ನ್ಯೂಸ್

'ಇಷ್ಟು ವಿಳಂಬ ಏಕೆ?' ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ; ಚುನಾವಣಾ ಆಯೋಗಕ್ಕೆ ಸುಪ್ರೀಂ ತರಾಟೆ | Supreme-court

ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಆಲಿಸಿದ ಸುಪ್ರೀಂ ಕೋರ್ಟ್, ಚುನಾವಣಾ ಸಂಸ್ಥೆಗೆ ಸಂವಿಧಾನದ ಅಡಿಯಲ್ಲಿ ಈ ಪ್ರಕ್ರಿಯೆಯನ್ನು ನಡೆಸಲು ಅನುಮತಿಯಿದೆ ಎಂದು ಹೇಳಿದೆ. ಇಂದು ಅರ್ಜಿಗಳ ವಿಚಾರಣೆ ನಡೆಸಿರುವ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಜೋಯ್ಮಲ್ಯ ಬಾಗ್ಚಿ ಅವರ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ನವದೆಹಲಿ : ಬಿಹಾರದಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ತೆಗೆದುಕೊಂಡಿರುವ ಕ್ರಮ ಸರಿಯಾಗಿದೆ ಎಂದು ಸುಪ್ರೀಂಕೋರ್ಟ್​ ತಿಳಿಸಿದೆ.

ಚುನಾವಣಾ ಆಯೋಗ ಮಾಡುತ್ತಿರುವ ಕೆಲಸ ಸರಿ ಇದೆ. ಈ ಕ್ರಮ ಸಂವಿಧಾನದ ಆದೇಶಕ್ಕೆ ಅನುಗುಣವಾಗಿದೆ ಎಂದು ಹೇಳಿದೆ. ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯನ್ನು ಇಷ್ಟು ತಡವಾಗಿ ಏಕೆ ಪ್ರಾರಂಭಿಸಿದೆ ಎಂದು ಸುಪ್ರೀಂ ಕೋರ್ಟ್ ಚುನಾವಣಾ ಆಯೋಗವನ್ನು ಪ್ರಶ್ನಿಸಿದೆ. ಅವರು ಸಂವಿಧಾನದ ಅಡಿಯಲ್ಲಿ ಏನುಮಾಡಬೇಕೋ ಅದನ್ನೇ ಮಾಡಿದ್ದಾರೆ, ಮಾಡಬಾರದ್ದನ್ನೇನು ಮಾಡಿಲ್ಲ ಎಂದು ಪೀಠ ತಿಳಿಸಿದೆ.

10 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆ

ಸುಪ್ರೀಂ ಕೋರ್ಟ್‌ನಲ್ಲಿ 10 ಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಅದರಲ್ಲಿ ಪ್ರಮುಖ ಅರ್ಜಿದಾರರಾದ 'ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್' ಎಂಬ ಸರ್ಕಾರೇತರ ಸಂಸ್ಥೆ ಕೂಡ ಒಂದು ಅರ್ಜಿಯನ್ನು ಸಲ್ಲಿಸಿದೆ. ಆರ್‌ಜೆಡಿ ಸಂಸದ ಮನೋಜ್ ಝಾ ಮತ್ತು ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತ್ರಾ, ಕಾಂಗ್ರೆಸ್‌ನ ಕೆ.ಸಿ. ವೇಣುಗೋಪಾಲ್, ಎನ್‌ಸಿಪಿ (ಎಸ್‌ಪಿ) ನಾಯಕಿ ಸುಪ್ರಿಯಾ ಸುಳೆ, ಸಿಪಿಐ ನಾಯಕ ಡಿ. ರಾಜಾ, ಸಮಾಜವಾದಿ ಪಕ್ಷದ ಹರಿಂದರ್ ಸಿಂಗ್ ಮಲಿಕ್, ಶಿವಸೇನೆ (ಯುಬಿಟಿ) ನಾಯಕ ಅರವಿಂದ್ ಸಾವಂತ್, ಜೆಎಂಎಂನ ಸರ್ಫ್ರಾಜ್ ಅಹ್ಮದ್ ಮತ್ತು ಸಿಪಿಐ (ಎಂಎಲ್) ನ ದೀಪಂಕರ್ ಭಟ್ಟಾಚಾರ್ಯ ಕೂಡ ಚುನಾವಣಾ ಆಯೋಗದ ಆದೇಶವನ್ನು ರದ್ದುಗೊಳಿಸಲು ನಿರ್ದೇಶನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಮತದಾರರ ಪಟ್ಟಿ ಪರಿಷ್ಕರಣೆ ಏಕೆ?

(ಏಜೆನ್ಸೀಸ್)

ಆಗಾಗ್ಗೆ ವಲಸೆ, ಹೊಸದಾದ ಯುವ ಮತದಾರರು, ಸಾವುಗಳನ್ನು ವರದಿ ಮಾಡದಿರುವುದು ಮತ್ತು ಅಕ್ರಮ ವಿದೇಶಿ ವಲಸಿಗರ ಹೆಸರುಗಳನ್ನು ಸೇರಿಸುವುದು ಮುಂತಾದ ಅಂಶಗಳಿಂದ ಪರಿಷ್ಕರಣೆ ಅಗತ್ಯವಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಮತದಾರರ ಪಟ್ಟಿಯ ಸಮಗ್ರತೆ ಮತ್ತು ನಿಖರತೆಯನ್ನು ಕಾಪಾಡಿಕೊಳ್ಳುವುದು ಇದರ ಉದ್ದೇಶವಾಗಿದೆ.

ಜೂನ್ 24 ರಂದು ಚುನಾವಣಾ ಆಯೋಗ ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ನಡೆಸಲು ಸೂಚನೆ ನೀಡಿತು. ಇದು ಅನರ್ಹ ಹೆಸರುಗಳನ್ನು ತೆಗೆದುಹಾಕುವ ಮತ್ತು ಅರ್ಹ ನಾಗರಿಕರನ್ನು ಮಾತ್ರ ಸೇರಿಸುವುದನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ.