ನ್ಯೂಸ್

ನಕ್ಸಲ್ ಹಿತೈಷಿಗಳಿಂದ ರೈತ ಪ್ರತಿಭಟನೆ ಹೈಜಾಕ್ : ರೈತ ಸಂಘಟನೆಗಳ ಗಂಭೀರ ಆರೋಪ

ನವದೆಹಲಿ: ರೈತ ಸಂಘಟನೆಗಳ ನೈಜ ಉದ್ದೇಶದ ಪ್ರತಿಭಟನೆಯನ್ನು ನಕ್ಸಲ್ ಹಿತೈಷಿಗಳು ಹೈಜಾಕ್ ಮಾಡಿದ್ದಾರೆ ಎಂಬ ಗಂಭೀರ ಆರೋಪವನ್ನು ಕೆಲವು ರೈತ ಸಂಘಟನೆಗಳ ಮುಖಂಡರು ಮಾಡಿದ್ದಾರೆ. ಭಾರತೀಯ ಕಿಸಾನ್​ ಯೂನಿಯನ್ ಏಕ್ತಾ ಎಂಬ ಸಂಘಟನೆ ಈ ರೀತಿ ರೈತರ ಪ್ರತಿಭಟನೆಯನ್ನು ಹೈಜಾಕ್ ಮಾಡಿದ್ದಾಗಿ ಆರೋಪ ಕೇಳಿಬಂದಿದೆ.

ಭಾರತೀಯ ಕಿಸಾನ್​ ಯೂನಿಯನ್ ಏಕ್ತಾ ಸಂಘಟನೆಯವರು ಅನ್​ಲಾಫುಲ್​ ಆ್ಯಕ್ಟಿವಿಟೀಸ್ ಪ್ರಿವೆನ್ಶನ್ ಆ್ಯಕ್ಟ್ ಪ್ರಕಾರ ಬಂಧನಕ್ಕೆ ಒಳಗಾಗಿರುವ ಉಮರ್ ಖಾಲಿದ್​, ಶಾರ್ಜೀಲ್ ಇಮಾಮ್​, ವರವರ ರಾವ್, ಸುಧಾ ಭಾರದ್ವಾಜ್ ಮತ್ತು ಇತರರ ಬಿಡುಗಡೆಗೆ ಆಗ್ರಹಸಿದೆ. ಈ ಬೆಳವಣಿಗೆ ನಿಜವಾದ ರೈತ ಸಂಘಟನೆಗಳ ನಾಯಕರನ್ನು ಮುಜುಗರಕ್ಕೀಡು ಮಾಡಿದ್ದಲ್ಲದೇ, ಸಂಘಟನೆಗಳ ನಾಯಕರ ನಡುವೆ ಒಂದು ರೀತಿಯ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ರೈತ ಸಂಘಟನೆಯೊಂದರ ನಾಯಕ ರಾಕೇಶ್ ತಿಕೈತ್​ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಸಿಂಘು ಬಾರ್ಡರ್​ಗೆ ತೆರಳಿ ಈ ವಿಚಾರವಾಗಿ ರೈತ ಸಂಘಟನೆಗಳ ಆಂತರಿಕ ಸಭೆ ನಡೆಸಲಿದ್ದೇವೆ. ಅಲ್ಲಿ ಭಾರತೀಯ ಕಿಸಾನ್​ ಯೂನಿಯನ್ ಏಕ್ತಾ ಸದಸ್ಯರು ಶಾರ್ಜೀಲ್ ಇಮಾಮ್, ಉಮರ್ ಖಾಲೀದ್ ಪರ ನಡೆಸಿದ ಪ್ರತಿಭಟನೆಯ ಬಗ್ಗೆ ಚರ್ಚಿಸುತ್ತೇವೆ. ನಾನು ವೈಯಕ್ತಿಕವಾಗಿ ಏಕ್ತಾ ಸಂಘಟನೆಯ ಈ ನಡೆಯನ್ನು ಖಂಡಿಸುತ್ತೇನೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)