ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿಗಳು ಇದೀಗ ಏಳನೇ ವಾರದ ಅಂತಿಮ ಘಟಕ್ಕೆ ತಲುಪಿದ್ದು, ಶನಿವಾರ ನಡೆದ ವಾರದ ಕಥೆ ಕಿಚ್ಚನ ಜತೆ ಸಂಚಿಕೆಯಲ್ಲಿ ಸುದೀಪ್ ಅವರಿಂದ ಪ್ರತಿವಾರದಂತೆ ಈ ವಾರವೂ ಕೂಡ ಹೆಚ್ಚಿನ ಕ್ಲಾಸ್ ಪಡೆದುಕೊಂಡಿದ್ದಾರೆ.
ವೀಕ್ಷಕರ ಪ್ರಕಾರ ಯಾರು ಹೇಗೆಲ್ಲಾ ಕಾಣಿಸುತ್ತಿದ್ದಾರೆ ಹೊರಗಡೆ ಎಂಬುದನ್ನು ಆಯಾ ಸ್ಪರ್ಧಿಗಳಿಗೆ ಸುದೀಪ್ ಸರಳವಾಗಿ ತಿಳಿ ಹೇಳಿದ್ದಾರೆ. ಈ ಮಧ್ಯೆ ಮೈಕಲ್ಗೆ ಕಿಚ್ಚನ ಚಪ್ಪಾಳೆ ಕೊಟ್ಟ ಕಿಚ್ಚ, ಅವರ ಪ್ರಯತ್ನವನ್ನು ಮೆಚ್ಚಿ ಮಾತನಾಡಿದ್ದಾರೆ.
ಶನಿವಾರದ ಕಿಚ್ಚನ ಪಂಚಾಯಿತಿಗಾಗಿ ಈ ಬಾರಿ ಹೆಚ್ಚಿನ ಕಾತರದಿಂದ ಕಾದಿದ್ದು ಮನೆಯ ಸದಸ್ಯರಿಗಿಂತ ವೀಕ್ಷಕರು ಎಂಬುದರಲ್ಲಿ ಅನುಮಾನವೇ ಇಲ್ಲ. ಕಾರಣ ಈ ವಾರದ ಆರಂಭದಿಂದಲೂ ಸ್ಪರ್ಧಿಗಳ ಮಧ್ಯೆ ಭಾರೀ ಜಟಾಪಟಿ, ಮಾತಿನ ಚಕಮಕಿ, ಹೊಡೆದಾಟ ಮಾಡಿಕೊಳ್ಳುವಷ್ಟು ಮಿತಿ ಮೀರಿದ ವರ್ತನೆ ವೀಕ್ಷಕರಲ್ಲಿ ಭಾರೀ ಗೊಂದಲ ಮೂಡಿಸಿತ್ತು. ಈ ವಿಚಾರಗಳ ಕುರಿತು ಯಾರದು ತಪ್ಪು? ಯಾರದು ಸರಿ? ಎಂಬ ಸಂಗತಿಗಳನ್ನು ಸುದೀಪ್ ಹೇಗೆ ತಿಳಿಸಲಿದ್ದಾರೆ ಎಂಬ ಕುತೂಹಲ ತೀವ್ರವಾಗಿತ್ತು.
ಇದನ್ನೂ ಓದಿ: ಹಿಂದು ಸಂಘಟನೆಗಳಲ್ಲಿ ಸಮನ್ವಯ ಕೊರತೆ; ವಿಶ್ವ ಹಿಂದು ಕಾಂಗ್ರೆಸ್ನಲ್ಲಿ ಆರೆಸ್ಸೆಸ್ ಮುಖಂಡ ಹೊಸಬಾಳೆ ಅಭಿಮತ
ಸ್ಪರ್ಧಿಗಳಿಗೆ ಕಿಚ್ಚನ ಕ್ಲಾಸ್ ಎಂದಿನಂತೆ ಈ ವಾರವೂ ಖಡಕ್ ಆಗಿಯೇ ಇತ್ತು. ಸ್ಪರ್ಧಿಗಳಿಗೆ ಕೆಲವು ಸಂಗತಿಗಳನ್ನು ಸಂದರ್ಭಗಳ ಸಹಿತ ವಿವರಿಸಿದ ಸುದೀಪ್, ಅವರವರ ತಪ್ಪನ್ನು ಸೂಕ್ತ ಕಾರಣಗಳ ಮೂಲಕ ತಿಳಿ ಹೇಳಿದರು.
ಇದೆಲ್ಲದರ ಮಧ್ಯೆಯೇ ಪ್ರತಿವಾರ ಒಬ್ಬ ಸ್ಪರ್ಧಿಗೆ ತಮ್ಮ ಕಿಚ್ಚನ ಚಪ್ಪಾಳೆ ಕೊಡುವಂತೆ ಈ ವಾರ ಮೈಕಲ್ಗೆ ತಮ್ಮ ಚಪ್ಪಾಳೆಯನ್ನು ಸುದೀಪ್ ಕೊಟ್ಟರು. ಇದಕ್ಕೆ ಕಾರಣ ತಿಳಿಸಿದ ಕಿಚ್ಚ, ಟಾಸ್ಕ್ ವೇಳೆ ತೆಗೆದುಕೊಂಡ ನಿರ್ಧಾರ, ಆಟವಾಡಿದ ವೈಖರಿ ಮತ್ತು ಹೆಚ್ಚಾಗಿ ಮನೆಯೊಳಗೆ ಇಂಗ್ಲಿಷ್ ಬದಲು ಕನ್ನಡ ಪದಗಳ ಬಳಕೆಗೆ ಕೊಡುತ್ತಿರುವ ಆದ್ಯತೆ ನನಗೆ ಇಷ್ಟವಾಯಿತು ಎಂದರು.
ಇದನ್ನೂ ಓದಿ: ಇಂದು ಭಾರತ-ಆಸೀಸ್ 2ನೇ ಟಿ20: ಜಯದ ಹುಮ್ಮಸ್ಸಿನಲ್ಲಿ ಸೂರ್ಯ ಕುಮಾರ್ ಸಾರಥ್ಯದ ಯುವ ಪಡೆ, ಪಂದ್ಯಕ್ಕೆ ಮಳೆ ಭೀತಿ
'ಆಪರ್ಚುನಿಸ್ಟ್' ಎಂಬ ಆಂಗ್ಲ ಪದಕ್ಕೆ 'ಅವಕಾಶವಾದಿ' ಎಂಬ ಕನ್ನಡ ಪದವನ್ನೇ ಹುಡುಕಿ ಹೇಳಿದ್ದು, ನನಗೆ ಹೆಚ್ಚು ಖುಷಿ ತಂದಿತು. ಕನ್ನಡ ಮಾತನಾಡುವ ನಿಮ್ಮ ಈ ಪ್ರಯತ್ನಕ್ಕೆ ನನ್ನ ಮೆಚ್ಚುಗೆ ಇದೆ ಎಂದು ಸುದೀಪ್ ತಿಳಿಸಿದರು.