ನ್ಯೂಸ್

ತಂದೆಯನ್ನೇ ಕೊಂದ ಅಣ್ಣನಿಗೆ ತಮ್ಮನಿಂದಲೇ ಸ್ಕೆಚ್​! 7 ವರ್ಷಗಳ ಸೇಡು, ನಡುರಸ್ತೆಯಲ್ಲಿ ಗುಂಡಿಟ್ಟು ಹತ್ಯೆ ​| Murder Case

Murder Case: ತನ್ನ ನಿವೃತ್ತ ಪೊಲೀಸ್ ಅಧಿಕಾರಿ ತಂದೆಯನ್ನು 2017ರ ಮೇ.23ರಂದು ಗುಂಡಿಟ್ಟು ಕೊಂದಿದ್ದ ಅಣ್ಣನ ವಿರುದ್ಧ ಕಡೆಗೂ ಸಹೋದರ ಸೇಡು ತೀರಿಸಿಕೊಂಡ ಘಟನೆ ಮಧ್ಯಪ್ರದೇಶದ ಭೋಪಾಲ್​ನಲ್ಲಿ ವರದಿಯಾಗಿದೆ.

ಆಸ್ತಿಗಾಗಿ ಅಪ್ಪನೊಂದಿಗೆ ಜಟಾಪಟಿ ನಡೆಸಿದ್ದ ಮೃತ ಅಜಯ್​, ಮನೆಯಲ್ಲಿ ತಂದೆಯಿಟ್ಟಿದ್ದ ಪಿಸ್ತೂಲ್​ನಿಂದ ಅವರ ಹಣೆಗೆ ಗುರಿಯಿಟ್ಟು, ನಾಲ್ಕು ಸುತ್ತು ಗುಂಡು ಹಾರಿಸಿದ್ದ. ಸ್ಥಳದಲ್ಲೇ ನಿವೃತ್ತ ಪೊಲೀಸ್ ಅಧಿಕಾರಿಯಾಗಿದ್ದ ಹನುಮಾನ್ ಸಿಂಗ್ ಜೀವ ಬಿಟ್ಟರು. ಸಿಂಗ್​ ಹಿರಿಯ ಮಗನಾಗಿದ್ದ ಅಜಯ್ ತನ್ನ ತಂದೆಯನ್ನೇ ಕೊಲೆಗೈದ ಪ್ರಕರಣದಡಿ ಕಠಿಣ ಶಿಕ್ಷೆಗೆ ಗುರಿಯಾಗಿದ್ದ. ಕೋರ್ಟ್ ಆತನಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತು. ಇತ್ತೀಚೆಗಷ್ಟೇ ಆತ ಪರೋಲ್​ ಮೇಲೆ ಹೊರಬಂದಿದ್ದೇ ತಡ ಹಾಕಿಕೊಂಡಿದ್ದ ಸ್ಕೆಚ್​ಗೆ ತಕ್ಕಂತೆ ಅಜಯ್​ನನ್ನು ಸಹೋದರ ಭಾನು ಹತ್ಯೆಗೈದಿದ್ದಾನೆ.

ತಂದೆಯನ್ನು ಹತ್ಯೆಗೈದ ರೀತಿಯಲ್ಲೇ ಕೊಲೆ

ಅಜಯ್ ಶಿಕ್ಷೆ ಅನುಭವಿಸಲು ಜೈಲಿಗೆ ಹೋದ ದಿನದಿಂದಲೂ ಆತನ ಉಸಿರು ನಿಲ್ಲಿಸಲು ಸಹೋದರ ಭಾನು ದೊಡ್ಡದಾಗಿ ಸಂಚು ಹೂಡಿದ್ದ. ಇದಕ್ಕಾಗಿ, ಹಲವಾರು ರೀತಿಯಲ್ಲಿ ಪ್ಲ್ಯಾನ್ ಮಾಡಿದ್ದ. ತನ್ನ ತಂದೆಗೆ ಬಂದ ಸಾವೇ ಈತನಿಗೂ ಬರಬೇಕು ಎಂದು ಸಂಚು ರೂಪಿಸಿ, ಅಣ್ಣನ ಬಿಡುಗಡೆಗಾಗಿ ಕಾಯುತ್ತಿದ್ದ. ಇದೇ ವೇಳೆ ಭಾನುಗೆ ಅಪ್ಪನ ಕೆಲಸ ಹಸ್ತಾಂತರವಾಯಿತು. ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರೂ ಅಣ್ಣನ ರಿಲೀಸ್​ಗಾಗಿ ಭಾನು 7 ವರ್ಷಗಳಿಂದ ತುದಿಗಾಲಿನಲ್ಲಿ ಕಾಯುತ್ತಿದ್ದ. ಅದೂ ಸೇಡು ತೀರಿಸಿಕೊಳ್ಳುವ ಸಲುವಾಗಿ.

ಕೊಲೆಗೆ ವರ್ಷಗಳ ಕಾಯುವಿಕೆ, ಮಾಸ್ಟರ್​ಪ್ಲ್ಯಾನ್​

ಕಳೆದ ಜುಲೈ ತಿಂಗಳು, ಪೆರೋಲ್ ಮೇಲೆ ಜೈಲಿನಿಂದ ಹೊರಬಂದ ಅಜಯ್​, 9 ದಿನಗಳ ಬಳಿಕ ಶಿವಪುರಿಯಿಂದ ಗ್ವಾಲಿಯರ್‌ಗೆ ತನ್ನ ಕಾರಿನಲ್ಲಿ ಪ್ರಯಾಣಿಸುತ್ತಿದ್ದ. ತನ್ನೊಂದಿಗೆ 17 ವರ್ಷದ ಹುಡುಗಿಯೊಬ್ಬಳನ್ನು ಕರೆದೊಯ್ಯುತ್ತಿದ್ದ. ಅಸಲಿಗೆ ಆಕೆ ಅವನ ಸ್ನೇಹಿತೆ. ಅಜಯ್ ಜೊತೆಗೆ ಸ್ನೇಹ, ನಂಬಿಕೆ ಬೆಳೆಸಿಕೊಂಡಿದ್ದ ಈಕೆಯೇ ಆತನ ಪ್ರಾಣ ತೆಗೆಯಲು ಬಂದಿದ್ದ ಸುಪಾರಿ ಕಿಲ್ಲರ್​. ಈ ವಿಷಯ ಅಜಯ್​ಗೆ ಗೊತ್ತಿರಲಿಲ್ಲ. ಅಸಲಿಗೆ, ಇದು ಭಾನು ಹಾಕಿರುವ ಸ್ಕೆಚ್​ ಎಂಬುದು ಕೊನೆಯವರೆಗೂ ಆತನಿಗೆ ಗೊತ್ತಾಗಲೇ ಇಲ್ಲ. ಹೆದ್ದಾರಿ ಪಕ್ಕದಲ್ಲಿ ಕಾರು ನಿಲ್ಲಿಸಿದ ಕೆಲವೇ ನಿಮಿಷಗಳಲ್ಲಿ ಭಾನು ಕಳುಹಿಸಿದ್ದ ಸುಪಾರಿ ಕಿಲ್ಲರ್​ಗಳು, ಆತನ ತಂದೆಯನ್ನು ಗುಂಡಿಟ್ಟು ಕೊಂದಂತೆಯೇ, ಅಜಯ್​ ಮೇಲೆ ಗುಂಡಿನ ಸುರಿಮಳೆ ಹರಿಸಿ, ಭೀಕರವಾಗಿ ಹತ್ಯೆಗೈದರು.

ಆರೋಪಿಗಳು ಅಂದರ್​!

ಅಜಯ್​ನನ್ನು ಯಾರು ಕೊಲೆಗೈದರು ಎಂಬುದು ಆರಂಭದಲ್ಲಿ ಪೊಲೀಸರಿಗೆ ತಿಳಿಯಲಿಲ್ಲ. ಆದರೆ, ತನಿಖೆಯನ್ನು ಚುರುಕುಗೊಳಿಸಿದ ಖಾಕಿ ಪಡೆ, ಸುಮಾರು 500 ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದರು. ಈ ವೇಳೆ ಒಂದು ಸಿಸಿಟಿವಿ ಫೂಟೇಜ್​ನ ಜೂಮ್​ ಮಾಡಿದಾಗ, ಅದರಲ್ಲಿ ಅಜಯ್ ಕಾರು ಗ್ವಾಲಿಯರ್ ಕಡೆಗೆ ತೆರಳುತ್ತಿರುವುದು ಮತ್ತು ಆ ಕಾರಿನ ಹಿಂದೆಯೇ ಸೂಪಾರಿ ಕಿಲ್ಲರ್​ಗಳ ಕಾರು ಹೋಗುತ್ತಿರುವುದು ಕಂಡುಬಂದಿದೆ. ಇನ್ನೊಂದರಲ್ಲಿ ಕಾರಿನ ನಂಬರ್ ಪತ್ತೆಯಾಗಿದ್ದು, ಅದು ಭಾನುಗೆ ಸೇರಿದ್ದು ಎಂಬುದು ಸ್ಪಷ್ಟವಾಗಿದೆ.

ತನಗೆ ಏನೂ ಗೊತ್ತಿಲ್ಲದಂತೆ ಮೃತ ಸಹೋದರ ಅಜಯ್‌ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಭಾನು, ಕೊಲೆಗೈದ ಮೂರು ದಿನಗಳ ಬಳಿಕ ಬ್ಯಾಂಕಾಕ್‌ಗೆ ಪರಾರಿಯಾಗಿದ್ದ. ಈ ಕೇಸ್​ನ ಕಡೆಗೂ ಬೇಧಿಸುವಲ್ಲಿ ಯಶಸ್ವಿಯಾದ ಪೊಲೀಸರು, ಭಾನು ಜೊತೆ ಕೈಜೋಡಿಸಿದ ಹುಡುಗಿಯನ್ನು ಮತ್ತು ಹತ್ಯೆಗೆ ಬಳಸಲಾದ ಪಿಸ್ತೂಲ್​ ಅನ್ನು ವಶಕ್ಕೆ ಪಡೆದಿದ್ದಾರೆ. ಕೊಲೆಗೆ ಇಷ್ಟೆಲ್ಲ ಸಂಚು ಹೂಡಿದ ಭಾನುವನ್ನು ಬ್ಯಾಂಕಾಕ್​ನಿಂದ ಕರೆತರಲು ಇದೀಗ ಖಾಕಿ ಪಡೆ ಮುಂದಾಗಿದೆ,(ಏಜೆನ್ಸೀಸ್)