್ತೆಗೆ ವಿಧಿವಿಜ್ಞಾನ ತಜ್ಞರಿಂದ ವಿಶ್ಲೇಷಣೆ ನಡೆಸುವ ಅಗತ್ಯವಿದೆ ಎಂದು ಸಿಐಡಿ ಘಟಕ ಅಧಿಕಾರಿಗಳು ಆಗ ವರದಿ ಕೊಟ್ಟಿದ್ದರು. ಆದರೆ, ವಿಧಿವಿಜ್ಞಾನ ತಜ್ಞರಿಗೆ ಪ್ರಕರಣವನ್ನು ವಹಿಸಲೇ ಇಲ್ಲ.

ಸ್ಯಾಂಡಲ್​ವುಡ್ ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ ಶ್ರೀಕಿಯೇ ಸಿಸಿಬಿ ಪೊಲೀಸರಿಗೆ ತನ್ನ ಬಿಟ್ ಕಾಯಿನ್ ವ್ಯಾಲೆಟ್ ತೋರಿಸಿದ್ದ. ನ್ಯಾಯಲಯವೇ ಅನುಮತಿ ಕೊಟ್ಟರೂ ಅದರಲ್ಲಿದ್ದ 186. 811 ಬಿಟ್ ಕಾಯಿನ್​ಗಳನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿರಲಿಲ್ಲ. ಕೆಜಿ ನಗರ, ಅಶೋಕ ನಗರ ಹಾಗೂ ಜೀವನ್ ಬಿಮಾನಗರ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು. ಈ ಎಲ್ಲ ಪ್ರಕರಣಗಳಲ್ಲೂ ಕೋರ್ಟ್​ಗೆ ಚಾರ್ಜ್​ಶೀಟ್ ಸಲ್ಲಿಕೆಯಾಗಿದೆ. ಕೆಲ ಪ್ರಕರಣಗಳಲ್ಲಿ ಬರೀ ಡ್ರಗ್ಸ್ ಬಳಕೆಗೆ ಸಂಬಂಧಪಟ್ಟಂತೆ ಶಿಕ್ಷೆ ಪ್ರಕಟವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೊರ್ಗನ್ ಪ್ರಕರಣಕ್ಕೂ ನಂಟು: ಪ್ರಪಂಚದ ಬಹುದೊಡ್ಡ ಕ್ರಿಪ್ಟೋಕರೆನ್ಸಿ ಹಗರಣದಲ್ಲಿ ಅಮೆರಿಕದಲ್ಲಿ ಬಂಧಿತರಾಗಿದ್ದ ನ್ಯೂಯಾರ್ಕ್​ನ ಲಿಶ್ಚನ್ ಸ್ಟೇನ್ ಹಾಗೂ ಹೀಥರ್ ರೀಹ್ನನ್ ಮೊರ್ಗನ್ ದಂಪತಿ ಪ್ರಕರಣಕ್ಕೂ ಹ್ಯಾಕರ್ ಶ್ರೀಕ ನಂಟಿರುವುದು ಗೊತ್ತಾಗಿತ್ತು. 2016 ಆಗಸ್ಟ್​ನಲ್ಲಿ ಕ್ರಿಪ್ಟೋಕರೆನ್ಸಿ ವಹಿವಾಟಿನ ಬಿಟ್​ಫಿನೆಕ್ಸ್ ವೆಬ್​ಸೈಟ್ ಹ್ಯಾಕ್ ಮಾಡಿದ್ದ ದಂಪತಿ, ಆಗ 71 ಮಿಲಿಯನ್ ಮೌಲ್ಯದ (7.10 ಕೋಟಿ) 1,19,754 ಬಿಟ್ ಕಾಯಿನ್ ಕದ್ದಿದ್ದರು. 2020 ನವೆಂಬರ್​ನಲ್ಲಿ ಸ್ಯಾಂಡಲ್​ವುಡ್ ಡ್ರಗ್ಸ್ ಪ್ರಕರಣದಲ್ಲಿ ಶ್ರೀಕಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಬಿಟ್​ಫಿನೆಕ್ಸ್ ಹ್ಯಾಕ್ ಮಾಡಿದ ಮೊದಲ ಹ್ಯಾಕರ್ ತಾನೇ ಎಂದು ಶ್ರೀಕೃಷ್ಣ ಹೇಳಿಕೆ ಕೊಟ್ಟಿದ್ದ.

ಮರು ತನಿಖೆಯಾದರೆ ಏನಾಗುತ್ತೆೆ?

  • ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಬಹುದು ಅಥವಾ ಸಿಐಡಿಗೆ ಹೇಳಬಹುದು.
  • ಸಿಸಿಬಿ, ಸಿಐಡಿ, ಇಡಿ ನಡೆಸಿರುವ ತನಿಖಾ ವರದಿ ಹಾಗೂ ಚಾರ್ಜ್​ಶೀಟ್​ಗಳ ಮಾಹಿತಿ ಅಧ್ಯಯನ.
  • ಆರೋಪಿ ಶ್ರೀಕಿಯನ್ನು ಪತ್ತೆಹಚ್ಚಿ ಪುನಃ ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆ.
  • ತನಿಖೆ ಸಂದರ್ಭದಲ್ಲಿ ಸಂಗ್ರಹಿಸಿದ್ದ ಸಾಕ್ಷ್ಯಾಧಾರಗಳನ್ನು ಮರು ಪರಿಶೀಲನೆ.
  • ಎಫ್​ಎಸ್​ಎಲ್ ನೆರವು ಪಡೆದು ವೆಬ್​ಸೈಟ್ ಹ್ಯಾಕ್, ಬಿಟ್ ಕಾಯಿನ್ ಕಳವಾಗಿದೆ ಎಂಬ ಮಾಹಿತಿ.
  • ಯಾವ್ಯಾವ ವ್ಯಾಲೆಟ್​ಗಳಿಂದ ಯಾರ ವ್ಯಾಲೆಟ್​ಗೆ ಎಷ್ಟು ಬಿಟ್ ಕಾಯಿ ವರ್ಗಾವಣೆ ಎಂಬ ವಿವರ ಸಂಗ್ರಹ.