Beer Price Hiked: ಕುಡಿತಕ್ಕೆ ದಾಸ, ಮದ್ಯವೇ ಗತ್ತು, ಗಮ್ಮತ್ತು ಎನ್ನುವ ಮದ್ಯಪ್ರಿಯರಿಗೆ ಇದೀಗ ಅಚ್ಚರಿ ಎದುರಾಗಿದ್ದು, ಮದ್ಯದ ದರದಲ್ಲಿ ಏರಿಕೆಯಾಗಿರುವ ವಿಷಯ ಸದ್ಯ ಈ ಸರ್ಕಾರದ ವಿರುದ್ಧ ಭಾರೀ ಬೇಸರ ಹಾಗೂ ಅಸಮಾಧಾನ ಹೊರಹಾಕುವಂತೆ ಮಾಡಿದೆ.
ಇಂದಿನಿಂದಲೇ (ಫೆಬ್ರವರಿ 11) ಜಾರಿಗೆ ಬರುವಂತೆ ಮದ್ಯಪ್ರಿಯರ ನೆಚ್ಚಿನ ಬಿಯರ್ ಬೆಲೆಯಲ್ಲಿ ಹೆಚ್ಚಳ ಮಾಡಿರುವ ತೆಲಂಗಾಣ ಸರ್ಕಾರ, ಬಿಯರ್ ಡ್ರಿಂಕ್ಸ್ಗಳ ದರದಲ್ಲಿ ಶೇ.15ರಷ್ಟು ಹೆಚ್ಚಿಸಿದೆ. ಭಾರತದ ಅತಿ ಹೆಚ್ಚು ಬಿಯರ್ ಗ್ರಾಹಕ ರಾಜ್ಯವಾದ ತೆಲಂಗಾಣ, ಮದ್ಯ ಮಾರಾಟದಿಂದ ಬರುವ ಆದಾಯವನ್ನು ದುಪ್ಪಟ್ಟಾಗಿಸುವ ಗುರಿಯತ್ತ ಹೆಜ್ಜೆಯಿಟ್ಟಿದೆ. ಹೊಸ ಅಬಕಾರಿ ನೀತಿಯ ಭಾಗವಾಗಿ ರಾಜ್ಯಾದ್ಯಂತ ಪರಿಷ್ಕೃತ ಬೆಲೆಯನ್ನು ಇದೀಗ ಜಾರಿಗೆ ತಂದಿದೆ.
ರಾಜ್ಯ ಸರ್ಕಾರ ವಿಧಿಸಿದ ಪರಿಷ್ಕೃತ ಅಬಕಾರಿ ಸುಂಕಗಳ ಪರಿಣಾಮವಾಗಿ ಬೆಲೆ ಏರಿಕೆಯಾಗಿದ್ದು, ದಕ್ಷಿಣ ಭಾರತದಲ್ಲಿ ಬಿಯರ್ ಬಳಕೆಗೆ ತೆಲಂಗಾಣ ಅತ್ಯಂತ ದುಬಾರಿ ರಾಜ್ಯಗಳಲ್ಲಿ ಒಂದಾಗಿದೆ. ಈ ಹೆಚ್ಚಳದೊಂದಿಗೆ, ಬ್ರ್ಯಾಂಡ್ ಅನ್ನು ಅವಲಂಬಿಸಿ, ನಿಯಮಿತ 650 ಮಿಲಿ ಬಾಟಲ್ ಬಿಯರ್ ಬೆಲೆ ಸುಮಾರು 170ರಿಂದ 180 ರೂ.ಗಳಷ್ಟು ವೆಚ್ಚ ಆಗಲಿದೆ ಎಂದು ಹೇಳಲಾಗಿದೆ.
ನಿವೃತ್ತ ನ್ಯಾಯಮೂರ್ತಿ ಜೈಸ್ವಾಲ್ ನೇತೃತ್ವದ ಸಮಿತಿಯು ಈ ಹಿಂದೆ ಬಿಯರ್ ಬೆಲೆಗಳಲ್ಲಿ ಶೇ.15ರಷ್ಟು ಹೆಚ್ಚಳವನ್ನು ಪ್ರಸ್ತಾಪಿಸಿತ್ತು. ಸರ್ಕಾರಿ ಆದೇಶವನ್ನು ಉಲ್ಲೇಖಿಸಿ, ಸುದ್ದಿ ಸಂಸ್ಥೆ ರಾಯಿಟರ್ಸ್ ಪ್ರಕಟಿಸಿರುವ ವರದಿಯ ಪ್ರಕಾರ, ಪ್ರಸ್ತುತವಿರುವ ಎಲ್ಲಾ ಸ್ಟಾಕ್‌ಗಳನ್ನು ಪರಿಷ್ಕೃತ ದರಗಳಲ್ಲಿ ಮಾರಾಟ ಮಾಡಲು ಸರ್ಕಾರ ನಿರ್ಧರಿಸಿದೆ.
ಕಳೆದ ತಿಂಗಳು, ಹೈನೆಕೆನ್ ಒಡೆತನದ ಯುನೈಟೆಡ್ ಬ್ರೂವರೀಸ್ ಲಿಮಿಟೆಡ್ (ಯುಬಿಎಲ್) ದಕ್ಷಿಣ ರಾಜ್ಯಕ್ಕೆ ಬಿಯರ್ ಸರಬರಾಜನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತು. ಯುನೈಟೆಡ್ ಬ್ರೂವರೀಸ್ ಲಿಮಿಟೆಡ್ (ಯುಬಿಎಲ್) ಕಿಂಗ್‌ಫಿಷರ್, ಹೈನೆಕೆನ್, ಆಮ್ಸ್ಟೆಲ್ ಬಿಯರ್ ಮತ್ತು ಲಂಡನ್ ಪಿಲ್ಸ್ನರ್‌ನಂತಹ ಕೆಲವು ಜನಪ್ರಿಯ ಬಿಯರ್ ಬ್ರ್ಯಾಂಡ್ಗಳ ಸರಬರಾಜನ್ನು ಸ್ಥಗಿತಗೊಳಿಸಿ, ಬಿಯರ್ ಬೆಲೆಯನ್ನು ಶೇ.33ರಷ್ಟು ಹೆಚ್ಚಿಸಬೇಕೆಂದು ಒತ್ತಾಯಿಸಿತು,(ಏಜೆನ್ಸೀಸ್).