ನವದೆಹಲಿ: ದೇಶದಲ್ಲಿ ಬಿಪರ್ಜಾಯ್ ಚಂಡಮಾರುತ ಅಬ್ಬರ ಜೋರಾಗಿದ್ದು, ಉತ್ತರಭಾರತದ ಹಲವೆಡೆ ಆತಂಕ ಸೃಷ್ಟಿಯಾಗಿದೆ. ಮತ್ತೊಂದೆಡೆ ಚಂಡಮಾರುತದ ಕಾರಣಕ್ಕೆ 67 ರೈಲುಗಳ ಸಂಚಾರ ರದ್ದುಗೊಂಡಿದೆ.
ಗುಜರಾತ್ನ ಸೌರಾಷ್ಟ್ರ ಮತ್ತು ಕಛ್ ಭಾಗದಲ್ಲಿ ಈಗಾಗಲೇ ಚಂಡಮಾರುತ ವ್ಯಾಪಿಸುವ ಕುರಿತು ಹವಾಮಾನ ಮುನ್ಸೂಚನೆ ನೀಡಲಾಗಿದೆ. ಅದರಲ್ಲೂ ಜೂ. 15ರ ಸಂಜೆ ಸುಮಾರಿಗೆ ಗುಜರಾತ್ನ ಜಖಾವು ಬಂದರು ಬಳಿ ಅತಿ ತೀವ್ರ ಚಂಡಮಾರುತ ಬೀಸಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಗುಜರಾತ್ಗೆ ಜೂ. 15ರಂದು ಅಪ್ಪಳಿಸಲಿರುವ ಬಿಪರ್ಜಾಯ್ ಚಂಡಮಾರುತದ ಹಿನ್ನೆಲೆಯಲ್ಲಿ ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ರಾಜ್ಯ ತುರ್ತು ಕಾರ್ಯಾಚರಣಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಕಾರ್ಯಕರ್ತರ ಮನೆ ಬಾಗಿಲಿಗೇ ಬರಲಿದ್ದಾರೆ ಬಿಜೆಪಿ ನಾಯಕರು: ಐದು ದಿನಗಳಲ್ಲಿ ರಾಜ್ಯದ 50 ಲಕ್ಷ ಮನೆಗಳಿಗೆ ಭೇಟಿ!
ಮಹಾರಾಷ್ಟ್ರದಲ್ಲೂ ಬಿಪರ್ಜಾಯ್ ಚಂಡಮಾರುತದ ಅಬ್ಬರ ಜೋರಾಗಿರಲಿದ್ದು, ಜೂ. 13ರಿಂದ 15ರ ವರೆಗೆ ಜನರು ಕಡಲತೀರಕ್ಕೆ ಹೋಗಬಾರದು ಎಂದು ಪಾಲ್ಘಾರ್ ಜಿಲ್ಲಾಡಳಿತ ನಿರ್ಬಂಧ ಹೇರಿದೆ.
ಈಗಾಗಲೇ ಮೂರು ಆರ್ಪಿಎಫ್ ಬೆಟಾಲಿಯನ್ ಮತ್ತು ವೈದ್ಯಕೀಯ ತಂಡಗಳನ್ನು ಮುಂಬೈ ಮತ್ತು ಗುಜರಾತ್ಗೆ ಕಳುಹಿಸಿಕೊಡಲಾಗಿದೆ. ಭುಜ್, ಗಾಂಧಿಧಾಮ್, ದ್ವಾರಕಾ, ಪೋರಬಂದರ್ ಮುಂತಾದೆಡೆಯ ರೈಲುಗಳನ್ನು ಮುಂದಿನ 2-3 ದಿನಗಳ ಕಾಲ ಸ್ಥಗಿತಗೊಳಿಸಲಾಗಿದೆ ಎಂದು ವೆಸ್ಟರ್ನ್ ರೈಲ್ವೇಯ ಜನರಲ್ ಮ್ಯಾನೇಜರ್ ಅಶೋಕ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.
ಇದನ್ನೂ ಓದಿ: ಇನ್ನು ಹಾಡು ಕೇಳುತ್ತ ಸ್ನಾನ ಮಾಡಲ್ಲ ಎಂದು ಕ್ಷಮೆ ಕೋರಿದ ವಿದ್ಯಾರ್ಥಿನಿ!; ದಯವಿಟ್ಟು ಫೋನ್ ಹಿಂದಿರುಗಿಸಿ ಎಂದು ಮನವಿ
ಇಂಡಿಯನ್ ಕೋಸ್ಟ್ ಗಾರ್ಡ್ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಬಂದರು ಪ್ರಾಧಿಕಾರಗಳಿಗೆ ಮುನ್ನೆಚ್ಚರಿಕೆಯ ಸಂದೇಶ ರವಾನಿಸಲಾಗಿದ್ದು, ಎಲ್ಲ ನೌಕಯಾನಿಗಳು ಕೂಡಲೇ ಸುರಕ್ಷಿತ ಪ್ರದೇಶಕ್ಕೆ ಮರಳುವಂತೆಯೂ ತಿಳಿಸಲಾಗಿದೆ. ಪ್ರಾದೇಶಿಕ ಕಾರ್ಯಾಚರಣಾ ಕೇಂದ್ರ ಮತ್ತು ರೇಡಾರ್ ಸ್ಟೇಷನ್ಗಳ ಮೂಲಕವೂ ಸಂದೇಶ ರವಾನಿಸಲಾಗಿದ್ದು, ಎಲ್ಲ ಹಡಗುಗಳವರು ಸುರಕ್ಷಿತ ಸ್ಥಳಕ್ಕೆ ಮರಳಬೇಕು ಎಂದು ಸೂಚನೆ ನೀಡಲಾಗಿದೆ. ಇಂಡಿಯಾ ಕೋಸ್ಟ್ ಗಾರ್ಡ್ನ ಹಡಗುಗಳು ಈಗಾಗಲೇ ಗುಜರಾತ್ ಕಡಲ ತೀರದಲ್ಲಿ ಗಸ್ತು ಆರಂಭಿಸಿವೆ ಎಂದು ಇಂಡಿಯನ್ ಕೋಸ್ಟ್ ಗಾರ್ಡ್ನ ಡೆಪ್ಯುಟಿ ಡೈರೆಕ್ಟರ್ ಜನರಲ್ (ಆಪರೇಷನ್ಸ್) ಮನಿಷ್ ಪಾಠಕ್ ತಿಳಿಸಿದ್ದಾರೆ.