ನ್ಯೂಸ್

BBKS10: 'ಬಿಗ್'​ ಮನೆಯಿಂದ ಗೌರೀಶ್​ ಅಕ್ಕಿ ಹೊರಗೆ!

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ ಹತ್ತನೇ ಸೀಸನ್‌ನ ವಾರಾಂತ್ಯದ ಎರಡನೇ ಪಂಚಾಯಿತಿ ಕಟ್ಟೆಯನ್ನು ಸ್ಯಾಂಡಲ್​ವುಡ್​ನ ಅಭಿನಯ ಚಕ್ರವರ್ತಿ, ನಟ ಕಿಚ್ಚ ಸುದೀಪ್ ಯಶಸ್ವಿಯಾಗಿ ನಡೆಸಿಕೊಟ್ಟಿದ್ದು, ತಮ್ಮ ಖಡಕ್ ಮಾತಲ್ಲೇ ಸ್ಪರ್ಧಿಗಳ ತಪ್ಪುಗಳನ್ನು ತಿಳಿ ಹೇಳಿ ಅವರವರ ಭಾವಕ್ಕೆ ಬಿಟ್ಟರು. ಭಾನುವಾರ ಸೂಪರ್​ ಸಂಡೆ ವಿತ್​ ಸುದೀಪ ಸಂಚಿಕೆಯಲ್ಲಿ ನಾಮಿನೇಟ್​ ಆಗಿದ್ದ ನಾಲ್ವರ ಪೈಕಿ ಇದೀಗ ಗೌರೀಶ್ ಅಕ್ಕಿ ​ಮನೆಯಿಂದ ಹೊರನಡೆದಿದ್ದಾರೆ.

ಸೂಪರ್​ ಸಂಡೆ ವಿತ್​ ಸುದೀಪ ಸಂಚಿಕೆಯಲ್ಲಿ ಎಂದಿನಂತೆ ಸ್ಟೈಲಿಶ್​ ಆಗಿ ಬಿಳಿ ಬಣ್ಣದ ಉಡುಗೆ ತೊಟ್ಟು ಮಿಂಚಿದ ನಿರೂಪಕ ಸುದೀಪ್, ಮನೆಯ ಸದಸ್ಯರ ನಡುವೆ ತಮಾಷೆಯ ಮಾತುಗಳನ್ನು ಪ್ರಾರಂಭಿಸಿದರು. ತುಕಾಲಿ ಸಂತೋಷ್​, ವರ್ತೂರು ಸಂತೋಷ್​ ಹಾಗೂ ವಾರದ ಕ್ಯಾಪ್ಟನ್​ ರಕ್ಷಕ್​ ಮೂವರ ಒಂದು ಗುಂಪಿನ ಬಗ್ಗೆ ತಿಳಿ ಹಾಸ್ಯ ಮಾಡಿದ ಕಿಚ್ಚ ಒಂದಷ್ಟು ಪ್ರಸಂಗಗಳನ್ನು ಮನೆ ಮಂದಿಯೊಂದಿಗೆ ಮೆಲುಕು ಹಾಕಿದರು.

ನಗೆ ಚಟಾಕಿಯ ಮಧ್ಯೆಯೇ ಸ್ಪರ್ಧಿಗಳಿಗೆ ಆಯಾ ಗಾದೆಗಳು ಯಾರಿಗೆ, ಯಾಕೆ ಅನ್ವಯವಾಗುತ್ತದೆ ಎಂದು ಕೊರಳಿಗೆ ಹಾಕಿ, ಕಾರಣ ಹೇಳಿ ಎಂದು ಸುದೀಪ್ ಹೇಳಿದರು. ಇದರ ಬೆನ್ನಲ್ಲೇ ಅವರವರ ಅನಿಸಿಕೆ, ಅಭಿಪ್ರಾಯಕ್ಕೆ ತಕ್ಕಂತೆ ಒಂದೊಂದು ಗಾದೆ ಸೂಚಿಸಲ್ಪಟ್ಟವರ ಕೊರಳ ಸೇರಿತು. ಕೆಲವರು ತಮ್ಮ ಕಾರಣವನ್ನು ಸಮರ್ಥಿಸಿಕೊಂಡರು, ಇನ್ನೂ ಕೆಲವರು ಅದನ್ನು ವಿರೋಧಿಸಿ ತಮ್ಮ ಅಸಮಾಧಾನ ಹೊರಹಾಕಿದರು.

ಇದರ ನಡುವೆಯೇ ಸುದೀಪ್​ ಈ ವಾರ ಎಲಿಮಿನೇಟ್​ ಆಗಲು ನಾಮಿನೇಟ್​ ಆಗಿದ್ದ ಭಾಗ್ಯಶ್ರೀ, ಸಂಗೀತಾ, ತನಿಶಾ ಮತ್ತು ಗೌರೀಶ್ ಅಕ್ಕಿ ಪೈಕಿ ಮೊದಲು ಸಂಗೀತಾ ಸೇಫ್ ಮಾಡಿದರು. ತದನಂತರ ತನಿಶಾ ಉಳಿದುಕೊಂಡರು, ಭಾಗ್ಯಶ್ರೀ ಮತ್ತು ಗೌರೀಶ್​ ನಡುವೆ ಗೌರೀಶ್​ ಮನೆಯಿಂದ ಔಟ್​ ಆದ ಸ್ಪರ್ಧಿ ಎಂದು ಕಿಚ್ಚ ಸುದೀಪ್​ ಘೋಷಿಸಿದರು.

ದಿನದ 24 ಗಂಟೆಗಳ ಲೈವ್​ ಸ್ಟ್ರೀಮಿಂಗ್​ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ