

ಬೆಂಗಳೂರು: ಸಿನಿಮಾದತ್ತ ಪ್ರೇಕ್ಷಕರನ್ನು ಆಕರ್ಷಿಸಲು ಚಿತ್ರತಂಡಗಳು ವಿಭಿನ್ನ, ವಿಶೇಷ ಟೈಟಲ್‌ಗಳ ಮೊರೆ ಹೋಗುತ್ತವೆ. ಇಂತಹ ಶೀರ್ಷಿಕೆಯ ವಿಚಾರವಾಗಿ ಕನ್ನಡ ಚಿತ್ರರಂಗದಲ್ಲಿ ಹಲವು ಪ್ರಯೋಗಗಳಾಗಿವೆ. ಇದಕ್ಕೆ ಹೊಸ ಸೇರ್ಪಡೆ ‘ಯಾಕೆ’. ಕನ್ನಡ, ತೆಲುಗು ಚಿತ್ರಗಳಲ್ಲಿ ಕಾರ್ಯನಿರ್ವಹಿಸಿರುವ ಪ್ರೇಮ್ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಮೈಥಲಾಜಿಕಲ್-ಹಾರರ್ ಜಾನರ್‌ನ ಈ ಸಿನಿಮಾದಲ್ಲಿ ನವ ಪ್ರತಿಭೆ ಉತ್ತಮ್‌ಗೆ ‘ಪ್ರಯಾಣಿಕರ ಗಮನಕ್ಕೆ’ ನಟಿ ಅಮಿತಾ ರಂಗನಾಥ್ ಜೋಡಿಯಾಗಿದ್ದಾರೆ. ನಟರಾದ ಶ್ರೀನಗರ್ ಕಿಟ್ಟಿ, ಒರಟ ಪ್ರಶಾಂತ್ ಟೈಟಲ್ ಲಾಂಚ್ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದರು.
ನಿರ್ದೇಶಕ ಪ್ರೇಮ್, ‘ಪ್ರತಿಯೊಬ್ಬರಿಗೂ ಕನಸು ನನಸು ಮಾಡಿಕೊಳ್ಳುವುದು ಹೇಗೆ ಎಂಬ ಪ್ರಶ್ನೆ ಇರುತ್ತದೆ. ಆ ಪ್ರಶ್ನೆಯೇ ‘ಯಾಕೆ’ ಚಿತ್ರದ ಕಥೆ. ಪ್ರತಿ ದೃಶ್ಯದಲ್ಲಿ ಯಾಕೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆ ಕಾರಣಕ್ಕಾಗಿ ಇದನ್ನೇ ಟೈಟಲ್ ಮಾಡಲಾಯಿತು. ನವೆಂಬರ್‌ನಿಂದ ಶೂಟಿಂಗ್ ಆರಂಭಿಸಲಿದ್ದೇವೆ. ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಸಿನಿಮಾ ಮೂಡಿಬರಲಿದೆ’ ಎಂದರು.
ನಾಯಕ ನಟ ಉತ್ತಮ್, ‘ಈ ಕಥೆ ಕೇಳಿ ನಾನು ರೋಮಾಂಚಿತನಾದೆ. ಮೊದಲ ಭೇಟಿಯಲ್ಲಿ ಈ ಚಿತ್ರಕ್ಕೆ ನಾನೇ ಹೀರೋ ಎಂದು ನಿರ್ಧರಿಸಿದ್ದರು’ ಎಂದರು. ನಾಯಕಿ ಅಮಿತಾ, ‘ಇದು ವೃತ್ತಿ ಜೀವನದ ನಾಲ್ಕನೇ ಸಿನಿಮಾ. ಪಾತ್ರ ಸವಾಲಿನಿಂದ ಕೂಡಿದೆ. ಚಿತ್ರೀಕರಣ ಪ್ರಾರಂಭಿಸುವ ಮೊದಲೇ ಅಮೆಜಾನ್ ಪ್ರೈಮ್ ಒಟಿಟಿ ಸಂಸ್ಥೆ ನಮ್ಮ ಸಿನಿಮಾ ಖರೀದಿಸಲು ಮುಂದೆ ಬಂದಿದೆ. ಇದರಿಂದ ಚಿತ್ರದ ಕಥೆ ಎಷ್ಟು ಗಟ್ಟಿಯಾಗಿದೆ ಎಂಬುದು ಗೊತ್ತಾಗುತ್ತದೆ’ ಎಂದರು.