ಪಯ್ಯನ್ನೂರು: ಲಾಕ್ಡೌನ್ ಕಾರಣಕ್ಕೆ ಹೆಚ್ಚು ಕಡಿಮೆ ಒಂದು ತಿಂಗಳಿಗೂ ಹೆಚ್ಚು ಕಾಲ ಜುವೆಲ್ಲರಿ ಶಾಪ್ಗಳೂ ಸೇರಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಮನುಷ್ಯರಿಗಷ್ಟೇ ಇದು ಲಾಕ್ಡೌನ್ ಕಾಲ. ಕಾಡುಪ್ರಾಣಿಗಳಿಗಲ್ಲ. ಮನುಷ್ಯ ಸಂಚಾರ ಕಡಿಮೆಯಾದ ಕಾರಣ ಕಾಡುಪ್ರಾಣಿಗಳು ನಗರ ಪ್ರದೇಶಗಳಲ್ಲಿ ಸಂಚರಿಸುವ ದೃಶ್ಯಗಳು ಕಂಡುಬಂದಿವೆ.
ಎರಡು ಅವಧಿಯ ಲಾಕ್ಡೌನ್ ಮುಗಿಯುತ್ತಿದ್ದಂತೆ ಮೂರನೇ ಅವಧಿಯ ಲಾಕ್ಡೌನ್ನಲ್ಲಿ ಕೊಂಚ ಸಡಿಲಿಕೆ ಮಾಡಿದ ಕಾರಣ ವ್ಯಾಪಾರ ವಹಿವಾಟು ಪುನಸ್ಥಾಪನೆಗೆ ಪ್ರಯತ್ನ ನಡೆದಿದೆ. ಇದರಂತೆ ಪಯ್ಯನ್ನೂರಿನ ಜುವೆಲ್ಲರಿ ಶಾಪ್ ಒಂದ ಮಾಲೀಕ ತನ್ನ ಅಂಗಡಿ ತೆರೆದು ನೋಡಿ ಗಾಬರಿಯಾಗಿ ಬಿಟ್ಟರು! ಅಂಥದ್ದೇನಿತ್ತು ಅಲ್ಲಿ!
ಜುವೆಲ್ಲರಿಯೊಳಗೆ ಒಂದು ಬೃಹತ್ ಗಾತ್ರದ ಹೆಬ್ಬಾವು ಮತ್ತು 27 ಮೊಟ್ಟೆಗಳು ಕಣ್ಣಿಗೆ ರಾಚಿದ್ದವು. ಕೂಡಲೇ ಹಾವು ಹಿಡಿಯುವ ಪವಿತ್ರನ್ ಎಂಬುವವರನ್ನು ಕರೆಯಿಸಿಕೊಂಡರು. ಆ ಹಾವು ಹಂಚಿನ ಮಾಡಿನ ಮೂಲಕ ಒಳ ನುಸುಳಿತ್ತು. ಪವಿತ್ರನ್ ಸುರಕ್ಷಿತವಾಗಿ ಆ ಹಾವು ಮತ್ತು ಮೊಟ್ಟೆಯಲ್ಲಿ ಜುವೆಲ್ಲರಿ ಶಾಪ್ನಿಂದ ಹೊರತಂದು ರಕ್ಷಿತಾರಣ್ಯಕ್ಕೆ ಬಿಟ್ಟರು. ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಆ ಹಾವು 27 ಮೊಟ್ಟೆಗಳನ್ನು ಇಟ್ಟಿತ್ತು. ಬಹುಶಃ ಇನ್ನಷ್ಟು ಮೊಟ್ಟೆ ಇಡುವ ಸಾಧ್ಯತೆ ಇದೆ. ಹಾಗಾಗಿ ಅದನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ ಎಂದು ಹೇಳಿದರು.
ಕಳೆದ ಒಂದೇ ತಿಂಗಳಲ್ಲಿ 37 ಹಾವುಗಳನ್ನು ಜಿಲ್ಲೆಯ ಬೇರೆ ಬೇರೆ ಸ್ಥಳಗಳಲ್ಲಿ ಹಿಡಿದು ರಕ್ಷಿಸಲಾಗಿದೆ. ಲಾಕ್ಡೌನ್ ಸಂದರ್ಭದಲ್ಲಿ ಮನುಷ್ಯ ಸಂಚಾರ ಕಡಿಮೆಯಾದ ಕಾರಣ ಹಾವುಗಳು ಹೊರಗೆ ಬಂದು ಅಡ್ಡಾಡತೊಡಗಿವೆ. ಬೇಸಿಗೆಯಾದ ಕಾರಣ ಮನೆಗಳ ಸಮೀಪವೇ ಇವು ಕಾಣಿಸಿಕೊಳ್ಳತೊಡಗಿವೆ. ಇದು ಸಹಜವಾಗಿ ಭಯ ಹುಟ್ಟಿಸುವ ವಿಷಯ ಎಂದು ಪವಿತ್ರನ್ ಹೇಳಿದ್ದಾರೆ. (ಏಜೆನ್ಸೀಸ್)