ನ್ಯೂಸ್

ರಾಜಸ್ಥಾನ ನಾಟಕದಲ್ಲಿ ಹೊಸ ತಿರುವು; ಸರ್ಕಾರ ಬೀಳಿಸಲು ಯತ್ನಿಸಿದ್ದ ಒಬ್ಬನ ಬಂಧನ!

ಜೈಪುರ: ರಾಜಸ್ಥಾನದ ಅಶೋಕ್​ ಗೆಹ್ಲೋಟ್​ ನೇತೃತ್ವದ ಕಾಂಗ್ರೆಸ್​ ಸರ್ಕಾರವನ್ನು ಉರುಳಿಸಲು ಹುನ್ನಾರ ನಡೆಸಿದ ಆರೋಪದಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್​ ಶೇಖಾವತ್​ ಮತ್ತು ಬಂಡಾಯ ಶಾಸಕ ಭನ್ವರ್​ಲಾಲ್​ ಶರ್ಮ ವಿರುದ್ಧ ರಾಷ್ಟ್ರದ್ರೋಹ ಮತ್ತು ಸಂಚು ರೂಪಿಸಿದ ದೂರು ಪೊಲೀಸ್​ ಠಾಣೆಯಲ್ಲಿ ದಾಖಲಾಗಿದೆ. ತಾವು ದಾಖಲಿಸಿಕೊಂಡಿರುವ ಎಫ್​ಐಆರ್​ನಲ್ಲಿರುವ ಸಂಜಯ್​ ಜೈನ್​ ಎಂಬ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಿಜೆಪಿಯ ಜತೆ ಕೈಜೋಡಿಸಿರುವ ಕಾಂಗ್ರೆಸ್​ನ ಬಂಡಾಯ ಶಾಸಕರು ಸರ್ಕಾರವನ್ನು ಉರುಳಿಸಲು ಯತ್ನಿಸುತ್ತಿದ್ದರು ಎಂಬುದು ಪಕ್ಷದ ಆಂತರಿಕ ತನಿಖೆಯಿಂದ ದೃಢಪಟ್ಟಿರುವುದಾಗಿ ತನ್ನ ದೂರಿನಲ್ಲಿ ಕಾಂಗ್ರೆಸ್​ ತಿಳಿಸಿದೆ.

ಆದರೆ, ಬಂಧಿತ ಸಂಜಯ್​ ಜೈನ್​ಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ.

ಇದೇ ವೇಳೆ ಕಾಂಗ್ರೆಸ್​ ನಾಯಕರು ಬಂಡಾಯ ಶಾಸಕರಾದ ಭನ್ವರ್​ ಲಾಲ್​ ಶರ್ಮ ಹಾಗೂ ವಿಶ್ವೇಂದ್ರ ಸಿಂಗ್​ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಕಿತ್ತೊಗೆದಿದ್ದಾರೆ. ಇವರಿಬ್ಬರೂ ಜತೆಗೂಡಿ ಬಿಜೆಪಿ ಮುಖಂಡರೊಂದಿಗೆ ಕೈಜೋಡಿಸಿ, ಸರ್ಕಾರವನ್ನು ಉರುಳಿಸಲು ಮುಂದಾಗಿದ್ದರು ಎಂದು ಆರೋಪಿಸಲಾಗಿದೆ.

ಇದಕ್ಕೂ ಮುನ್ನ ಶುಕ್ರವಾರ ಬೆಳಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಕಾಂಗ್ರೆಸ್​ ವಕ್ತಾರ ರಣದೀಪ್​ ಸಿಂಗ್​ ಸುರ್ಜೇವಾಲಾ, ತಮ್ಮ ಬಳಿ ಎರಡು ಆಡಿಯೋ ರೆಕಾರ್ಡಿಂಗ್​ ಇರುವುದಾಗಿಯೂ ಒಂದರಲ್ಲಿ ಸರ್ಕಾರವನ್ನು ಉರುಳಿಸುವ ಬಗ್ಗೆ ಭನ್ವರ್​ಲಾಲ್​ ಶರ್ಮ ಬಿಜೆಪಿ ಮುಖಂಡರ ಜತೆ ಮಾತುಕತೆ ನಡೆಸಿರುವುದು ಪತ್ತೆಯಾಗಿದೆ. ಅದರಲ್ಲಿ ಇರುವ ಬಿಜೆಪಿ ಮುಖಂಡರ ಧ್ವನಿ ಶೇಖಾವತ್​ ಅವರದ್ದಾಗಿದೆ ಎಂದು ಆರೋಪಿಸಿದ್ದರು.

ತಾವು ಮಾಡಿರುವ ಎಲ್ಲ ಆರೋಪಗಳು ಮತ್ತು ದಾಖಲಿಸುವ ದೂರುಗಳ ತನಿಖೆಯನ್ನು ರಾಜಸ್ಥಾನ ಪೊಲೀಸ್​ ವಿಶೇಷ ಕಾರ್ಯಾಪಡೆಯ (ಎಸ್​ಒಜಿ) ಅಧಿಕಾರಿಗಳು ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಎಸ್​ಒಜಿ ಒಂದು ರಾಷ್ಟ್ರದ್ರೋಹ ಸೇರಿ ಎರಡು ಎಫ್​ಐಆರ್​ಗಳನ್ನು ದಾಖಲಿಸಿಕೊಂಡಿತು ಎನ್ನಲಾಗಿದೆ.

ತನಿಖೆಗೆ ಸಿದ್ಧ: ಕಾಂಗ್ರೆಸ್​ ವಕ್ತಾರ ರಣದೀಪ್​ ಸಿಂಗ್​ ಸುರ್ಜೇವಾಲಾ ಅವರು ಆರೋಪಿಸಿರುವಂತೆ ಆಡಿಯೋ ರೆಕಾರ್ಡಿಂಗ್​ನಲ್ಲಿರುವುದು ನನ್ನ ಧ್ವನಿಯಲ್ಲ. ಈ ಕುರಿತು ಯಾವುದೇ ರೀತಿಯ ತನಿಖೆಗೂ ನಾನು ಸಿದ್ಧ. ಎಲ್ಲಿಯೇ ವಿಚಾರಣೆ ನಡೆದರೂ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಕೇಂದ್ರ ಸಚಿವ ಗಜೇಂದ್ರ ಸಿಂಗ್​ ಶೇಖಾವತ್​ ಹೇಳಿದ್ದಾರೆ.

ಈ ಆಡಿಯೋ ರೆಕಾರ್ಡಿಂಗ್​ಗಳು ಆನ್​ಲೈನ್​ನಲ್ಲಿ ಸಾಕಷ್ಟು ವೈರಲ್​ ಆಗಿದೆ. ಆದರೆ, ಶುಕ್ರವಾರದ ಸುದ್ದಿಗೋಷ್ಠಿಯಲ್ಲಿ ಅವನ್ನು ಪ್ರಸಾರ ಮಾಡಲಿಲ್ಲ. ಬದಲಿಗೆ ಆ ಆಡಿಯೋ ಟೇಪ್​ನಲ್ಲಿದೆ ಎನ್ನಲಾದ ಮಾತುಕತೆಯ ವಿವರವನ್ನು ತಾವೇ ಓದಿ ಹೇಳಿದ್ದು ವಿಶೇಷವಾಗಿತ್ತು.