

ಯಾನ್ಗೋನ್: ಮ್ಯಾನ್ಮಾರ್ನಲ್ಲಿ ಸಂಸತ್ ಚುನಾವಣೆಗೆ ಇಂದು ಮತದಾನ ನಡೆಯುತ್ತಿದ್ದು, ಬೆಳಗ್ಗೆಯೇ ಮತದಾನ ಶುರುವಾಗಿದೆ. ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಆಂಗ್ ಸಾನ್ ಸೂ ಕಿ ಅವರ ನೇತೃತ್ವದ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ ಪಾರ್ಟಿ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ಜನರು ಕೂಡ ಸೂ ಕಿ ನೇತೃತ್ವಕ್ಕೆ ಒಲವು ತೋರಿರುವುದು ಕಂಡುಬಂದಿದೆ.
ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನ 440 ಸ್ಥಾನ ಮತ್ತು ಹೌಸ್ ಆಫ್ ನ್ಯಾಷನಲಿಟೀಸ್ನ 224 ಸ್ಥಾನಗಳಿಗೆ ಇಂದು ಚುನಾವಣೆ ನಡೆಯುತ್ತಿದೆ. ಇದಲ್ಲದೆ ವಿವಿಧ ಅಸೆಂಬ್ಲಿ ಚುನಾವಣೆಗಳೂ ನಡೆಯುತ್ತಿದ್ದು, ಎರಡೂ ಸೇರಿ ಒಟ್ಟಾರೆ 1,171 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಕಣದಲ್ಲಿರುವ ಪಕ್ಷಗಳ ಪೈಕಿ ಸೂ ಕಿ ಅವರ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ ಪಾರ್ಟಿ (ಎನ್ಎಲ್ಡಿ) ಮತ್ತು ಥಾನ್ ಹೆಟೇ ಅವರ ಯೂನಿಯನ್ ಸೋಲಿಡಾರಿಟಿ ಆ್ಯಂಡ್ ಡೆವಲಪ್ಮೆಂಟ್ ಪಾರ್ಟಿ (ಯುಎಸ್ಡಿಪಿ) ಪ್ರಮುಖವಾದವು. ಚುನಾವಣಾ ಕಣದಲ್ಲಿ 90ಕ್ಕೂ ಹೆಚ್ಚು ಪಕ್ಷಗಳ ಅಭ್ಯರ್ಥಿಗಳಿದ್ದಾರೆ. 3.7 ಕೋಟಿ ಮತದಾರರಿದ್ದು, ಈ ಪೈಕಿ 50 ಲಕ್ಷ ಮತದಾರರು ಹೊಸಬರು.
ಐದು ದಶಕಗಳ ಮಿಲಿಟರಿ ಆಡಳಿತದ ಬಳಿಕ 2015ರಲ್ಲಿ ನಡೆದ ಚುನಾವಣೆಯಲ್ಲಿ ಸೂ ಕಿ ಅವರ ಎನ್ಎಲ್ಡಿ ಭರ್ಜರಿ ಬಹುಮತ ಪಡೆದು ಆಡಳಿತ ಚುಕ್ಕಾಣಿ ಹಿಡಿದಿತ್ತು. ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನ 440 ಸ್ಥಾನಗಳ ಪೈಕಿ ಎನ್ಎಲ್ಡಿಗೆ 255 ಮತ್ತು ಹೌಸ್ ಆಫ್ ನ್ಯಾಷನಲಿಟೀಸ್ನ 224 ಸ್ಥಾನಗಳ ಪೈಕಿ 135 ಸ್ಥಾನಗಳು ದಕ್ಕಿದ್ದವು. ವಿಪಕ್ಷ ಸ್ಥಾನದಲ್ಲಿರುವ ಯುಎಸ್ಡಿಪಿಗೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನಲ್ಲಿ 30, ಹೌಸ್ ಆಫ್ ನ್ಯಾಷನಲಿಟೀಸ್ನಲ್ಲಿ 11 ಸ್ಥಾನಗಳಷ್ಟೇ ಇರುವುದು. ಉಳಿದವೆಲ್ಲ ಚಿಕ್ಕಪುಟ್ಟ ಪಕ್ಷಗಳ ಪಾಲಾಗಿವೆ. (ಏಜೆನ್ಸೀಸ್)