ನ್ಯೂಸ್

ಕಾಂಚನಜುಂಗಾ ಎಕ್ಸ್​ಪ್ರೆಸ್​ಗೆ ಗೂಡ್ಸ್​ ರೈಲು ಡಿಕ್ಕಿ; ಐದು ಮಂದಿ ಮೃತ್ಯು, ಹಲವರು ಗಂಭೀರ

ಕಲ್ಕತ್ತಾ: ಕಾಂಚನಜುಂಗಾ ಎಕ್ಸ್​ಪ್ರೆಸ್​ಗೆ ಗೂಡ್ಸ್​ ರೈಲು ಡಿಕ್ಕಿ ಹೊಡೆದ ಪರಿಣಾಮ ಹಲವು ಐದು ಮಂದಿ ಪ್ರಯಾಣಿಕರು ಮೃತಪಟ್ಟು ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದ ನ್ಯೂ ಜಲ್​ಪೈಗುರಿ ಜಿಲ್ಲೆಯ ರಂಗಪಾಣಿ ಬಳಿ ನಡೆದಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಡಾರ್ಜಿಲಿಂಗ್ ಜಿಲ್ಲೆಯ ಫನ್ಸಿಡೆವಾ ಪ್ರದೇಶದಲ್ಲಿ ಸಂಭವಿಸಿದ ದುರಂತ ರೈಲು ಅಪಘಾತದ ಬಗ್ಗೆ ತಿಳಿದು ಆಘಾತವಾಯಿತು. ಕಾಂಚನಜುಂಗಾ ಎಕ್ಸ್‌ಪ್ರೆಸ್ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ರಕ್ಷಣಾ, ಚೇತರಿಕೆ, ವೈದ್ಯಕೀಯ ನೆರವಿಗಾಗಿ ಡಿಎಂ, ಎಸ್ಪಿ, ವೈದ್ಯರು, ಆಂಬ್ಯುಲೆನ್ಸ್‌ಗಳು ಮತ್ತು ವಿಪತ್ತು ತಂಡಗಳು ಸ್ಥಳಕ್ಕೆ ಧಾವಿಸಿವೆ ಎಂದು ತಿಳಿಸಿದ್ದಾರೆ.

ಇತ್ತ ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿರುವ ರಕ್ಷಣಾ ತಂಡಗಳು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿವೆ. ಅಪಘಾತಕ್ಕೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ. ಮತ್ತಷ್ಟು ಮಾಹಿತಿ ನಿರೀಕ್ಷಿಸಲಾಗಿದೆ...