ಜೈನಾಪುರ ಲೇಔಟ್ ದರೋಡೆ ಪ್ರಕರಣ, ಮೃತ ಸಂತೋಷನ ಕುಟುಂಬಕ್ಕೆ ನೆರವಾಗಿ, ಸರ್ಕಾರಕ್ಕೆ ಸಂಘಟನೆಗಳ ಒತ್ತಾಯ

SANTOSH KANNAL CASE
ವಿಜಯಪುರ ಜಿಲ್ಲಾಡಳಿತಕ್ಕೆ ನ್ಯಾಯವಾದಿಗಳು ಮನವಿ ಸಲ್ಲಿಸಿದರು. ಶ್ರೀಶೈಲ ಮುಳಜಿ, ವಿ.ಎನ್. ಪಾಟೀಲ (ಟಕ್ಕೆ), ಸಿ.ಎಂ. ಅಂಗಡಿ, ಸಿದ್ದನಗೌಡ ಪೊಲೀಸ್‌ಪಾಟೀಲ ಮತ್ತಿತರರಿದ್ದಾರೆ.
Published on

ವಿಜಯಪುರ: ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಜೈನಾಪುರ ಲೇಔಟ್ ದರೋಡೆ ಪ್ರಕರಣದಲ್ಲಿ ಸಾವಿಗೀಡಾಗಿರುವ ಸಂತೋಷ ಕನ್ನಾಳನ ಕುಟುಂಬಕ್ಕೆ ಸರ್ಕಾರ ನೆರವು ನೀಡಬೇಕೆಂದು ಆಗ್ರಹಿಸಿ ನ್ಯಾಯವಾದಿಗಳು ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಮಂಗಳವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ನ್ಯಾಯವಾದಿ ಶ್ರೀಶೈಲ ಮುಳಜಿ ಮಾತನಾಡಿ, ಜ. 16 ರಂದು ಮಧ್ಯರಾತ್ರಿ 12ರ ಸುಮಾರಿಗೆ ಜೈನಾಪುರ ಲೇಔಟ್‌ನ ಬಾಡಿಗೆ ಮನೆಯಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಸಂತೋಷ ಕನ್ನಾಳಗೆ ಚಾಕುವಿನಿಂದ ಇರಿದ ಕಳ್ಳರು ಆತನನ್ನು ಮನೆಯ ಮೊದಲ ಮಹಡಿಯಿಂದ ಕೆಳಗೆ ಎಸೆದಿದ್ದರು. ಸಂತೋಷನ ಬೆನ್ನು ಹಾಗೂ ಎದೆಯ ಕೆಳಭಾಗಕ್ಕೆ ಚಾಕುವಿನಿಂದ ಇರಿದ ಕಾರಣ ಸಂತೋಷನ ಮೂತ್ರಪಿಂಡಕ್ಕೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಸಂತೋಷ ಸಾವಿಗೀಡಾಗಿದ್ದು, ಇದಕ್ಕೆ ವ್ಯವಸ್ಥೆಯ ವೈಫಲ್ಯವೇ ಕಾರಣ ಎಂದರು.

ನ್ಯಾಯವಾದಿ ದಾನೇಶ ಅವಟಿ ಮಾತನಾಡಿ, ಆರ್ಥಿಕವಾಗಿ ತೀವ್ರ ತೊಂದರೆಯಲ್ಲಿದ್ದ, ಬಡತನದಿಂದಲೇ ಬೆಳೆದು ಬಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಂತೋಷನ ನಿಧನದಿಂದಾಗಿ ಆತನ ಕುಟುಂಬ ಬೀದಿಗೆ ಬರುವಂತಾಗಿದೆ. ಘಟನೆಯಲ್ಲಿ ರೂ.60 ಸಾವಿರ ಮೌಲ್ಯದ 15 ಗ್ರಾಂ ಚಿನ್ನ ದೋಚಲಾಗಿದೆ. ಅಲ್ಲದೇ, ಸಂತೋಷನ ಆಸ್ಪತ್ರೆಗೆ ಖರ್ಚು-ವೆಚ್ಚ ಎಂದು ಸುಮಾರು 25 ಲಕ್ಷ ರೂಪಾಯಿ ಖರ್ಚಾಗಿದೆ. ಸಾಲ ಮಾಡಿ ಆಸ್ಪತ್ರೆಗೆ ಹಣ ಕಟ್ಟಿದರೂ ಸಂತೋಷನನ್ನು ಉಳಿಸಿಕೊಳ್ಳಲಾಗಿಲ್ಲ. ಇಷ್ಟಕ್ಕೆಲ್ಲ ಸರ್ಕಾರದ ವೈಫಲ್ಯವೇ ಕಾರಣ. ಹೀಗಾಗಿ ಕೂಡಲೇ ಸರ್ಕಾರ ಸಂತೋಷನ ಕುಟುಂಬಕ್ಕೆ ಪರಿಹಾರ ಕಲ್ಪಿಸಬೇಕೆಂದು ಒತ್ತಾಯಿಸಿದರು.

ನ್ಯಾಯವಾದಿ ವಿ.ಎನ್. ಪಾಟೀಲ (ಟಕ್ಕೆ) ಮಾತನಾಡಿ, ಸಂತೋಷ ಮೃತಪಟ್ಟರೂ ಯಾವೊಬ್ಬ ರಾಜಕೀಯ ನಾಯಕರೂ ಭೇಟಿ ನೀಡಲಿಲ್ಲ. ಪರಿಹಾರವೂ ಕಲ್ಪಿಸಿಲ್ಲ. ಸರ್ಕಾರಿ ಅಧಿಕಾರಿಗಳು ಸಹ ಕನಿಷ್ಠ ಪಕ್ಷ ಸಂತಾಪ ವ್ಯಕ್ತಪಡಿಸಲಿಲ್ಲ. ಹೀಗಾಗಿ ಈ ವ್ಯವಸ್ಥೆಯಲ್ಲಿ ಮಾನವ ಜೀವಕ್ಕೆ ಬೆಲೆಯೇ ಇಲ್ಲವಾ ಎಂದು ಜನ ಆಕ್ರೋಶ ಮತ್ತು ಅಸಹಾಯಕತೆ ವ್ಯಕ್ತಪಡಿಸುವಂತಾಗಿದೆ. ಈಗಲಾದರೂ ನೊಂದ ಕುಟುಂಬಕ್ಕೆ ಪರಿಹಾರ ಕಲ್ಪಿಸಬೇಕು. ಅಲ್ಲದೇ, ಸಂತೋಷನ ಪತ್ನಿಗೆ ಸರ್ಕಾರಿ ನೌಕರಿ ನೀಡಬೇಕು. ಮಗುವಿನ ಖರ್ಚು-ವೆಚ್ಚ ನೋಡಿಕೊಳ್ಳಬೇಕೆಂದು ಒತ್ತಾಯಿಸಿದರು.

ನ್ಯಾಯವಾದಿಗಳಾದ ಸಿ.ಎಂ. ಅಂಗಡಿ, ಸಿದ್ದನಗೌಡ ಪೊಲೀಸ್‌ಪಾಟೀಲ, ಪ್ರವೀಣ ಹುಡೇದಾಳ, ಶಿವಾನಂದ ಬಗಲಿ, ರೈತ ಮುಖಂಡ ಸಂಗಮೇಶ ಸಗರ, ತನು ಫೌಂಡೇಶನ್ ಅಧ್ಯಕ್ಷ ವಿಜಯಕುಮಾರ ಕಾಳಶೆಟ್ಟಿ, ಯುವ ಮುಖಂಡ ಷಣ್ಮುಖ ರಾಮತೀರ್ಥ, ಸಿದ್ಧಾರೂಢ ಬಿರಾದಾರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net