ನವದೆಹಲಿ: ಮಹಾದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣದ ಸೂತ್ರಧಾರಿಗಳಾದ ಸೌರಭ್ ಚಂದ್ರಾಕರ್ ಮತ್ತು ರವಿ ಉಪ್ಪಳ್, ಪಾಕಿಸ್ತಾನಕ್ಕಾಗಿ ಇದೇ ರೀತಿಯ ಆ್ಯಪ್ ಅಭಿವೃದ್ಧಿಪಡಿಸಲು ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸೋದರ ಮುಸ್ತಕೀಂ ಇಬ್ರಾಹಿಂ ಕಸ್ಕರ್ನೊಂದಿಗೆ ಕೈಜೋಡಿಸಿದ್ದು ಬೆಳಕಿಗೆ ಬಂದಿದೆ. ಜಾರಿ ನಿರ್ದೇಶನಾಲಯದ (ಇಡಿ) ತನಿಖೆಯಿಂದ ಈ ವಿಚಾರ ತಿಳಿದುಬಂದಿದೆ ಎಂದು ಮೂಲಗಳು ತಿಳಿಸಿವೆ.
ಕಸ್ಕರ್ನ ರಕ್ಷಣೆಯಲ್ಲಿ ‘ಖೇಲೋಯಾರ್’ ಎಂಬ ಇನ್ನೊಂದು ಆಪ್ ಕಾರ್ಯಾಚರಿಸುತ್ತಿದೆ. ವೈಯಕ್ತಿಕವಾಗಿ ವಿಶ್ವಾಸಾರ್ಹವಾದ ಭದ್ರತಾ ಗಾರ್ಡ್ ಗಳ ವಿವರ ಮತ್ತು 20ರಿಂದ 30 ಬೌನ್ಸರ್ಗಳನ್ನು ಚಂದ್ರಾಕರ್ಗೆ ಕಸ್ಕರ್ ಒದಗಿಸಿದ್ದ ಎಂದೂ ಮೂಲಗಳು ತಿಳಿಸಿವೆ. ಚಂದ್ರಾಕರ್ ಬಳಿ ನಾಲ್ಕರಿಂದ ಐದು ಐಷಾರಾಮಿ ಕಾರುಗಳು ಮತ್ತು ಎಸ್ಯುುವಿಗಳಿದ್ದು ಅರಬ್ ಸಂಯುಕ್ತ ಸಂಸ್ಥಾನ (ಯುಎಇ) ಮತ್ತಿತರ ಸ್ಥಳಗಳಲ್ಲಿ ಬಿಗಿ ಭದ್ರತೆಯಲ್ಲಿ ಓಡಾಡುತ್ತಿದ್ದಾನೆ. ಆತನಿಗೆ ಒಂದು ಬುಲೆಟ್ಪ್ರೂಫ್ ರೋಲ್ಸ್ರಾಯ್ ಕಾರನ್ನು ಕೂಡ ಒದಗಿಸಲಾಗಿದೆ.
ಭೇಟಿ ಸ್ಥಳ ಪರಿಶೀಲನೆ: ಭಾರತೀಯ ಅಧಿಕಾರಿಗಳು ತನಿಖೆ ನಡೆಸುವ ಭೀತಿಯಿಂದಾಗಿ ಚಂದ್ರಾಕರ್ ಪಾರ್ಟಿ ಅಥವಾ ಸಭೆಗಳಿಗೆ ತೆರಳುವ ಸ್ಥಳಗಳನ್ನು ಸೂಕ್ಷ್ಮವಾಗಿ ಪರಿಶೀಲಿ ಸಲಾಗುತ್ತದೆ. ಮಹಾದೇವ್ ಬೆಟ್ಟಿಂಗ್ ಆಪ್ ಕೇಸ್ನಲ್ಲಿ ಇ.ಡಿ. ಕೆಂಗಣ್ಣಿಗೆ ಬಿದ್ದಾಗಿನಿಂದ ಚಂದ್ರಾಕರ್ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ಕಡಿಮೆ ಮಾಡಿದ್ದಾನೆ. ಹಾಗೂ ಕೆಲವು ಆಯ್ದ ಸೂಟ್ಗಳು, ಖಾಸಗಿ ಮನೆಗಳು ಅಥವಾ ರೆಸಾರ್ಟ್ಗಳಲ್ಲಿ ಮಾತ್ರವೇ ಬಹುತೇಕ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ಮೂಲಗಳು ವಿವರಿಸಿವೆ.
ಪಾಕ್ಗೆ ಪಲಾಯನ: ಸೋದರ ದಾವೂದ್ ಇಬ್ರಾಹಿಂ ಮತ್ತು ಆತನ ಇತರ ಕುಟುಂಬ ಸದಸ್ಯರೊಂದಿಗೆ ಕಸ್ಕರ್ 1986ರಲ್ಲಿ ಪಾಕಿಸ್ತಾನಕ್ಕೆ ಪಲಾಯನ ಮಾಡಿದ್ದ ಎನ್ನಲಾಗಿದೆ. ಆಗಿನಿಂದ ಆತ ಯುಎಇ, ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ನಡುವೆ ಸ್ಥಳ ಬದಲಾವಣೆ ಮಾಡುತ್ತಿರುತ್ತಾನೆ. ಗ್ಯಾಂಗ್ಸ್ಟರ್ ದಾವೂದ್ಗೆ ಆರು ಸೋದರರಿದ್ದು ಆ ಪೈಕಿ ನೂರಾ, ಹುಮಾಯೂನ್ ಮತ್ತು ಸಬೀರ್ ಎಂಬ ಮೂವರು ಮೃತರಾಗಿದ್ದಾರೆ. ಅನೀಸ್, ಇಕ್ಬಾಲ್ ಮತ್ತು ಕಸ್ಕರ್ ಉಳಿದ ಮೂರು ಸೋದರರು. ಇಕ್ಬಾಲ್ ಭಾರತದಲ್ಲಿ ವಾಸಿಸುತ್ತಿದ್ದು ಅನೀಸ್ ಮತ್ತು ಕಸ್ಕರ್ ಕರಾಚಿಯಲ್ಲಿ ದಾವೂದ್ನೊಂದಿಗೆ ನೆಲೆಸಿದ್ದಾರೆ.
ಕ್ರಿಕೆಟ್ ಕೂಟಕ್ಕೆ ಪ್ರಾಯೋಜಕತ್ವ: ಶ್ರೀಲಂಕಾದ ಟಿ20 ಕ್ರಿಕೆಟ್ ಟೂರ್ನಿಯಾದ ಲಂಕಾ ಪ್ರೀಮಿಯರ್ ಲೀಗ್ನ ಪ್ರಾಯೋಜಕತ್ವ ವಹಿಸಿರುವವರಲ್ಲಿ ‘ಖೇಲೋಯಾರ್’ ಗೇಮಿಂಗ್ ಆಪ್ ಕೂಡ ಒಂದಾಗಿದೆ. ಈ ವರ್ಷ ಜುಲೈನಲ್ಲಿ ಈ ಟೂರ್ನಿ ನಡೆದಿತ್ತು. ಗೋವಿಂದ, ನೀಲ್ ನಿತಿನ್ ಮುಂತಾದ ನಟರು ಮತ್ತಿತರರನ್ನು ಖೇಲೋಯಾರ್ ಆಪ್ ಪ್ರಚಾರಕ್ಕೆ ಬಳಸಿಕೊಳ್ಳಲಾಗಿದೆ.
ಏನಿದು ಖೇಲೋಯಾರ್ ಆ್ಯಪ್?: ಮಹಾದೇವ್ ಬುಕ್ ಆಪ್ನಂತೆಯೇ ಇರುವ ಒಂದು ಆನ್ಲೈನ್ ವೇದಿಕೆಯಾಗಿದೆ ‘ಖೇಲೋಯಾರ್’. ಇದರಲ್ಲಿ ಪಾಕಿಸ್ತಾನಿ ರೂಪಾಯಿಗಳಲ್ಲಿ ಆಡುವ ಮೂಲಕ ಬಹುಮಾನ ಗೆಲ್ಲಬಹುದಾಗಿದೆ. ಸಿಂಧ್ ಪ್ರಾಂತ್ಯಕ್ಕೆ ಸೇರಿದ ಕಸ್ಕರ್ನ ಆಪ್ತ ಸಹಾಯಕನೊಬ್ಬ ಚಂದ್ರಾಕರ್ ಮತ್ತು ಉಪ್ಪಳ್ ನೇತೃತ್ವದಲ್ಲಿ ಈ ಆಪ್ಅನ್ನು ನಡೆಸುತ್ತಾನೆ. ಮಹಾದೇವ್ ಬೆಟ್ಟಿಂಗ್ ಆಪ್, 60ಕ್ಕೂ ಅಧಿಕ ಬೆಟ್ಟಿಂಗ್ ಗೇಮಿಂಗ್ ಆಪ್ಗಳು ಮತ್ತು ಸೈಟ್ಗಳನ್ನು ಅಕ್ರಮವಾಗಿ ನಡೆಸುತ್ತಿರುವುದು ಇ.ಡಿ. ತನಿಖೆಯಿಂದ ಬಯಲಾಗಿದೆ. 1997ರಲ್ಲಿ ಪಾಕಿಸ್ತಾನ ಮಂಜೂರು ಮಾಡಿದ್ದ ಪಾಸ್ಪೋರ್ಟ್ ಬಳಸಿಕೊಂಡು ಕಸ್ಕರ್ ದುಬೈಯ ನಿವಾಸಿ ವೀಸಾ (ರೆಸಿಡೆಂಟ್ ವೀಸಾ) ಹೊಂದಿದ್ದಾನೆಂದು ಮೂಲಗಳು ಹೇಳಿವೆ.