ವಾಷಿಂಗ್ಟನ್: ಜೋ ಬಿಡೆನ್ ನೇತೃತ್ವದ ಸರ್ಕಾರ ಅಧಿಕಾರ ಬಂದ ಕೂಡಲೇ 5 ಲಕ್ಷ ಭಾರತೀಯರು ಸೇರಿ 11 ದಶಲಕ್ಷ ವಲಸಿಗರಿಗೆ ಅಮೆರಿಕನ್ ಪೌರತ್ವ ನೀಡುವುದಕ್ಕೆ ಕ್ರಮ ತೆಗೆದುಕೊಳ್ಳಲಿದೆ. ಅಲ್ಲದೆ, ನಿರಾಶ್ರಿತರ ಅಮೆರಿಕ ಪ್ರವೇಶಕ್ಕೆ 95,000ದ ವಾರ್ಷಿಕ ಮಿತಿಯನ್ನೂ ಹೇರಲಿದೆ ಎಂದು ಬಿಡೆನ್ ಕ್ಯಾಂಪೇನ್ನ ಪಾಲಿಸಿ ಡಾಕ್ಯುಮೆಂಟ್ ತಿಳಿಸಿದೆ.
ಈ ನೀತಿ ಕಡತದ ಪ್ರಕಾರ, ವಲಸೆ ಸುಧಾರಣಾ ಕಾನೂನು ಜಾರಿಗೊಳಿಸುವುದಕ್ಕೆ, ಅದಕ್ಕೆ ಸಂಬಂಧಿಸಿದ ಮಸೂದೆ ಸಿದ್ಧಪಡಿಸಿ ಅಂಗೀಕರಿಸುವುದಕ್ಕಾಗಿ ಬಿಡೆನ್ ಅವರು ಕಾಂಗ್ರೆಸ್ ಜತೆಗೆ ಶೀಘ್ರವೇ ಕೆಲಸ ಶುರುಮಾಡಲಿದ್ದಾರೆ. ನಮ್ಮ ವ್ಯವಸ್ಥೆಯನ್ನು ಸುಧಾರಿಸುವ ಕ್ರಮವೂ ಇದರಲ್ಲಿ ಇರಲಿದೆ. ಕುಟುಂಬಗಳನ್ನು ಒಟ್ಟಿಗೆ ಇರಿಸುವ ಪ್ರಯತ್ನ ಇದಾಗಿದ್ದು, 11 ದಶಲಕ್ಷ ವಲಸಗಿರು ಸರಿಯಾದ ದಾಖಲೆಗಳಿಲ್ಲದ ಅಮೆರಿಕದಲ್ಲಿದ್ದಾರೆ. ಈ ಪೈಕಿ ಭಾರತದವರೇ 5 ಲಕ್ಷ ಜನರಿದ್ದಾರೆ.
ಒಬಾಮಾ ಅಧ್ಯಕ್ಷರಾಗಿದ್ದಾಗ ಜಾರಿಗೆ ತಂದಿದ್ದ ಕೆಲವು ಕಾನೂನುಗಳನ್ನು ಟ್ರಂಪ್ ಆಡಳಿತ ರದ್ದುಗೊಳಿಸಿತ್ತು. ಅವುಗಳಲ್ಲಿ ಉತ್ತಮವಾದ ಕೆಲವನ್ನು ಮತ್ತೆ ಜಾರಿಗೊಳಿಸಲಾಗುವುದು. ಮುಖ್ಯವಾಗಿ ಡೆಫರ್ಡ್ ಆಕ್ಷನ್ ಫಾರ್ ಚೈಲ್ಡ್ಹುಡ್ ಅರೈವಲ್ಸ್ (ಡಿಎಸಿಎ) ಪ್ರೋಗ್ರಾಂ ಅನ್ನು ವಲಸೆ ನೀತಿಯಲ್ಲಿ ಮತ್ತೆ ಅಳವಡಿಸಲಾಗುತ್ತದೆ. ಇದರಿಂದ ಹಲವರಿಗೆ ಅನುಕೂಲವಾಗಲಿದೆ ಎಂದು ನೀತಿ ಕಡತ ತಿಳಿಸಿದೆ. (ಏಜೆನ್ಸೀಸ್)