ನ್ಯೂಸ್

BBKS11: ಒಂದೇ ಒಂದು ಅವಕಾಶ ಕೊಡಿ… ರಂಜೀತ್​ಗೆ 'ಬಿಗ್'​ ಸ್ಪರ್ಧಿಗಳ ಕಣ್ಣೀರಿನ ಬೀಳ್ಕೊಡುಗೆ!

ಬೆಂಗಳೂರು: ರಿಯಾಲಿಟಿ ಶೋಗಳ ಪೈಕಿ ಅತೀ ದೊಡ್ಡ ರಿಯಾಲಿಟಿ ಶೋ ಎಂದೇ ಖ್ಯಾತಿ ಗಳಿಸಿರುವ ಕನ್ನಡ ಬಿಗ್ ಬಾಸ್ (BBKS 11) ಮನರಂಜನಾ ಕಾರ್ಯಕ್ರಮ ಅದ್ಯಾಕೋ ಮೊದಲ ಎರಡು ವಾರದಲ್ಲಿ ಕಂಡ ಹಾಸ್ಯ, ಮನರಂಜನೆ ಮೂರನೇ ವಾರಕ್ಕೆ ಕಾಲಿಡಲಿಲ್ಲ. ವೀಕ್ಷಕರು ನಿರೀಕ್ಷಿಸಿದಂತೆ ಯಾವುದು ನಡೆಯದೆ, ಎಲ್ಲವೂ ತಲೆಕೆಳಗಾಗಿ ನಿಂತಿರುವುದು ಇದೀಗ ಬಿಗ್ ಬಾಸ್​ ಕಾರ್ಯಕ್ರಮ ನೋಡುವ ಪ್ರತಿಯೊಬ್ಬರಲ್ಲೂ ಭಾರೀ ಅಚ್ಚರಿ ಮೂಡಿಸಿದೆ. 16 ಘಟಾನುಘಟಿ ಸ್ಪರ್ಧಿಗಳ ಪೈಕಿ 15 ಮಂದಿ ವಿರುದ್ಧ ಏಕಾಂಗಿಯಾಗಿ ವಾಗ್ದಾಳಿ ನಡೆಸಿದ ಲಾಯರ್​ ಜಗದೀಶ್​, ಹೆಣ್ಣು ನಿಂದನೆ ವಿಚಾರವಾಗಿ ಸದ್ಯ ಬಿಗ್​ ಮನೆಯಿಂದ ನೇರವಾಗಿ ಹೊರಬಿದ್ದರೆ, ದೈಹಿಕ ಹಲ್ಲೆ ಮಾಡಿದ ಕಾರಣ ರಂಜೀತ್​ ಕೂಡ ಹೊರನಡೆದಿದ್ದಾರೆ.

ನಿನ್ನೆಯ (ಅ.18) ಸಂಚಿಕೆಯಲ್ಲಿ ಬಿಗ್​ ಬಾಸ್​, ಮನೆಯ ಅಷ್ಟು ಸದಸ್ಯರನ್ನು ಒಂದು ಕಡೆ ಶಾಂತರಾಗಿ ಕುಳಿತುಕೊಳ್ಳಲು ಹೇಳಿ, ತಮ್ಮ ನಿರ್ಧಾರವನ್ನು ಮುಕ್ತವಾಗಿ ಹಾಗೂ ಸೂಕ್ತ ಕಾರಣಗಳನ್ನು ನೀಡಿ, ಯಾರದ್ದು ತಪ್ಪು ಎಂಬುದನ್ನು ಸ್ಪಷ್ಟಪಡಿಸಿದರು. ಮೊದಲ ಜಗದೀಶ್​ ಮಾಡಿದ ಎರಡು ಪ್ರತ್ಯೇಕ ವಿಚಾರಗಳು ತೀವ್ರ ಗಂಭೀರವಾದ ಹಿನ್ನಲೆ ಇದನ್ನು ಸಹಿಸಲಾಗದು ಎಂದು ಉಲ್ಲೇಖಿಸಿದ ಬಿಗ್​ ಬಾಸ್​, ಮಹಿಳೆಯರನ್ನು ಗೌರವಿಸಿ, ಸಂಬೋಧಿಸಿ ಮಾತನಾಡಬೇಕಿತ್ತು. ಆದ್ರೆ, ಜಗದೀಶ್​ ಇದ್ಯಾವುದನ್ನು ಮಾಡದೆ, ಅದಕ್ಕೆ ವಿರುದ್ಧವಾಗಿ ನಡೆದುಕೊಂಡ ಕಾರಣ ಬಿಗ್​ ಬಾಸ್​ ಅವರನ್ನು ನೇರವಾಗಿ ಮನೆಯ ಮುಖ್ಯದ್ವಾರದಿಂದ ಹೊರಬರಲು ಆದೇಶಿಸಿದರು. ಅದರಂತೆಯೇ ಕ್ಷಣಮಾತ್ರದಲ್ಲಿ ಲಾಯರ್​ ಜಗದೀಶ್ ಮನೆಯಿಂದ ಮೊದಲು ​ ಹೊರಬಂದಿದ್ದಾರೆ.

ಜಗದೀಶ್​ ಹೊರನಡೆದಿದ್ದೇ ತಡ ಸಂಭ್ರಮಾಚರಣೆಯಲ್ಲಿ ಭಾಗಿಯಾದ ಇತರೆ ಸ್ಪರ್ಧಿಗಳು, ಲಾಯರ್​ ಜಗದೀಶ್​​ರನ್ನು ಹೊರಗೆ ಕಳುಹಿಸಿದ್ದಕ್ಕೆ ಧನ್ಯವಾದ ತಿಳಿಸಿದರು. ಇನ್ನು ಇದೇ ಖುಷಿಯಲ್ಲಿದ್ದ ಮನೆ ಮಂದಿಗೆ ಅಚ್ಚರಿ ಮೂಡಿಸಿದ ಬಿಗ್​ ಬಾಸ್​, ಜಗದೀಶ್​ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ ರಂಜೀತ್​ಗೆ ಮನೆಯ ಮುಖ್ಯದ್ವಾರದಿಂದ ಹೊರಬರುವಂತೆ ಆದೇಶಿಸಿದರು. ರಂಜೀತ್​ ಯಾವುದೇ ತಪ್ಪು ಮಾಡಿಲ್ಲ, ತಿಳಿಯದೆ ಆ ಪರಿಸ್ಥಿತಿಯಲ್ಲಿ ಇಂತಹದ್ದೊಂದು ಘಟನೆ ನಡೆದುಹೋಗಿದೆ. ಇದು ಉದ್ದೇಶಪೂರ್ವಕವಲ್ಲ, ಕ್ಷಮಿಸಿ ಬಿಗ್ ಬಾಸ್​ ಎಂದು ಸ್ಪರ್ಧಿಗಳು ಮನವಿ ಮಾಡಿಕೊಂಡರು. ಇಷ್ಟಾದರೂ ಬಿಗ್ ಬಾಸ್​ ಮಾತ್ರ ಯಾರ ಮಾತಿಗೂ ಮಣಿಯದೆ, ತಿಳಿಸಿದ ಅಂತಿಮ ನಿರ್ಧಾರ, ರಂಜೀತ್​ ನೀವು ಈ ಕೂಡಲೇ ಹೊರಬರಬೇಕು ಎಂದು. ಇದರಿಂದ ತೀವ್ರ ದುಃಖಕ್ಕೆ ಒಳಗಾದ ಸ್ಪರ್ಧಿಗಳು, ರಂಜೀತ್​ಗೆ ಕಣ್ಣೀರಿನ ಬೀಳ್ಕೋಡುಗೆ ನೀಡಿದ್ದಾರೆ.