ನ್ಯೂಸ್

ಡಿಸೆಂಬರ್ 8ರ ಭಾರತ್ ಬಂದ್​ ಕರೆಗೆ ಕಾಂಗ್ರೆಸ್, ಎಎಪಿ ಬೆಂಬಲ

ನವದೆಹಲಿ: ಹೊಸ ಕೃಷಿ ಕಾನೂನು ಹಿಂಪಡೆಯುವಂತೆ ಆಗ್ರಹಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತಪರ ಸಂಘಟನೆಗಳು ಕರೆ ನೀಡಿರುವ ಡಿಸೆಂಬರ್ 8ರ ಭಾರತ ಬಂದ್​ಗೆ ಕಾಂಗ್ರೆಸ್, ಎಎಪಿ ಮತ್ತು ಇತರೆ ಕೆಲವು ಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ.

ಕಾಂಗ್ರೆಸ್ ವಕ್ತಾರ ಪವನ್ ಖೇರಾ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ, ರೈತರು ಕರೆ ನೀಡಿರುವ ಭಾರತ್ ಬಂದ್​ಗೆ ಪಕ್ಷ 'ಹೃತ್ಪೂರ್ವಕ' ಬೆಂಬಲ ನೀಡುತ್ತದೆ. ನಮ್ಮ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರು ನೇರವಾಗಿ ರೈತರ ಜತೆಗೇ ನಿಂತು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಬಂದ್ ದಿನ ನಮ್ಮ ಎಲ್ಲ ಜಿಲ್ಲಾ, ಪ್ರದೇಶ ಕಾಂಗ್ರೆಸ್ ಕೇಂದ್ರ ಕಚೇರಿಗಳಲ್ಲಿ ರೈತ ಪರ ಧ್ವನಿ ಮೊಳಗಲಿದೆ. ಪ್ರತಿಭಟನೆ ನಡೆಸಿ ಬಂದ್ ಅನ್ನು ಯಶಸ್ವಿಗೊಳಿಸುವ ಕೆಲಸವನ್ನು ನಾವು ಮಾಡುತ್ತೇವೆ.

ಸರ್ಕಾರ ರೈತರ ಧ್ವನಿಗೆ ಓಗೊಡಲೇಬೇಕು. ಕರಾಳ ಕೃಷಿ ಕಾನೂನು ಹಿಂಪಡೆಯಬೇಕು. ರೈತ ಹಿತವನ್ನು ಕಾಪಾಡಬೇಕು. ಈ ಚಳಿಗಾಲದಲ್ಲೂ ಹಗಲು ರಾತ್ರಿ ಎನ್ನದೇ ದೆಹಲಿಯ ಗಡಿ ಭಾಗದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಧ್ವನಿಯನ್ನು ಸರ್ಕಾರ ಆಲಿಸುವುದಿಲ್ಲ ಎಂದಾದರೆ ಪ್ರತಿಭಟನೆ ತೀವ್ರಗೊಳಿಸುವುದೊಂದೇ ದಾರಿ ಎಂದು ಅವರು ಹೇಳಿದರು.

ಈ ನಡುವೆ, ಆಮ್ ಆದ್ಮಿ ಪಾರ್ಟಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಕೂಡ ಟ್ವೀಟ್ ಮಾಡಿದ್ದು, ದೇಶಾದ್ಯಂತ ಇರುವ ಎಎಪಿ ಕಾರ್ಯಕರ್ತರು ಡಿಸೆಂಬರ್ 8ರಂದು ಬಂದ್​ನಲ್ಲಿ ಪಾಲ್ಗೊಳ್ಳುತ್ತಾರೆ. ದೇಶವಾಸಿಗಳೆಲ್ಲರೂ ರೈತರ ಪರ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದ್ದಾರೆ. (ಏಜೆನ್ಸೀಸ್)