ನ್ಯೂಸ್

27 ವರ್ಷಗಳ ದಾಂಪತ್ಯ ಮುರಿದ ಬಿಲ್​ ಗೇಟ್ಸ್​ - ಮೆಲಿಂಡ ಫ್ರೆಂಚ್​... ಅಧಿಕೃತ ವಿಚ್ಛೇದನ

ವಾಷಿಂಗ್ಟನ್​ : ಮೂರು ತಿಂಗಳ ಹಿಂದೆ ತಮ್ಮ 27 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡುವ ಘೋಷಣೆ ಮಾಡಿದ್ದ ಸಾಫ್ಟ್​ವೇರ್​ ಕ್ಷೇತ್ರದ ದಿಗ್ಗಜ ಬಿಲ್​ ಗೇಟ್ಸ್ ಮತ್ತು ಮೆಲಿಂಡ ಫ್ರೆಂಚ್ ಗೇಟ್ಸ್ ಅವರು ಸೋಮವಾರ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ.

ಅಮೆರಿಕದ ವಾಷಿಂಗ್ಟನ್ನಿನ ಕಿಂಗ್​ ಕೌಂಟಿ ನ್ಯಾಯಾಧೀಶರು ಈ ಜೋಡಿಯ ವಿವಾಹವನ್ನು ವಿಲೀನಗೊಳಿಸಿ ಆದೇಶ ಹೊರಡಿಸಿದ್ದಾರೆ. ಮೂರು ತಿಂಗಳ ಹಿಂದೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಕಾನೂನು ಪ್ರಕಾರ 90 ದಿನಗಳ ವೈಟಿಂಗ್​ ಪೀರಿಯಡ್​ನ ನಂತರ ಅಧಿಕೃತ ಆದೇಶ ಹೊರಬಂದಿದೆ ಎನ್ನಲಾಗಿದೆ.

ಮೈಕ್ರೊಸಾಫ್ಟ್​ ಸಂಸ್ಥಾಪಕ ಬಿಲ್​ ಗೇಟ್ಸ್​ ಮತ್ತು ಮೆಲಿಂಡ ನಡುವೆ ಆಸ್ತಿ ವಿಭಜನೆಯ ಬಗ್ಗೆ ಪ್ರತ್ಯೇಕತೆ ಒಪ್ಪಂದವಾಗಿದ್ದು, ಅದನ್ನು ವಿಚ್ಛೇದನದ ದಾಖಲೆಗಳೊಂದಿಗೆ ಗೌಪ್ಯವಾಗಿರಿಸಲಾಗಿದೆ. ಇಬ್ಬರೂ ಪರಸ್ಪರ ಆರ್ಥಿಕ ಬಾಧ್ಯತೆಗೆ ಅಥವಾ ಹೆಸರು ಬದಲಾವಣೆಗೆ ಒಳಗಾಗುವುದಿಲ್ಲ ಎಂದು ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)