ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟಿಸುವ ಕುರಿತು ಟ್ವಿಟರ್ನಲ್ಲಿ ಬೆದರಿಕೆ ಹಾಕಿದ ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಿ, ತನಿಖೆ ಆರಂಭಿಸಿರುವ ಬೆಂಗಳೂರು ಪೊಲೀಸರು ಟ್ವಿಟರ್ ಬಳಕೆದಾರನ ಪತ್ತೆಗೆ ಬಲೆ ಬೀಸಿದ್ದಾರೆ.
ಫ್ಯೂಚರ್ ಎಫ್ಟಿಸುಫ್ಜಾನ್ (@futureftsufjan) ಹೆಸರಿನ ಟ್ವಿಟರ್ ಖಾತೆಯಲ್ಲಿ ಡಿಸೆಂಬರ್ 10ರಂದು ರಾತ್ರಿ 10.15ಕ್ಕೆ ಅಪರಿಚಿತ ವ್ಯಕ್ತಿ ಟ್ವೀಟ್ ಮಾಡಿದ್ದಾನೆ. ನಾನು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಇಡುತ್ತೇನೆ. ಹೀಗಾಗಿ ಅವರು ನಗರಕ್ಕೆ ಹತ್ತಿರದಲ್ಲಿ ಮತ್ತೊಂದು ನಿಲ್ದಾಣವನ್ನು ಮರು ನಿರ್ಮಿಸಬೇಕಾಗುತ್ತದೆ ಎಂದು ಟ್ವೀಟ್ ಮಾಡಿದ್ದಾನೆ.
ಇನ್ನು ಅಪರಿಚಿತ ಮಾಡಿರುವ ಟ್ವೀಟ್ ಅನ್ನು ಕೇವಲ ಇಬ್ಬರು ರೀಟ್ವೀಟ್ ಮಾಡಿದ್ದು, 6 ಮಂದಿ ಲೈಕ್ಸ್ ಮಾಡಿದ್ದಾರೆ. 500ಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಟ್ವಿಟರ್ ಬಳಕೆದಾರ 300ಕ್ಕೂ ಹೆಚ್ಚು ಮಂದಿಯನ್ನು ಫಾಲೋ ಮಾಡುತ್ತಿದ್ದಾನೆ. 10ನೇ ತಾರೀಖಿನಲ್ಲಿ ಟ್ವೀಟ್ ಮಾಡಿದ್ದು, ಹೆಚ್ಚು ಗಮನ ಸೆಳೆದಿರಲಿಲ್ಲ.
ಇದೀಗ ಟ್ವೀಟ್ ವಿರುದ್ಧ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಮ್ಯಾನೇಜರ್ ರೂಪಾ ಮ್ಯಾಥ್ಯೂ ಅವರು ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್‌ಐಆರ್ ಸಹ ದಾಖಲಿಸಲಾಗಿದೆ. ಎಫ್‌ಐಆರ್ ದಾಖಲಿಸುವುದಕ್ಕೂ ಮುನ್ನ ಎನ್ಸಿಆರ್ ದಾಖಲಿಸಿದ್ದರು. ಆದರೆ, ದೇವನಹಳ್ಳಿ ಸಿವಿಲ್ ನ್ಯಾಯಾಧೀಶರು ಆದೇಶಿಸಿದ ಬಳಿಕ ಎಫ್‌ಐಆರ್ ದಾಖಲಾಗಿದ್ದು ತನಿಖೆ ಆರಂಭವಾಗಿದೆ.
ಇದೀಗ ಆರೋಪಿ ವಿರುದ್ಧ ಸಾರ್ವಜನಿಕ ಕಿಡಿಗೇಡಿತನ ಮತ್ತು ಕ್ರಿಮಿನಲ್ ಬೆದರಿಕೆಯೊಡ್ಡಿದ ಹೇಳಿಕೆಯನ್ನು ನೀಡುವುದಕ್ಕೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.