ರಕ್ಷಣಾ ಕಾರ್ಯಾಚರಣೆ  
ನ್ಯೂಸ್

ಬೈಕ್​ ಸಹಿತ 'ಕೆರೆಗೆ ಹಾರ': ಯುವಕ ಸಾವು, ಯುವತಿ ಪ್ರಾಣಾಪಾಯದಿಂದ ಪಾರು

ವಿಜಯನಗರ: ಯುವಕ-ಯುವತಿ ಜೊತೆಯಾಗಿ ಸಾಗುತ್ತಿದ್ದ ಬೈಕೊಂದು ನಿಯಂತ್ರಣ ತಪ್ಪಿ ಕೆರೆಗೆ ಬಿದ್ದಿದ್ದು, ಈ ಪ್ರಕರಣದಲ್ಲಿ ಯುವಕ ಸಾವಿಗೀಡಾದರೆ, ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ವಿಜಯನಗರ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದೆ.

ಹೊಸಪೇಟೆ ತಾಲೂಕಿನ ಕಮಲಾಪುರ ಕೆರೆ ಏರಿ ಬಳಿ ಈ ದುರ್ಘಟನೆ ಸಂಭವಿಸಿದೆ. ಮರಿಯಮ್ಮನ ಹಳ್ಳಿಯ ನಿವಾಸಿ ರವಿಕುಮಾರ್ (28) ಸಾವಿಗೀಡಾದ ಯುವಕ, ಬೈಕ್​​ನಲ್ಲಿ ಈತನ ಜೊತೆಗಿದ್ದ ಯುವತಿಯ ಗುರುತು ಇನ್ನಷ್ಟೇ ಪತ್ತೆ ಆಗಬೇಕಿದೆ.

ಇವರಿಬ್ಬರು ಹೊಸಪೇಟೆಯಿಂದ ಕಮಲಾಪುರದ ಕಡೆಗೆ ಸಾಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಬೈಕ್​ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದಿದ್ದನ್ನು ಕಂಡ ಸ್ಥಳೀಯರು ರಕ್ಷಣೆಗೆ ಧಾವಿಸಿದ್ದಾರೆ. ಬಳಿಕ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದು, ಅವರು ಯುವಕನ ಶವ ಹೊರ ತೆಗೆದಿದ್ದಾರೆ. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.