ನ್ಯೂಸ್

ಮಕ್ಕಳು ಬಿಡಿಸಿದ್ದ ರಂಗೋಲಿ ಅಳಿಸಿ ಆಕ್ರೋಶ! ಹಬ್ಬದ ಮಹತ್ವ ತಿಳಿಯದ ಮಹಿಳೆ ವಿರುದ್ಧ ನೆಟ್ಟಿಗರು ಕಿಡಿ

ಬೆಂಗಳೂರು: ಸೆ.15ರಂದು ಓಣಂ (Onam) ಹಬ್ಬವನ್ನು ರಾಜ್ಯದ ಹಲವೆಡೆ ಅದ್ಧೂರಿಯಾಗಿ ಸಂಭ್ರಮಿಸಲಾಯಿತು. ಮನೆ, ಅಪಾರ್ಟ್​ಮೆಂಟ್​ ಮತ್ತು ಆಫೀಸ್​ ಕಛೇರಿಗಳಲ್ಲಿ ಹಬ್ಬವನ್ನು ಸಡಗರದಿಂದ ಆಚರಣೆ ಮಾಡಲಾಯಿತು. ಅನೇಕರು ಹಬ್ಬದ ಪ್ರಯುಕ್ತ ತಮ್ಮ ಮನೆಗಳ ಮುಂದೆ ರಂಗೋಲಿ ಬಿಡಿಸುವ ಮೂಲಕ ಖುಷಿಯನ್ನು ಹಂಚಿದ್ದರು. ಆದ್ರೆ, ಬೆಂಗಳೂರಿನ (Bengaluru) ಅಪಾರ್ಟ್​ಮೆಂಟ್​ವೊಂದರಲ್ಲಿ ಮಹಿಳೆಯೊಬ್ಬರು ಮಕ್ಕಳೆಲ್ಲಾ ಒಟ್ಟುಗೂಡಿ ಚಿತ್ರಿಸಿದ್ದ ರಂಗೋಲಿಯನ್ನು ಕಾಲಿನಿಂದ ಅಳಿಸಿ ಹಾಕಿದ ಘಟನೆ ಸ್ಥಳೀಯರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿರುವುದು ಇದೀಗ ತಡವಾಗಿ ಬೆಳಕಿಗೆ ಬಂದಿದೆ.

ಹಬ್ಬದ ಸಂಪ್ರದಾಯ, ಸಂಸ್ಕೃತಿ ಮರೆತ ಈ ಮಹಿಳೆ ಅನ್ಯರ ಭಾವನೆಗೆ ಧಕ್ಕೆ ತರುವಂತೆ ನಡೆದುಕೊಂಡಿರುವುದು ಇದೀಗ ಅನೇಕರ ಆಕ್ರೋಶಕ್ಕೆ ಕಾರಣವಾಗಿದೆ. ಒಂದೇ ಫ್ಲ್ಯಾಟ್​ನಲ್ಲಿ ಇದ್ದ ಇತರರೊಂದಿಗೆ ವಾಗ್ವಾದಕ್ಕಿಳಿದ ಮಹಿಳೆ ಸಿಟ್ಟಿಗೆದ್ದು ಹೂವಿನ ಆಕಾರದಲ್ಲಿರುವ ರಂಗೋಲಿ (Onam Pookalam) ಮೇಲೆ ಕಾಲಿಟ್ಟು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಚಪ್ಪಲಿ ಧರಿಸಿಯೇ ರಂಗೋಲಿ ತುಳಿದಿರುವ ಈಕೆ ಸ್ಥಳೀಯರೊಂದಿಗೆ ತೀವ್ರ ಜಟಾಪಟಿ ನಡೆಸಿದ್ದಾರೆ.

ಈ ವಿಡಿಯೋ ವೈರಲ್ ಆಗ್ತಿದ್ದಂತೆ ಅನೇಕರು ಮಹಿಳೆ ವಿರುದ್ಧ ಕಿಡಿಕಾರಿದ್ದು, ಆಕೆಯ ನಡೆ ಖಂಡಿಸಿ ಕಮೆಂಟ್​ನಲ್ಲಿ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಒಬ್ಬರ ಖಾಸಗಿ ಫ್ಲ್ಯಾಟ್​​ ಮುಂದೆ ನೀವ್ಯಾರು ರಂಗೋಲಿ ಬಿಡಲು ಎಂದು ಮಹಿಳೆ ನೆರೆಹೊರೆಯವರೊಂದಿಗೆ ವಾಗ್ವಾದ ನಡೆಸಿರುವುದು ವಿಡಿಯೋ ಮುಖೇನ ತಿಳಿದುಬಂದಿದೆ,(ಏಜೆನ್ಸೀಸ್).