ಬೆಂಗಳೂರು: ರಿಯಾಲಿಟಿ ಶೋಗಳ ಪೈಕಿ ಅತೀ ದೊಡ್ಡ ರಿಯಾಲಿಟಿ ಶೋ ಎಂದೇ ಖ್ಯಾತಿ ಗಳಿಸಿರುವ ಕನ್ನಡ ಬಿಗ್ ಬಾಸ್ (BiggBoss Kannada season 11) ಮನರಂಜನಾ ಕಾರ್ಯಕ್ರಮಕ್ಕೆ ಭಾನುವಾರವಷ್ಟೇ ಅದ್ಧೂರಿ ಚಾಲನೆ ಸಿಕ್ಕಿದ್ದು, ಬಿಗ್ ಮನೆಯೊಳಗೆ ಈ ಬಾರಿ 16 ಅಲ್ಲ ಬರೋಬ್ಬರಿ 17 ಘಟಾನುಘಟಿ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಈ ಹಿಂದಿನ ಸೀಸನ್ಗಳಲ್ಲಿ ಮೊದಲ ದಿನ ಅಥವಾ ಮೊದಲೆರೆಡು ದಿನಗಳು ಮನೆಗೆ ಹೊಂದಿಕೊಳ್ಳಲು ಸ್ಪರ್ಧಿಗಳು ಸಮಯ ತೆಗೆದುಕೊಳ್ಳುತ್ತಿದ್ದರು. ಆದ್ರೆ, 11ರ ಸೀಸನ್ನಲ್ಲಿ ಮಾತ್ರ ಆರಂಭದ ಮೊದಲ ದಿನವೇ ಕಿಚ್ಚಿನ ಆಟ ಶುರುವಾಗಿದೆ.
ತನ್ನ ಜೋರು ಮಾತಿನಿಂದಲೇ ಎದುರಾಳಿ ಬಾಯಿ ಮುಚ್ಚಿಸುವ ಪ್ರಯತ್ನ ಮಾಡುವ ಚೈತ್ರಾ ಕುಂದಾಪುರ, ಅದರಂತೆಯೇ ಮೊದಲ ದಿನದಂದು ನರಕನಿವಾಸಿಯಾಗಿ, ಸ್ವರ್ಗನಿವಾಸಿಗಳಿಗೆ ಟಕ್ಕರ್ ಕೊಟ್ಟಿದ್ದರು. ಮೊದಲ ದಿನವೇ ಲಾಯರ್ ಜಗದೀಶ್, ಐಶ್ವರ್ಯ ಶಿಂಧೋಗಿ, ಹಂಸಾ, ಯಮುನಾ, ಉಗ್ರಂ ಮಂಜು ಜತೆ ವಾಗ್ವಾದಕ್ಕಿಳಿದ ಚೈತ್ರಾ, ಇಂದು ತಮ್ಮ ನರಕನಿವಾಸಿಯ ಜತೆಯೇ ಜಟಾಪಟಿ ನಡೆಸಿದ್ದಾರೆ.
ಇಂದು ಬಿಡುಗಡೆಯಾದ ಪ್ರೋಮೋದಲ್ಲಿ ಹಾಸ್ಯ ಕಲಾವಿದೆ ಮಾನಸಾ ಆಡಿದ ಡೌಟ್ ಎಂಬ ಪದಕ್ಕೆ ಕೆರಳಿದ ಚೈತ್ರಾ, ಅನುಮಾನ ಎಂದು ಏಕೆ ಮಾತನಾಡುತ್ತೀರಿ? ನಾನು ಏನೇ ಮಾತನಾಡಿದರು ಹೀಗ್ಯಾಕೆ ಹೇಳ್ತೀರಿ? ನನ್ನದು ತಪ್ಪು ಎಂದು ನೀವ್ಯಾರು ಹೇಳಲು. ಅದರ ಕುರಿತು ಮಾತನಾಡಲು ಒಂದು ಯೋಗ್ಯತೆ ಇರಬೇಕು ಎಂದು ಮಾನಸಾಗೆ ಖಾರವಾಗಿ ಹೇಳಿದ್ದಾರೆ. ಅಸಲಿಗೆ ಮಾನಸಾ ಮತ್ತು ಚೈತ್ರಾ ನಡುವೆ ಕಿಚ್ಚು ಹತ್ತಿಕೊಳ್ಳಲು ಕಾರಣವೇನು? ಎಂಬುದನ್ನು ಇಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ.