ನ್ಯೂಸ್

ಹಾವಿನ ವಿಷ ಮಾರಾಟ ಆರೋಪ: 'ಮೊದಲು ಇಸ್ಕಾನ್, ಈಗ ನಾನು?, ಕ್ಷಮೆಯಾಚಿಸಲು ಸಿದ್ಧರಾಗಿರಿ' ಎಂದ ಎಲ್ವೀಶ್​!

ಉತ್ತರಪ್ರದೇಶ: ನೋಯ್ಡಾ ಮತ್ತು ಗುರುಗ್ರಾಮ್‌ನಲ್ಲಿ ನಡೆದ ರೇವ್ ಪಾರ್ಟಿಗಳಲ್ಲಿ ಅಳಿವಿನಂಚಿನಲ್ಲಿರುವ ಹಾವುಗಳ ವಿಷವನ್ನು ಸರಬರಾಜು ಮಾಡುತ್ತಿದ್ದಾರೆ ಎಂಬ ಆರೋಪದಡಿ ಖ್ಯಾತ ಯೂಟ್ಯೂಬರ್​, ಬಿಗ್​ಬಾಸ್​ ಒಟಿಟಿ 2 ವಿಜೇತ ಎಲ್ವಿಶ್ ಯಾದವ್ ವಿರುದ್ಧ ಯುಪಿ ಪೊಲೀಸರು ಇಂದು ಎಫ್​ಐಆರ್​ ದಾಖಲಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಸಂಸದೆ ಮತ್ತು ಪೀಪಲ್ ಫಾರ್ ಅನಿಮಲ್ಸ್ (PFA) ಸಂಸ್ಥಾಪಕಿ ಮೇನಕಾ ಗಾಂಧಿ, “ಆತನನ್ನು ತಕ್ಷಣವೇ ಬಂಧಿಸಬೇಕು. ಇದು ಗ್ರೇಡ್-1 ಅಪರಾಧ, ಅಂದರೆ ಏಳು ವರ್ಷಗಳ ಜೈಲು ಶಿಕ್ಷೆ. ಪಿಎಫ್‌ಎ ಬಲೆ ಬೀಸಿ ಈ ಜನರನ್ನು ಹಿಡಿದಿದೆ. ಅವನ ವೀಡಿಯೊಗಳಲ್ಲಿ ಅಳಿವಿನಂಚಿನಲ್ಲಿರುವ ಹಾವುಗಳನ್ನು ಬಳಸಿರುವುದು ಕಂಡುಬಂದಿದೆ. ಈತ ನೋಯ್ಡಾ ಮತ್ತು ಗುರುಗ್ರಾಮ್‌ನಲ್ಲಿ ಹಾವಿನ ವಿಷವನ್ನು ಮಾರಾಟ ಮಾಡಿದ್ದಾನೆ ಎಂಬುದು ನಮಗೆ ತಿಳಿದುಬಂದಿದೆ” ಎಂದಿದ್ದರು. ಈ ಹೇಳಿಕೆಗೆ ಇದೀಗ ಎಲ್ವಿಶ್​ ಪ್ರತಿಕ್ರಿಯಿಸಿದ್ದಾರೆ.

ಮೇನಕಾ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿದ ಎಲ್ವಿಶ್​, "ಈ ಹಿಂದೆ ಅವರು ಇಸ್ಕಾನ್ ವಿರುದ್ಧ ಆರೋಪ ಮಾಡಿದಂತೆಯೇ ತಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಯುಪಿ ಪೊಲೀಸರು ಈ ಆರೋಪಗಳನ್ನು ಸರಿಯಾಗಿ ಸಾಬೀತುಪಡಿಸಿದರೆ, ನಾನು ಜವಾಬ್ದಾರಿ ತೆಗೆದುಕೊಳ್ಳಲು ಸಿದ್ಧನಿದ್ದೇನೆ" ಎಂದು ಹೇಳಿದ್ದಾರೆ.

"ಮೊದಲ ಇಸ್ಕಾನ್, ಈಗ ನಾನು?, ಕ್ಷಮೆಯಾಚಿಸಲು ಸಿದ್ಧರಾಗಿರಿ" ಎಂದು ಮೇನಕಾ ಗಾಂಧಿಗೆ ಎಲ್ವಿಶ್​ ತಿರುಗೇಟು ನೀಡಿದ್ದಾರೆ,(ಏಜೆನ್ಸೀಸ್).