ನ್ಯೂಸ್

ಹೆಂಡತಿಯನ್ನು ಮನೆಗೆ ಕಳಿಸದ ಅತ್ತೆ; ಪ್ರಾಣಬಿಟ್ಟ ಅಳಿಯ

ಪಟ್ನಾ: ತನ್ನ ಹೆಂಡತಿಯನ್ನು ಕಳಿಸಿಕೊಡಲು ಅತ್ತೆ ಮನೆಯವರು ಸತಾಯಿಸುತ್ತಿದ್ದರು ಎಂಬ ಕಾರಣಕ್ಕೆ ಬೇಸತ್ತು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಿಹಾರದಲ್ಲಿ ನಡೆದಿದೆ.

ಮೃತರನ್ನು ಕೃಷ್ಣ ಕುಮಾರ್​ ಗುಪ್ತಾ ಎಂದು ಗುರುತಿಸಲಾಗಿದ್ದು, ಘಟನೆಯೂ ಬಿಹಾರದ ಆರಾ ಜಿಲ್ಲೆಯ ಎಕ್​ವಾರಿ ಗ್ರಾಮದಲ್ಲಿ ನಡೆದಿದೆ.

ಪ್ರಕರಣದ ಹಿನ್ನಲೆ?

ಬಿಹಾರಾದ ಆರಾ ಜಿಲ್ಲೆಯ ಧನಗಾಂವ್​ ಗ್ರಾಮದ ಕೃಷ್ಣ ಕುಮಾರ್​ ಗುಪ್ತಾ ಕುಟುಂಬದೊಂದಿಗೆ ಮುಂಬೈನಲ್ಲಿ ನೆಲೆಸಿದ್ದಾರೆ. ಏಪ್ರಿಲ್​ 14ರಂದು ಎಕ್​ವಾರಿ ಗ್ರಾಮದ ಮಹಿಳೆ ರೀಮಾ ಕುಮಾರಿ ಅವರೊಂದಿಗೆ ಕೃಷ್ಣ ಅವರ ವಿವಾಹವಾಗಿತ್ತು.

ಮದುವೆಯ ನಂತರ ವಧುವನ್ನು ಶುಭ ದಿನದಂದು ಕಳಿಸಿಕೊಡಲಾಗುವುದು ಎಂದು ಆಕೆಯ ಕುಟುಂಬಸ್ಥರು ಹೇಳಿದ ಕಾರಣ ಕೃಷ್ಣ ಕುಮಾರ್​ ಮತ್ತು ಕುಟುಂಬಸ್ಥರು​ ಮುಂಬೈಗೆ ವಾಪಸ್ ತೆರಳಿದ್ದರು.

ಇದಾದ ಬಳಿಕ ಎರಡು ತಿಂಗಳ ನಂತರ ರೀಮಾ ಅವರನ್ನು ಕರೆತರಲು ಹೋದಾಗ ಆಕೆಯ ಕುಟುಂಬಸ್ಥರು ಮಗಳನ್ನು ಗಂಡನ ಮನೆಗೆ ಕಳಿಸಿಕೊಡಲು ಯಾವುದೇ ಶುಭ ಮುಹೂರ್ತ ಇಲ್ಲದ ಕಾರಣ ಸದ್ಯಕ್ಕೆ ಆಗುವುದಿಲ್ಲ ಎಂದು ಸಬೂಬು ಹೇಳಿ ಕೃಷ್ಣ ಅವರನ್ನು ಕಳಿಸಿದ್ದಾರೆ.

ಚಿಕಿತ್ಸೆ ಫಲಕಾರಿಯಾಗದೆ ಸಾವು

ಅತ್ತೆ ಮನೆಯವರು ಕಾರಣಗಳನ್ನು ಕೇಳಿ ತೀವ್ರವಾಗಿ ಕುಪಿತಗೊಂಡಿದ್ದ ಕೃಷ್ಣ ಸೋಮವಾರ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿಲಾಯಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್​ ಅಧಿಕಾರಿ ಪೂಜಾ ಕುಮಾರಿ ಪ್ರಕರಣ ಸಂಬಂಧ ಈವರೆಗೂ ಯಾವುದೇ ದೂರು ದಾಖಲಾಗಿಲ್ಲ. ಭಾರತ ದಂಡ ಸಂಹಿತೆ(IPC Section) 306ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಆತ್ಮಹತ್ಯೆಗೆ ಮೂಲ ಕಾರಣವನ್ನು ಹುಡುಕಲಾಗುತ್ತಿದೆ ಎಂದು ತಿಳಿಸಿದ್ದಾರೆ.